ಸಮ್ಮಿಶ್ರ ಸರ್ಕಾರದ ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯ: ಎಚ್.ಕೆ ಪಾಟೀಲ್

ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರಕಾರ ಮಂಡಿಸಿದ ಪ್ರಸಕ್ತ ಸಾಲಿನ ಬಜೆಟ್‌ ಕುರಿತು ಕಾಂಗ್ರೆಸ್‌ನ ಹಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದ ಬೆನ್ನಲ್ಲೇ, ...
ಎಚ್.ಕೆ ಪಾಟೀಲ್
ಎಚ್.ಕೆ ಪಾಟೀಲ್
Updated on: 
ಬೆಂಗಳೂರು: ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರಕಾರ ಮಂಡಿಸಿದ ಪ್ರಸಕ್ತ ಸಾಲಿನ ಬಜೆಟ್‌ ಕುರಿತು ಕಾಂಗ್ರೆಸ್‌ನ ಹಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದ ಬೆನ್ನಲ್ಲೇ, ಅಲ್ಪಸಂಖ್ಯಾತರನ್ನು ಬಜೆಟ್‌ನಲ್ಲಿ ಕಡೆಗಣಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಗೆ ಗದಗ ಶಾಸಕ ಎಚ್‌. ಕೆ. ಪಾಟೀಲ್ ಪತ್ರ ಬರೆದು ಅಸಮಾಧಾನ ತೋಡಿಕೊಂಡಿದ್ದಾರೆ. 
ಸಂಪುಟದಲ್ಲಿ ಸಚಿವ ಸ್ಥಾನ ಸಿಗದೆ ಆಕ್ರೋಶಗೊಂಡಿರುವ ಎಚ್,ಕೆ ಪಾಟೀಲ್ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದರ ಜತೆಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೂ ಪತ್ರ ಬರೆದು ಈ ಬಗ್ಗೆ ಸಮಿತಿ ಸಭೆ ಕರೆದು ಚರ್ಚಿಸುವಂತೆ ಕೋರಿದ್ದಾರೆ. 
ಕಳೆದ ಬಾರಿ ಬಜೆಟ್ ನಲ್ಲಿ ಘೋಷಿಸಿರುವ ಯೋಜನೆಗಳನ್ನು ಬಿಟ್ಟರೆ ಉತ್ತರ ಕರ್ನಾಟಕಕ್ಕೆ ಹೊಸದಾಗಿ  ಯಾವುದೇ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಿಲ್ಲ. ಕಳೆದ ಬಾರಿಯ ಬಜೆಟ್ ಜತೆಗೆ ಪ್ರಸಕ್ತ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ವಿವಿಧ ಯೋಜನೆಯನ್ನು ಪರಿಷ್ಕರಿಸಿ ಹೊಸ ಕಾರ್ಯಕ್ರಮ ಘೋಷಿಸಬೇಕಿತ್ತು. ಆದರೆ ಯಾವುದೇ ಕಾರ್ಯಕ್ರಮ ಘೋಷಿಸಿಲ್ಲ. ಹೀಗಾಗಿ ಬಜೆಟ್ ಕಾರ್ಯಕ್ರಮ ಜಾರಿಗೂ ಮುಂಚೆ ಕೆಲವು ಕಾರ್ಯಗಳನ್ನಾದರೂ ಸೇರ್ಪಡೆ ಮಾಡಿ, ಕೊರತೆಯನ್ನು ಸರಿಪಡಿಸಿ ಎಂದು ಎಚ್‌. ಕೆ. ಪಾಟೀಲ್ ಕುಮಾರಸ್ವಾಮಿಯನ್ನು ಒತ್ತಾಯಿಸಿದ್ದಾರೆ. 
ಉತ್ತರ ಕರ್ನಾಟಕದ ಜನತೆಯನ್ನೂ ಬಜೆಟ್‌ನಲ್ಲಿ ಕಡೆಗಣಿಸಲಾಗಿದ್ದು, ಯಾವುದೇ ಹೊಸ ಕಾರ್ಯಕ್ರಮ ಘೋಷಣೆ ಆಗಿಲ್ಲ. ಆ ಭಾಗದ ಜನರ ಭಾವನೆಗೆ ಬೆಲೆ ಕೊಟ್ಟು ನ್ಯಾಯ ಒದಗಿಸಿ, ಪ್ರಾದೇಶಿಕ ಅಸಮತೋಲನ ಸರಿಪಡಿಸಿ ಎಂದು ಪಾಟೀಲ್ ಪತ್ರದಲ್ಲಿ ತಿಳಿಸಿದ್ದಾರೆ. 
ಬಜೆಟ್ ನಲ್ಲಿ ಅಲ್ಪ ಸಂಖ್ಯಾತ ಸಮುದಾಯಕ್ಕೆ ಅಗತ್ಯ ಅನುದಾನ ನೀಡಿಲ್ಲ ಎಂದು ಸಚಿವರಾದ ಜಮೀರ್ ಅಹಮದ್ ಖಾನ್ ಮತ್ತು ಯು.ಟಿ ಖಾದರ್ ಕೂಡ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com