

ಮೈಸೂರು: ರಾಜ್ಯ ಸರ್ಕಾರದ ಆಡಳಿತದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ಹೇಳಿದ ಒಂದು ದಿನದ ನಂತರ ಅದರ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮಗೆ ಆ ಬಗ್ಗೆ ಅರಿವು ಇಲ್ಲ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರದ ಆಡಳಿತದಲ್ಲಿ ಭ್ರಷ್ಟಾಚಾರ ಇರುವುದು ನನ್ನ ಗಮನಕ್ಕೆ ಬಂದಿಲ್ಲ. ಮುಖ್ಯಮಂತ್ರಿಯವರಿಗೆ ಆ ಬಗ್ಗೆ ಗೊತ್ತಿದ್ದರೆ ಅದನ್ನು ತಡೆಯಲು ಅವರು ದಯಮಾಡಿ ಕ್ರಮ ಕೈಗೊಳ್ಳಲಿ ಎಂದು ಹೇಳಿದರು. ಮೈಸೂರಿನಲ್ಲಿ ನಿನ್ನೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಭ್ರಷ್ಟಾಚಾರವಿದೆಯೇ ಎಂದು ಕೇಳಿದ್ದಕ್ಕೆ ಆ ಬಗ್ಗೆ ಕೂಡ ನನಗೆ ತಿಳಿದಿಲ್ಲ ಎಂದು ಪ್ರತಿಕ್ರಿಯಿಸಿದರು.
ಪಕ್ಷದೊಳಗೆ ಭಿನ್ನಮತ ಏರ್ಪಟ್ಟ ನಂತರ ಬಾದಾಮಿ ಕ್ಷೇತ್ರ ಪ್ರವಾಸ ಎಂದು ಹೋಗಿದ್ದ ಸಿದ್ದರಾಮಯ್ಯನವರು ಬೆಂಗಳೂರಿನಲ್ಲಿ ಇರಲಿಲ್ಲ. ಕಾಂಗ್ರೆಸ್ ನಲ್ಲಿ ಭಿನ್ನಮತ ಈಗಿಲ್ಲ, ಎಲ್ಲವೂ ಶಮನಗೊಂಡಿದೆ ಎಂದಿದ್ದಾರೆ.
ಮುಖ್ಯಮಂತ್ರಿಯಾಗಿ ಜೆಡಿಎಸ್ ನಾಯಕ ಕುಮಾರಸ್ವಾಮಿಯವರು ಅಧಿಕಾರ ವಹಿಸಿಕೊಂಡು 20 ದಿನಗಳು ಕಳೆದರೂ ಕೂಡ ಮೈಸೂರಿನ ಕಾಂಗ್ರೆಸ್ ಕಾರ್ಯಕರ್ತರ ದೃಷ್ಟಿಯಲ್ಲಿ ಸಿದ್ದರಾಮಯ್ಯನವರೇ ಇನ್ನು ಕೂಡ ರಾಜ್ಯದ ಮುಖ್ಯಮಂತ್ರಿ. ಸಿದ್ದರಾಮಯ್ಯನವರ ಕೈ ಬಲಪಡಿಸಲು ತಾವು ಯಾವುದೇ ತ್ಯಾಗಕ್ಕೆ ಕೂಡ ಸಿದ್ಧ ಎಂದು ಮೈಸೂರಿನ ಕಾಂಗ್ರೆಸ್ ಕಾರ್ಯಕರ್ತರು ಘೋಷಿಸಿದ್ದಾರೆ.
ನಿನ್ನೆ ವರುಣಾ ಕ್ಷೇತ್ರದಲ್ಲಿ ಧನ್ಯವಾದ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎನ್ ಧರ್ಮಸೇನ, ಸಿದ್ದರಾಮಯ್ಯನವರ ಉತ್ತಮ ಆಡಳಿತ ಮತ್ತು ಜನಪ್ರಿಯ ಕಾರ್ಯಕ್ರಮಗಳಿಂದಾಗಿ ಸಿದ್ದರಾಮಯ್ಯನವರು ಕೆಲವರ ಮನಸ್ಸಿನಲ್ಲಿ ಇನ್ನೂ ಸಿಎಂ ಆಗಿಯೇ ಉಳಿದಿದ್ದಾರೆ. ಅವರು ಸದ್ಯದಲ್ಲಿಯೇ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂಬ ವಿಶ್ವಾಸ ನಮಗಿದೆ ಎನ್ನುತ್ತಾರೆ.
ಇವರ ಮಾತಿಗೆ ಮತ್ತೊಬ್ಬ ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜ ಕೂಡ ದನಿಗೂಡಿಸಿದರು. ತಾವು ಸಿದ್ದರಾಮಯ್ಯನವರ ಆಶೀರ್ವಾದದಿಂದ ಶಾಸಕನಾದೆ ಎಂದರು ಪುಟ್ಟರಂಗ ಶೆಟ್ಟಿ.