

ಪಾಟ್ನಾ: ಬಿಹಾರ ಚುನಾವಣಾ ಪ್ರಚಾರದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಹ ನಿರಾಕರಿಸಿದ್ದಾರೆ.
ಈ ಹಿಂದೆ ಆರ್.ಜೆ.ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಸಹ ರಾಹುಲ್ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲು ನಿರಾಕರಿಸಿದ್ದರು, ಈಗ ನಿತೀಶ್ ಕುಮಾರ್ ಸರದಿ. ಬಿಹಾರದ ಚಂಪಾರಣ್ ಜಿಲ್ಲೆಯಲ್ಲಿ ಸೆ.19 ಕ್ಕೆ ರಾಹುಲ್ ಗಾಂಧಿ ರ್ಯಾಲಿ ನಿಗದಿಯಾಗಿದ್ದು, ಸಮಾವೇಶದಲ್ಲಿ ನಿತೀಶ್ ಕುಮಾರ್ ಭಾಗವಹಿಸಲಿದ್ದಾರೆ ಎಂದು ಜೆಡಿಯು ಸ್ಪಷ್ಟಪಡಿಸಿತ್ತು. ಆದರೆ ಈಗ ನಿತೀಶ್ ಕುಮಾರ್ ಬರಲು ಸಾಧ್ಯವಾಗುವುದಿಲ್ಲ ಎಂದು ಹೇಳಿಕೆ ನೀಡಿದೆ.
ಪ್ರಥಮ ಹಂತದ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಬೆಕಿರುವ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ರಾಹುಲ್ ಗಾಂಧಿ ಅವರೊಂದಿಗೆ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಜೆಡಿಯು ಹೇಳಿದೆ. ಲಾಲು ಪ್ರಸಾದ್ ಸಹ ರಾಹುಲ್ ಗಾಂಧಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿದ್ದರು. ತಮ್ಮ ಬದಲು ತಮ್ಮ ಕಿರಿಯ ಪುತ್ರ ತೇಜಸ್ವಿ ಯಾದವ್ ರಾಹುಲ್ ಗಾಂಧಿಯೊಂದಿಗೆ ಭಾಗವಹಿಸಲಿದ್ದಾರೆ ಎಂದು ಹೇಳಿದ್ದರು.