

ಬೆಂಗಳೂರು: ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡು 2ನೇ ಇನ್ನಿಂಗ್ಸ್ ಆರಂಭಿಸಿರುವ ಮಾಜಿ ಸಿಎಂ ಎಸ್.ಎಂ ಕೃಷ್ಣ ನಂಜನಗೂಡು. ಗುಂಡ್ಲುಪೇಟೆ ವಿಧಾನಸಭೆ ಉಪ ಚುನಾವಣಾ ಪ್ರಚಾರದಲ್ಲಿ ಪಾಲ್ಗೋಳ್ಳಲಿದ್ದಾರೆ
ಸೋಮವಾರ ರೋಡ್ ಶೋ ನಲ್ಲಿ ಭಾಗವಹಿಸರುವ ಎಸ್ ಎಂಕೆ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ಸೋಮವಾರ ಬೆಳಗ್ಗೆ ಮೈಸೂರಿಗೆ ಆಗಮಿಸಲಿರುವ ಅವರು.ಇತರ ಬಿಜೆಪಿ ನಾಯಕರುಗಳ ಜೊತೆ, ನಂಜನಗೂಡು ಮತ್ತು ಗುಂಡ್ಲುಪೇಟೆಗಳಲ್ಲಿ ಮತಯಾಚಿಸಲಿದ್ದಾರೆ ಎಂದು ಮಾಜಿ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಎಸ್ ಎಂ ಕೃಷ್ಣ ಬಿಜೆಪಿ ಸೇರ್ಪಡೆಯಿಂದಾಗಿ ಪಕ್ಷ ಮತ್ತಷ್ಟು ಬಲವರ್ಧನೆಯಾಗಲಿದೆ. ಕೇವಲ ಉಪ ಚುನಾವಣೆ ಮಾತ್ರವಲ್ಲ, 2018ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲೂ ಉತ್ತಮ ಫಲಿತಾಂಶ ಬರಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಕಾಂಗ್ರೆಸ್‌ನಲ್ಲಿ ದಲಿತ ಮುಖ್ಯಮಂತ್ರಿ ಕೂಗು ಇರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತ ಮುಖಂಡರನ್ನೆಲ್ಲಾ ಮೂಲೆಗುಂಪು ಮಾಡುತ್ತಿದ್ದಾರೆ. ಆ ಪಕ್ಷದಲ್ಲಿ ಶ್ರೀನಿವಾಸ ಪ್ರಸಾದ್ ಮತ್ತು ಪರಮೇಶ್ವರ್ ದಲಿತ ವರ್ಗಕ್ಕೆ ಸೇರಿದ ಪ್ರಭಾವಿ ನಾಯಕರು. ಶ್ರೀನಿವಾಸ ಪ್ರಸಾದ್ ಅವರನ್ನು ಇಷ್ಟು ವರ್ಷ ದುಡಿಸಿಕೊಂಡು ಈಗಾಗಲೇ ಹೊರಹಾಕಲಾಗಿದೆ. ಪರಮೇಶ್ವರ್‌ಗೂ ಅದೇ ಸ್ಥಿತಿ ಬರಲಿದೆ’ ಎಂದರು.
ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಗೆ ರಾಜ್ಯ ಸರ್ಕಾರ ಆಡಳಿತ ಯಂತ್ರ ದುರುಪಯೋಗಪಡಿಸಿಕೊಂಡಿದೆ. ಹಣ, ಹೆಂಡ ಹಂಚುತ್ತಿರುವುದು ಖಂಡನೀಯ. ಜನರು ಈಗಾಗಲೇ ಕಾಂಗ್ರೆಸ್ ಅನ್ನು ತಿರಸ್ಕಾರ ಮಾಡಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಚಿವ ಅಂಬರೀಷ್ ಮತ್ತು ಮಾಜಿ ಸಂಸದೆ ರಮ್ಯಾ ಬಿಜೆಪಿ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಲು ಅಶೋಕ್ ನಿರಾಕರಿಸಿದರು.