ಬೆಂಗಳೂರು: ರಸ್ತೆಗಳ ಅಭಿವೃದ್ಧಿ ಹೆಸರಿನಲ್ಲಿ ಸುಮಾರು 2000 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಕೆ.ಜೆ ಜಾರ್ಜ್ ವಿರುದ್ಧ ಎಸಿಬಿಯಲ್ಲಿ ಬಿಜೆಪಿ ಮತ್ತೆ ಎರಡು ಪ್ರತ್ಯೇಕ ದೂರು ದಾಖಲಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ನಗರ ಬಿಜೆಪಿ ವಕ್ತಾರ ಎನ್ ಆರ್ ರಮೇಶ್ 2,600 ಕೋಟಿ ರೂಪಾಯಿ ಅವ್ಯವಹಾರದಲ್ಲಿ, ಸಿಎಂ ಹಾಗೂ ಜಾರ್ಜ್ ಬಿಬಿಎಂಪಿ ಕಾಮಗಾರಿಯಲ್ಲಿ 600 ಕೋಟಿ ರೂಪಾಯಿಯಷ್ಟು ಕಿಕ್ ಬ್ಯಾಕ್ ಪಡೆದಿರುವುದಾಗಿ ಆರೋಪಿಸಿದರು. ಅಲ್ಲದೇ ಬರೋಬ್ಬರಿ 3097 ಪುಟಗಳಷ್ಟು ದಾಖಲೆ ಬಿಡುಗಡೆ ಮಾಡಿದರು.
ರಸ್ತೆ ಅಭಿವೃದ್ಧಿಯ ಹೆಸರಿನಲ್ಲಿ 400 ಕೋಟಿ ಹಾಗೂ ವೈಟ್ ಟ್ಯಾಪಿಂಗ್ ನಲ್ಲಿ 200 ಕೋಟಿ ಕಿಕ್ ಬ್ಯಾಕ್ ಪಡೆದಿರುವುದಾಗಿ ರಮೇಶ್ ಆರೋಪಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಗೆ ಬರುವ ರಸ್ತೆಗಳ ಅಭಿವೃದ್ಧಿ ಕಾರ್ಯಗಳಿಗೆಂದು 9,662 ಕೋಟಿ ರು,ಬಿಡುಗಡೆಯಾಗಿದೆ, ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ 4,878 ಕೋಟಿ ರು ಅನುದಾನದಲ್ಲಿ ಸಿದ್ದರಾಮಯ್ಯ ಮತ್ತು ಕೆ.ಜೆ ಜಾರ್ಜ್ 400 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಕಮಿಷನ್ ಪಡೆದಿದ್ದಾರೆ ಎಂದು ದೂರಿದ್ದಾರೆ.