ಬೆಂಗಳೂರು: ಸಚಿವರುಗಳಾದ ಡಿ.ಕೆ ಶಿವಕುಮಾರ್ ಮತ್ತು ರಮೇಶ್ ಜಾರಕಿಹೊಳಿ ಅವರು ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿ ರಾಜ್ಯ ಬಿಜೆಪಿ ಘಟಕ ಆಗಸ್ಟ್ 18 ರಂದು ಪ್ರತಿಭಟನೆ ನಡೆಸಲಿದೆ.
ಬುಧವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಆಗಸ್ಟ್ 18 ರಂದು ಫ್ರೀಡಂ ಪಾರ್ಕ್ ನಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಆದಾಯ ತೆರಿಗೆ ಇಲಾಖೆ ದಾಳಿಗೆ ಗುರಿಯಾಗಿರುವ ಶಿವಕುಮಾರ್ ಮತ್ತು ರಮೇಶ್ ಜಾರಕಿಹೊಳಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಮುಂದಿನ ಒಂದು ವಾರದ ಕಾಲ ವಿಧಾನಸೌಧ ಸುತ್ತಮುತ್ತ ಪ್ರತಿಭಟನೆ ಹಾಗೂ ರ್ಯಾಲಿಗಳನ್ನು ನಡೆಸುವುದಾಗಿ ಹೇಳಿದ್ದಾರೆ.
ಇಬ್ಬರು ಸಚಿವರು ಸೇರಿದಂತೆ ಭ್ರಷ್ಟಾಚಾರ ನಡೆಸಿರುವ ಇನ್ನಿತರ ಸಚಿವರುಗಳು ಅವರ ಮಾಹಿತಿಯನ್ನು ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದಕ್ಕೂ ಮುನ್ನ ಬೆಂಗಳೂರಿನ ಮಳೆ ಪೀಡಿತ ಪ್ರದೇಶಗಳಿಗೆ ಯಡಿಯೂರಪ್ಪ ಮತ್ತು ಆರ್. ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚರಂಡಿಗಳಲ್ಲಿರುವ ಹೂಳು ತೆಗೆಯಲು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು.