ಬೆಂಗಳೂರು: ಖಾಸಗಿ ಆಸ್ಪತ್ರೆ ನಿಯಂತ್ರಣ ತಿದ್ದುಪಡಿ ವಿಧೇಯಕ(ಕೆಪಿಎಂಇ) ಸಂಬಂಧ ವಾದ-ವಿವಾದ, ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲಿ ರಾಜಕೀಯ ಮೇಲುಗೈ ಸಾಧಿಸಲು ಪಕ್ಷಗಳು ತೀವ್ರವಾಗಿ ಪ್ರಯತ್ನಿಸುತ್ತಿದ್ದು ಪರಿಸ್ಥಿತಿಯ ಅನುಕೂಲ ಪಡೆದುಕೊಳ್ಳಲು ಮುಂದಾಗುತ್ತಿವೆ.
ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವೈದ್ಯರ ಮುಷ್ಕರಕ್ಕೆ ಸರ್ಕಾರದ ನಡೆಯೇ ಕಾರಣ ಎಂದು ಟೀಕಿಸಿದರು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಸೂದೆಯನ್ನು ಅಧಿಕಾರಕ್ಕೆ ಬಂದ 24 ಗಂಟೆಗಳೊಳಗೆ ತೆಗೆದುಹಾಕುತ್ತೇವೆ ಎಂದು ಹೇಳಿದರು.
ವೈದ್ಯರು ಮತ್ತು ಸಂಬಂಧಪಟ್ಟ ಪ್ರತಿನಿಧಿಗಳೊಂದಿಗೆ ಆರೋಗ್ಯಕರ ಚರ್ಚೆ ನಡೆಸದೆ ಮಸೂದೆಯನ್ನು ತರಾತುರಿಯಿಂದ ಸರ್ಕಾರ ಜಾರಿಗೆ ತಂದಿದೆ. ಇದರ ಪರಿಣಾಮ ರೋಗಿಗಳ ಮೇಲಾಗಿದ್ದು ಕೆಲವು ರೋಗಿಗಳು ಮೃತಪಟ್ಟಿದ್ದಾರೆ ಎಂದು ಆಪಾದಿಸಿದರು.
ಮುಂದಿನ ಚುನಾವಣೆ ತನಕ ತಾಳ್ಮೆಯಿಂದ ಕಾಯಿರಿ. ಬಿಜೆಪಿ ಅಧಿಕಾರಕ್ಕೆ ಬಂದರೆ ಅಧಿಕಾರ ಪಡೆದು 24 ಗಂಟೆಯೊಳಗೆ ಮಸೂದೆಯನ್ನು ತೆಗೆದುಹಾಕುತ್ತೇವೆ ಎಂದು ಭರವಸೆ ನೀಡಿದರು.