

ಮೈಸೂರು: ಆಡಳಿತ ಪಕ್ಷಕ್ಕೆ ಪ್ರತಿಷ್ಠೆಯ ವಿಷಯವಾಗಿರುವ ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನ ಸಭೆ ಉಪಚುನಾವಣೆ ಪ್ರಚಾರ ಕಣಕ್ಕೆ ಸಿಎಂ ಸಿದ್ದರಾಮಯ್ಯ ಪ್ರವೇಶಿಸಿದ್ದಾರೆ.
ದಲಿತ ಮತ್ತು ಲಿಂಗಾಯಿತ ಪ್ರಾಬಲ್ಯವಿರುವ 2 ಕ್ಷೇತ್ರಗಳ ಗ್ರಾಮಗಳಲ್ಲಿ 8 ದಿನಗಳ ಕಾಲ ಪ್ರಚಾರ ನಡೆಸಲು ಸಿಎಂ ತೀರ್ಮಾನಿಸಿದ್ದಾರೆ, ಅಹಿಂದ ಮುಖಂಡರೆಂದು ಗುರುತಿಸಿಕೊಂಡಿರುವ ಸಿದ್ದರಾಮಯ್ಯ, ದೇವನೂರು ಮಠಕ್ಕೆ ಮೊದಲು ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದು ಚುನಾವಣೆ ಪ್ರಚಾರ ಆರಂಭಿಸಿದ್ದಾರೆ.
ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮತ್ತು ಕಳೆದ ಒಂದು ವಾರದಿಂದ ಹಲವು ರಾಜ್ಯ ನಾಯಕರ ಜೊತೆ ಎರಡು ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
2018ರ ವಿಧಾನ ಸಭೆ ಚುನಾವಣೆಯ ಟ್ರೆಂಡ್ ಸೆಟ್ಟರ್ ಎಂದೇ ಪರಿಗಣಿತವಾಗಿರುವ ಉಪ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಆಡಳಿತ ಪಕ್ಷ ಕಾಂಗ್ರೆಸ್ ಹವಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ಸಂಪುಟದ ಡಜನ್ ಗಟ್ಟಲೇ ಸಚಿವರನ್ನು ಉಪಚುನಾವಣಾ ಪ್ರಚಾರಕ್ಕಾಗಿ ನಿಯೋಜಿಸಿದ್ದಾರೆ.
ಎರಡು ಕ್ಷೇತ್ರಗಳಲ್ಲೂ ತಲಾ ನಾಲ್ಕು ನಾಲ್ಕು ದಿನಗಳ ಕಾಲ ಚುನಾವಣಾ ಪ್ರಚಾರ ನಡೆಸಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಉಪ್ಪಾರ ಸುಮದಾಯದ ಪ್ರಾಬಲ್ಯವಿರುವ ಗೊಲ್ಲೂರಿನಿಂದ ಸಿಎಂ ಪ್ರಚಾರ ಆರಂಭಿಸಿದ್ದಾರೆ. ವೀರಶೈವ ಸಮುದಾಯದ ಪ್ರಾಬಲ್ಯವಿರುವ ಬದನವಾಳು, ದೇವನೂರು, ನಗರಾಳೆ, ಗಳಲ್ಲು ಸಿಎಂ ಪ್ರಚಾರ ನಡೆಸಲಿದ್ದಾರೆ.
ಬಹಿರಂಗ ಪ್ರಚಾರದ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಯಾರ ಹೆಸರನ್ನು ನಮೂದಿಸದೇ ಪರೋಕ್ಷವಾಗಿ ಯಡಿಯೂರಪ್ಪ ಮತ್ತು ಶ್ರೀನಿವಾಸ್ ಪ್ರಸಾದ್ ವಿರುದ್ಧ ವಾಗ್ದಾಳಿ ನಡೆಸಿದರು.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ ಅವರೊಬ್ಬ ಮಹಿಳಾ ಮೀಸಲಾತಿ ವಿರೋಧಿ ಎಂದು ಆರೋಪಿಸಿದರು.
ಮುಸ್ಲಿಮರಿಗಾಗಿ ತಮ್ಮ ಬಜೆಟ್ ನಲ್ಲಿ 2,700 ಕೋಟಿ ಹಣವನ್ನು ಮೀಸಲಿಟ್ಟಿರುವುದಾಗಿ ತಿಳಿಸಿದರು. ಈ ಹಿಂದಿನ ಚುನಾವಣೆಗಳಲ್ಲಿ ಮತದಾರರಿಗೆ ಲಂಚ ನೀಡುತ್ತಿದ್ದ ಬಿಜೆಪಿ ಈ ಚುನಾವಣೆಯಲ್ಲಿ ಅದೇ ಕೆಲಸವನ್ನು ಮುಂದುವರಿಸಿಕೊಂಡು ಬಂದಿದೆ ಎಂದು ಆರೋಪಿಸಿದರು.
ಉಪ ಚುನಾವಣೆ ಇಬ್ಬರು ವ್ಯಕ್ತಿಗಳ ಮಧ್ಯೆ ನಡೆಯುತ್ತಿಲ್ಲ, ಬದಲಾಗಿ ಅದು ಜಾತ್ಯಾತೀತ ವಾದ ಮತ್ತು ಕೋಮುವಾದಗಳ ನಡುವಿನ ಚುನಾವಣೆಯಾಗಿದೆ ಎಂದು ಹೇಳಿದ್ದಾರೆ. ಅಭಿವೃದ್ಧಿಗಾಗಿ ಜನ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಅವರು ಮನವಿ ಮಾಡಿದ್ದಾರೆ.