ರೈತರಿಗೆ ಸ್ಪಂದಿಸದ ಸರ್ಕಾರ: ಯಡಿಯೂರಪ್ಪ

ಸಿದ್ದರಾಮಯ್ಯನವರೇ, ರೈತರು ಆತಂಕದಲ್ಲಿರುವಾಗ ಲಜ್ಜೆಗೇಡಿತನ ಪ್ರದರ್ಶಿಸುತ್ತಿದ್ದೀರಾ? ನಿಮ್ಮ ಸರ್ಕಾರ ಬದುಕಿದೆಯೋ, ಸತ್ತಿದೆಯೋ? ಗೊತ್ತಾಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹರಿಹಾಯ್ದಿದ್ದಾರೆ...
ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಿಎಸ್ ಯಡಿಯೂರಪ್ಪ (ಸಂಗ್ರಹ ಚಿತ್ರ)
ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಿಎಸ್ ಯಡಿಯೂರಪ್ಪ (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ಸಿದ್ದರಾಮಯ್ಯನವರೇ, ರೈತರು ಆತಂಕದಲ್ಲಿರುವಾಗ ಲಜ್ಜೆಗೇಡಿತನ ಪ್ರದರ್ಶಿಸುತ್ತಿದ್ದೀರಾ? ನಿಮ್ಮ ಸರ್ಕಾರ ಬದುಕಿದೆಯೋ, ಸತ್ತಿದೆಯೋ? ಗೊತ್ತಾಗುತ್ತಿಲ್ಲ ಎಂದು ಮಾಜಿ  ಮುಖ್ಯಮಂತ್ರಿ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹರಿಹಾಯ್ದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರದಿಂದ ರೈತರು ತತ್ತರಿಸುತ್ತಿರುವಾಗ ರೈತರ ಸಂಕಟಕ್ಕೆ ನೆರವಾಗುವ ಯಾವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೀರಾ ಹೇಳಿ? ರೈತರ ಸಂಕಟ  ಆಲಿಸಲು ನಿಮಗೆ ಪುರಸೊತ್ತಿಲ್ಲ, ಆಸಕ್ತಿಯೂ ಇಲ್ಲ ಎಂದು ಮುಖ್ಯಮಂತ್ರಿಯವರನ್ನು ತರಾಟೆಗೆ ತೆಗೆದುಕೊಂಡರು. ಕಂದಾಯ ಮತ್ತು ಕೃಷಿ ಸಚಿವರು ತಮ್ಮ ಕ್ಷೇತ್ರ ಬಿಟ್ಟು ಎಲ್ಲೂ ಹೋಗಿಲ್ಲ.  ನೀರಾವರಿ ಸಚಿವರು ಎಲ್ಲಿದ್ದಾರೋ ಗೊತ್ತಿಲ್ಲ ಎಂದು ಟೀಕಿಸಿದ ಅವರು, ಮೂರ್ನಾಲ್ಕು ಮಂತ್ರಿಗಳು ನಿತ್ಯ ವಿಧಾನಸೌಧಕ್ಕೆ ಬಂದು ಜನರ ಕಷ್ಟ ಸುಖ ವಿಚಾರಿಸುತ್ತಾರೇನು? ಮುಖ್ಯಮಂತ್ರಿಯಾಗಿ  ನೀವು ಮನೆ, ಬೆಂಗಳೂರು ಮೈಸೂರು ನಡುವೆ ಓಡಾಡಿಕೊಂಡಿದ್ದೀರ. ಇಡೀ ರಾಜ್ಯ ಬರದಿಂದ ತತ್ತರಿಸುತ್ತಿರುವಾಗ ಜನರ ಸಂಕಟ ಆಲಿಸಿದ್ದೀರೇನು ಎಂದು ಪ್ರಶ್ನಿಸಿದರು.

ಮುಖ್ಯಕಾರ್ಯದರ್ಶಿ ಇದ್ದಾನೇನು? ಎಂದು ಏಕ ವಚನದಲ್ಲಿ ಪ್ರಶ್ನಿಸಿದ ಯಡಿಯೂರಪ್ಪ, ಸರ್ಕಾರದ ಜಿಲ್ಲಾ ಕಾರ್ಯದರ್ಶಿಗಳು ಸಭೆ ಮಾಡಿ ಬರದ ಬಗ್ಗೆ ವರದಿ ಪಡೆದುಕೊಂಡಿದ್ದಾರೇನು? ಎಂದು ಪ್ರಶ್ನಿಸಿದರು.

ಸ್ಪೀಕರ್ ಭೇಟಿಗೆ ನಿರ್ಧಾರ
ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ವಿಶೇಷ ಅಧಿವೇಶನ ಕರೆಯುವ ಸಂಬಂಧ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿಯಾದ ಬಗ್ಗೆ ಬಿಜೆಪಿ ಕೋರ್ ಕಮಿಟಿ ಚರ್ಚೆ ನಡೆಸಿದೆ. ಭಾನುವಾರ ನಡೆದ  ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ವಿಚಾರ ವಿನಿಮಯ ನಡೆದಿದೆ. ವಿಶೇಷ ಅಧಿವೇಶನದಲ್ಲಿ ಲೋಕಾಯುಕ್ತ ಪದಚ್ಯುತಿಗೆ ಪಟ್ಟು ಹಿಡಿಯದೆ ಬರ ಕುರಿತಾಗಿ ಚರ್ಚಿಸಲು ಅವಕಾಶ  ಮಾಡಿಕೊಡುವಂತೆ ಸ್ಪೀಕರ್ ಗೆ ಮನವರಿಕೆ ಮಾಡಿಕೊಡಬಹುದೆಂಬ ಅಭಿಪ್ರಾಯ ವ್ಯಕ್ತವಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com