ರಾಜಕೀಯ

ರಾಜಕೀಯ ಸಂಚಲನ ಮೂಡಿಸಿದ ವೀರಪ್ಪ ಮೊಯ್ಲಿ ಟ್ವೀಟ್; ಕಾಂಗ್ರೆಸ್ ನಾಯಕರಲ್ಲಿ ತಳಮಳ

ರಾಜಕೀಯ ಸಂಚಲನ ಮೂಡಿಸಿದ ವೀರಪ್ಪ ಮೊಯ್ಲಿ ಟ್ವೀಟ್; ಕಾಂಗ್ರೆಸ್ ನಾಯಕರಲ್ಲಿ ತಳಮಳ
ವೀರಪ್ಪ ಮೊಯ್ಲಿ
Published On :

ಬೆಂಗಳೂರು; ತಮ್ಮ ಪುತ್ರ ಹರ್ಷ ಮೊಯ್ಲಿಗೆ ಉಡುಪಿಯ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಕೊಡಿಸುವಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯವೇ ವೀರಪ್ಪ ಮೊಯ್ಲಿಯವರು ಟ್ವೀಟ್ ಮಾಡಲು ಕಾರಣ ಎಂದು ಹೇಳಲಾಗುತ್ತಿದ್ದು ಅವರ ಟ್ವೀಟ್ ಕಾಂಗ್ರೆಸ್ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದೆ ಎನ್ನಲಾಗುತ್ತಿದೆ. ತಮ್ಮ ಪುತ್ರ ಹರ್ಷ ಮೊಯ್ಲಿಗೆ ಟಿಕೆಟ್ ಕೊಡಿಸುವುದಕ್ಕೆ ಲೋಕೋಪಯೋಗಿ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ ವಿರೋಧ ವ್ಯಕ್ತಪಡಿಸಿರುವುದು ವೀರಪ್ಪ ಮೊಯ್ಲಿಯವರಿಗೆ ತೀವ್ರ ಅಸಮಾಧಾನ ಉಂಟುಮಾಡಿದೆ ಎನ್ನಲಾಗುತ್ತಿದೆ.

ಈ ವರದಿಯನ್ನು ವೀರಪ್ಪ ಮೊಯ್ಲಿ ಮತ್ತು ಹೆಚ್.ಸಿ.ಮಹದೇವಪ್ಪ ಇಬ್ಬರೂ ನಿರಾಕರಿಸುತ್ತಿದ್ದರೂ ಕೂಡ ಕಾಂಗ್ರೆಸ್ ನ ಆಂತರಿಕ ವಲಯದಲ್ಲಿ ಈ ವಾರದ ಆರಂಭದಲ್ಲಿ ನಡೆದ ಪಕ್ಷದ ನಾಯಕರ ಸಭೆಯಲ್ಲಿ ಚರ್ಚೆಗೆ ಬಂದಿತ್ತು. ಸಭೆಯಲ್ಲಿ, ವೀರಪ್ಪ ಮೊಯ್ಲಿಯವರ ಪ್ರಸ್ತಾಪಕ್ಕೆ ಹೆಚ್ ಸಿ ಮಹದೇವಪ್ಪ ವಿರೋಧ ವ್ಯಕ್ತಪಡಿಸಿದರು ಎನ್ನಲಾಗುತ್ತಿದೆ.

ಆದರೆ ಈ ವಿವಾದಿತ ಟ್ವೀಟ್ ನಿಂದ ದೂರವುಳಿಯಲು ಪ್ರಯತ್ನಿಸುತ್ತಿರುವ ಮೊಯ್ಲಿಯವರು ತಮ್ಮ ಖಾತೆ ಹ್ಯಾಕ್ ಆಗಿದೆ ಎನ್ನುತ್ತಿದ್ದಾರೆ. ಮಹದೇವಪ್ಪ ಕೂಡ ತಮ್ಮ ಮೇಲಿನ ಆರೋಪವನ್ನು ನಿರಾಕರಿಸುತ್ತಿದ್ದು ಪಕ್ಷದ ಅಭ್ಯರ್ಥಿಗಳನ್ನು ಅಂತಿಮವಾಗಿ ನಿರ್ಧರಿಸುವುದು ಪಕ್ಷದ ಹೈಕಮಾಂಡ್ ಹೊರತು ನಾವಲ್ಲ ಎನ್ನುತ್ತಿದ್ದಾರೆ.

ಕಾಂಗ್ರೆಸ್ ನ ಕೆಲವು ಮೂಲಗಳು ಸಹ ಮೊಯ್ಲಿಯವರ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿರುವುದನ್ನು ನಿರಾಕರಿಸುತ್ತಿಲ್ಲ. ಕಾಂಗ್ರೆಸ್ ನ ಹಿರಿಯ ನಾಯಕರೊಬ್ಬರಿಂದ ಈ ರೀತಿಯ ಟ್ವೀಟ್ ಬರುವುದೆಂದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ವಿರೋಧಿಸುವುದೆಂದರ್ಥ. ಪಕ್ಷದ ರಾಜಕೀಯ ವಿರೋಧಿಗಳು ಈ ರೀತಿ ಮಾಡಿರಬಹುದು ಎನ್ನುತ್ತವೆ ಕಾಂಗ್ರೆಸ್ ಮೂಲಗಳು.

ಇನ್ನು ಈ ಟ್ವೀಟ್ ಬಂದಿರುವ ಸಮಯ ಕೂಡ ಅನೇಕರಿಗೆ ಆಶ್ಚರ್ಯವನ್ನುಂಟುಮಾಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿರುವ ಕೆಲವು ಗಂಟೆಗಳಲ್ಲಿಯೆ ವೀರಪ್ಪ ಮೊಯ್ಲಿಯವರ ಖಾತೆಯಲ್ಲಿ ಈ ಟ್ವೀಟ್ ಕಾಣಿಸಿಕೊಂಡಿದೆ. ಶುಕ್ರವಾರ ಯಡಿಯೂರಪ್ಪನವರು ನಾಳೆ ಸಂಜೆ 5 ಗಂಟೆಗೆ ಬ್ರೇಕಿಂಗ್ ನ್ಯೂಸ್ ನೀಡುವುದಾಗಿ ಟ್ವೀಟ್ ಮಾಡಿದ್ದರು.

ಇನ್ನು ಮೂರನೇ ಸುದ್ದಿ ಕಾಂಗ್ರೆಸ್ ನಲ್ಲಿ ಹರಡಿರುವುದು ಅಶೋಕ್ ಖೇಣಿಯನ್ನು ಪಕ್ಷಕ್ಕೆ ಸೇರಿಸಿಕೊಂಡಿರುವುದು. ಪಕ್ಷದ ಹೈಕಮಾಂಡ್ ನ ಗಮನ ಸೆಳೆಯಲು ಈ ರೀತಿ ವೀರಪ್ಪ ಮೊಯ್ಲಿಯವರು ಟ್ವೀಟ್ ಮಾಡಿರುವುದು ಎನ್ನಲಾಗುತ್ತಿದೆ. ಆದರೆ ತನಿಖೆಯಿಂದ ಮಾತ್ರ ಈ ಟ್ವೀಟ್ ಹಿಂದೆ ಯಾರಿದ್ದಾರೆ, ನಿಜವಾಗಿಯೂ ಅಕೌಂಟ್ ಹ್ಯಾಕ್ ಆಗಿದೆಯೇ ಎಂದು ಗೊತ್ತಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.