

ನವದೆಹಲಿ: ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡುವುದು ಇನ್ನೂ ಖಚಿತವಾಗದೇ ಇದ್ದರೂ ಸಚಿವ ಸ್ಥಾನದ ಆಕಾಂಕ್ಷಿಗಳ ದಂಡೇ ದೆಹಲಿಯಲ್ಲಿ ಬೀಡು ಬಿಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಸಾಂತ್ಯಕ್ಕೆ ಸಂಪುಟ ವಿಸ್ತರಣೆ ಮಾಡುತ್ತಾರೆಂಬ ವದಂತಿ ಹಿನ್ನೆಲೆಯಲ್ಲಿ ದೆಹಲಿಗೆ ಆಗಮಿಸುತ್ತಿರುವವರ ಸಚಿವಾಕಾಂಕ್ಷಿಗಳ ಸಂಖ್ಯೆ ಏರುತ್ತಲೇ ಇದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ಬರುತ್ತಿರುವುದು ನೀತಿ ಆಯೋಗದ ಸಭೆಯಲ್ಲಿ ಸ್ವಚ್ಛಭಾರತ ಅಭಿಯಾನದ ಉಪಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು. ಬುಧವಾರ 11 ಗಂಟೆಗೆ ಆರಂಭವಾಗುವ ಈ ಸಭೆ ದಿನವಿಡೀ ನಡೆಯಲಿದೆ. ಸಿದ್ದರಾಮಯ್ಯ ಸಂಜೆ 5ರವರೆಗೂ ಪಾಲ್ಗೊಳ್ಳಲಿದ್ದಾರೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈ ಸಭೆ ಅಧ್ಯಕ್ಷತೆ ವಹಿಸುತ್ತಾರೆ. ಗುರುವಾರ ಮುಖ್ಯಮಂತ್ರಿ ಕೇಂದ್ರ ನಗರಾಭಿವದ್ಧಿ ಸಚಿವ ವೆಂಕಯ್ಯನಾಯ್ಡು ಮತ್ತು ರೈಲ್ವೆ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿ ಮಾಡಿ ರಾಜ್ಯದ ವಿವಿಧ ಯೋಜನೆಗಳಿಗೆ ತ್ವರಿತ ಮಂಜೂರಾತಿ ನೀಡುವಂತೆ ಹಾಗೂ ಈಗಾಗಲೇ ಮಂಜೂರಾಗಿರುವ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಲಿದ್ದಾರೆ.
ನಂತರ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್‍ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ. ಅದಕ್ಕೂ ಮುನ್ನ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಜತೆ ಸಮಾಲೋಚಿಸಲಿದ್ದಾರೆ. ಚುನಾವಣೆಯಲ್ಲೂ ಸೋತರೂ ಬಿಬಿಎಂಪಿ ಮೇಯರ್ ಗಿರಿ ದಕ್ಕಿಸಿಕೊಂಡ ನಂತರದ ರಾಜ್ಯ ರಾಜಕೀಯ ಬೆಳವಣಿಗೆಗಳು, ರಾಜ್ಯದಲ್ಲಿನ ಬರ ಪರಿಸ್ಥಿತಿ ಮತ್ತು ಸರ್ಕಾರ ಕೈಗೊಂಡಿರುವ ಪರಿಹಾರ ಕಾರ್ಯಕ್ರಮಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋನಿಯಾಗಾಂಧಿ, ರಾಹುಲ್‍ಗಾಂಧಿ ಅವರಿಗೆ ವಿವರಿಸಲಿದ್ದಾರೆ. ಈ ಭೇಟಿ ವೇಳೆ ಅವರು ಸಂಪುಟ ವಿಸ್ತರಣೆ ಕುರಿತಂತೆ ಚರ್ಚಿಸುವ ಸಾಧ್ಯತೆ ಇಲ್ಲ. ಒಂದು ವೇಳೆ ಚರ್ಚಿಸಿದರೂ ಮಾಸಾಂತ್ಯದೊಳಗೆ ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ.
ಆಕಾಂಕ್ಷಿಗಳು
ಮುಖ್ಯ ಸಚೇತಕ ಅಶೋಕ್ ಪಟ್ಟಣ್, ಶಾಸಕ ರಾದ ಶಿವಮೂರ್ತಿ, ಬಿ.ಬಿ. ಚಿಮ್ಮನಕಟ್ಟಿ, ಕೆ.ಬಿ.ಕೋಳಿವಾಡ, ಅರಕಲಗೂಡು ಮಂಜು, ಮನೋಹರ್ ತಹಶೀಲ್ದಾರ್ ಮತ್ತಿತರು ಈಗಾಗಲೇ ಬೀಡು ಬಿಟ್ಟಿದ್ದಾರೆ. ಹಲವರು ತಡರಾತ್ರಿ ಆಗಮಿಸಿದರು. ಮುಖ್ಯಮಂತ್ರಿಗಳ ಜತೆ ಬುಧವಾರ ಮತ್ತಷ್ಟು ಆಕಾಂಕ್ಷಿಗಳು ದೆಹಲಿಗೆ ಆಗಮಿಸಲಿದ್ದಾರೆ.