ನವದೆಹಲಿ: ಯಾವುದೇ ಕಾರಣಕ್ಕೂ ನಾನು ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ, ನನ್ನ ನಿರ್ಧಾರ ಅಚಲ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾನು ಇನ್ನು ಮುಂದೆ ಯಾವ ಕಾರಣಕ್ಕೂ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ. ನನ್ನ ಈ ನಿರ್ಧಾರ ಅಚಲ. ಇದರಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಹೇಳಿದರು.
'ಚುನಾವಣಾ ರಾಜಕಾರಣ ನನಗೆ ಬೇಡ. ಆದರೆ ರಾಜಕಾರಣದಲ್ಲಿ ಸಕ್ರಿಯನಾಗಿರುತ್ತೇನೆ. ಪಕ್ಷ ಸಂಘಟನೆಯಲ್ಲಿ ತೊಡಗುತ್ತೇನೆ ಎಂದರು. ಇದೇ ವೇಳೆ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಯೇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ನಿರ್ಧಾರವನ್ನು ಸ್ಥಳೀಯ ಘಟಕಗಳಿಗೆ ನೀಡಲಾಗಿದೆ. ಸ್ಥಳೀಯ ನಾಯಕರು ತಮ್ಮಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಜೆಡಿಎಸ್ ಅಥವಾ ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲಿವೆ ಎಂದು ಹೇಳಿದರು.
ಮುಂಬರುವ 2019ರ ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹಗಳು ದಟ್ಟವಾಗಿ ಕೇಳಿಬರುತ್ತಿದ್ದು, ಇದಕ್ಕೆ ಸ್ವತಃ ಸಿದ್ದರಾಮಯ್ಯ ಅವರು ಈ ಮೂಲಕ ತೆರೆ ಎಳೆದಂತಾಗಿದೆ.