ಕಲಬುರಗಿ: ರಾಜ್ಯ ರಾಜಕಾರಣಕ್ಕೆ ಸಂಸದ ಮಲ್ಲಿಕಾರ್ಜುನ ಖರ್ಗೆ ವಾಪಸಾಗುತ್ತಾರೆ ಎಂಬ ಎಲ್ಲಾ ಊಹಾಪೋಹಗಳಿಗೆ ಸ್ವತಃ ಅವರೇ ತೆರೆ ಎಳೆದಿದ್ದಾರೆ.
ಗುರುವಾರ ಕಬುರಗಿಯಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್ ನ ಶಿಸ್ತಿನ ಸಿಪಾಯಿ, ನಾನು ಇದುವರೆಗೆ ಯಾವುದೇ ಹುದ್ದೆ ಬೇಕೆಂದು ಲಾಬಿ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ, ಕಾಂಗ್ರೆಸ್ ಹೈಕಮಾಂಡ್ ನ ನಿರ್ದೇಶನಗಳನ್ನು ನಾನು ಪಾಲಿಸುತ್ತೇನೆ ಎಂದು ಹೇಳಿದ್ದಾರೆ.
ಅಧ್ಯಕ್ಷರ ನೇಮಕ ಕುರಿತು ಇದುವರೆಗೂ ಹೈ ಕಮಾಂಡ್ ನನ್ನನ್ನು ಕೇಳಿಲ್ಲ, ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಕಾತಿಗೆ ಸಂಬಂಧಿಸಿದಂತೆ ಹೈಕಮಾಂಡ್ ನನ್ನ ಅಭಿಪ್ರಾಯ ಕೇಳಿದರೇ ಹೇಳಬಹುದು ಎಂದು ತಿಳಿಸಿದ್ದಾರೆ. ಮುಂದಿನ ಬಾರಿಯೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದಾರೆ.
ಇನ್ನೂ ಈ ಸಂಬಂಧ ಪ್ರತಿಕ್ರಿಯಿಸಿರುವ ಗೃಹ ಸಚಿವ ಜಿ. ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕವಾದರೇ ಪಕ್ಷಕ್ಕೆ ಮತ್ತಷ್ಟು ಬಲ ಬರುತ್ತದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಗೃಹ ಸಚಿವರ ಹುದ್ದೆ ಎರಡನ್ನು ನಿಭಾಯಿಸುವ ಸಾಮರ್ಥ್ಯ ಅವರಿಗಿದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.