ಬೆಂಗಳೂರು: ರಾಜ್ಯದ ರೈತರ ಸಾಲ ಮನ್ನಾಕ್ಕೆ ಪಣ ತೊಟ್ಟಿದ್ದೇ ನಾನು. ನಮ್ಮ ಹೋರಾಟಕ್ಕೆ ಮಣಿದು ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ಆದರೆ 50 ಸಾವಿರ ಸಾಲ ಮನ್ನಾ ಸಾಕಾಗುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಹಕಾರಿ ಬ್ಯಾಂಕ್ ಗಳ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ ಬಳಿಕ ಈ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಿಎಂ, 50 ಸಾವಿರ ರುಪಾಯಿ ಸಾಲ ಮನ್ನಾ ವೈಜ್ಞಾನಿಕವಲ್ಲ. ಕೂಡಲೇ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಸಾಲದ ಮಿತಿಯನ್ನು 50 ಸಾವಿರದಿಂದ 1 ಲಕ್ಷಕ್ಕೆ ಹೆಚ್ಚಿಸಬೇಕು. ರಾಜ್ಯದಲ್ಲಿ ಅವಧಿಗೆ ಮುನ್ನವೇ ಚುನಾವಣೆ ನಡೆಯುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಸಾಲ ಮನ್ನಾ ಮಾಡಲಾಗಿದೆ ಎಂದು ಬಿಎಸ್ ವೈ ತಿರುಗೇಟು ನೀಡಿದರು.
ದೇಶದ ಇತರ ರಾಜ್ಯಗಳಲ್ಲಿ 1-2 ಲಕ್ಷ ರುಪಾಯಿಗಳವರೆಗೆ ರೈತರ ಸಾಲ ಮನ್ನಾ ಮಾಡಲಾಗಿದೆ. ರಾಜ್ಯ ಸರಕಾರವೂ ಕೂಡಾ ಸಂಪೂರ್ಣ ರೈತರ ಸಾಲ ಮನ್ನಾ ಮಾಡಬೇಕು ಎಂದು ಯಡಿಯೂರಪ್ಪ ಒತ್ತಾಯಿಸಿದ್ದಾರೆ.