ಚಿತ್ರದುರ್ಗ: ಬಿಜೆಪಿ ರಾಜ್ಯದಲ್ಲಿ ಬರ ಪ್ರವಾಸ ಕೈಗೊಂಡಿದ್ದು ಎರಡನೇ ದಿನ ಚಿತ್ರದುರ್ಗ ಜಿಲ್ಲೆಯ ಹಲವೆಡೆ ನಡೆಯಿತು. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ದಲಿತ ಮನೆಯಲ್ಲಿ ಹೊಟೇಲ್ ಊಟ ಸೇವಿಸಿ ಇದೀಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದಾರೆ.
ಚಿತ್ರದುರ್ಗದ ರುದ್ರಮುನಿ ಎಂಬುವರ ಮನೆಯಲ್ಲಿ ಬಿಜೆಪಿ ನಾಯಕರು ಭೋಜನ ಸೇವಿಸಿದ್ದರು. ಆದರೆ ಇದನ್ನು ಹೊಟೇಲ್ ವೊಂದರಿಂದ ತರಿಸಲಾಗಿದೆ ಹೊರತು ಮನೆಯಲ್ಲೇ ಮಾಡಿದ್ದ ಎಂದು ಇತರ ಪಕ್ಷಗಳು ಆರೋಪಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಮಾಧ್ಯಮ ವಕ್ತಾರ ಶಿವಪ್ರಕಾಶ್ ಅವರು ಯಡಿಯೂರಪ್ಪನವರಿಗೆ ಇಡ್ಲಿ, ವಡೆ ಎಂದರೆ ತುಂಬಾ ಇಷ್ಟ ಹೀಗಾಗಿ ಅವರಿಗೆ ಹೊಟೇಲ್ ನಿಂದ ತರಿಸಲಾಗಿತ್ತು. ಆದರೆ ನಾವು ದಲಿತರ ಮನೆಯಲ್ಲಿ ತಯಾರಿಸಿದ್ದ ಪಲಾವ್ ಅನ್ನೇ ಸೇವಿಸಿದ್ದೇವು ಎಂದು ತಿಳಿಸಿದ್ದಾರೆ.
ಇನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಬಿಜೆಪಿ ಮುಖಂಡರು ಇಂತಹ ಕೀಳು ಅಭಿರುಚಿ ಕೈಬಿಡಬೇಕು ಎಂದು ಮನವಿ ಮಾಡಿದ್ದರು. ಇತ್ತ ಕಾಂಗ್ರೆಸ್ ಸಹ ದಲಿತರ ಮನೆಯಲ್ಲಿ ಹೊಟೇಲ್ ತಿಂದಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ.
ಎಸ್ಟಿ-ಎಸ್ಸಿ ಸೆಲ್ ಅಧ್ಯಕ್ಷ ಎಚ್ ಅಂಜಿನಪ್ಪ ಅವರು ಬಿಜೆಪಿ ಚುನಾವಣೆಗೆ ಈಗಿನಿಂದಲೇ ಕಸರತ್ತು ಮಾಡಿದೆ. ಆದರೆ ಬರ ಅಧ್ಯಯನ ಜನಸಂಪರ್ಕ ಹೆಸರಲ್ಲಿ ದಲಿತರ ಓಲೈಕೆಗೆ ಮುಂದಾಗಿ ಎಡವಟ್ಟು ಮಾಡಿಕೊಂಡಿದೆ ಎಂದರು.