'ಎಸ್' ಎಂದರೆ ಜಾತ್ಯತೀತವೇ ಅಥವಾ ಸಂಘ ಪರಿವಾರವೇ: ಜೆಡಿಎಸ್ ಸ್ಪಷ್ಪಪಡಿಲಿ- ರಾಹುಲ್ ಗಾಂಧಿ

ಜೆಡಿಎಸ್ ಜಾತ್ಯತೀತವೇ ಅಥವಾ ಸಂಘ ಪರಿವಾರವೇ ಎಂಬುದರ ಬಗ್ಗೆ ಸ್ಪಷ್ಟ ನಿಲುವು ವ್ಯಕ್ತಪಡಿಸುವಂತೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡ ಅವರಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಿರಂತರವಾಗಿ ಒತ್ತಡ ಹಾಕುತ್ತಿದ್ದಾರೆ.
ರಾಹುಲ್ ಗಾಂಧಿ, ಪರಮೇಶ್ವರ್
ರಾಹುಲ್ ಗಾಂಧಿ, ಪರಮೇಶ್ವರ್
Updated on: 

ತುಮಕೂರು : ಬಿಜೆಪಿ ಬಗ್ಗೆಗಿನ ಅಭಿಪ್ರಾಯ ವ್ಯಕ್ತಪಡಿಸುವಂತೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡ ಅವರಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಿರಂತರವಾಗಿ ಒತ್ತಡ ಹಾಕುತ್ತಿದ್ದು, ಜೆಡಿಎಸ್  ಜಾತ್ಯತೀತವೇ ಅಥವಾ ಸಂಘ ಪರಿವಾರವೇ ಎಂಬುದರ ಬಗ್ಗೆ ಸ್ಪಷ್ಟ ನಿಲುವು ವ್ಯಕ್ತಪಡಿಸುವಂತೆ ಒತ್ತಾಯಿಸಿದ್ದಾರೆ.

ಗೌರಿಬಿದನೂರು, ಪಾವಗಡ ಹಾಗೂ ತಿಪಟೂರಿನಲ್ಲಿ ನಿನ್ನೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, 12 ನೇ ಶತಮಾನದ ಧಾರ್ಮಿಕ ಗುರಿ ಬಸವಣ್ಣ ಅವರ ನುಡಿದಂತೆ ನಡೆ ತತ್ವವನ್ನು ಪ್ರಧಾನಮಂತ್ರಿ ನರೇಂದ್ರಮೋದಿ ಪಾಲಿಸುತ್ತಿಲ್ಲ, ಈ ಚುನಾವಣೆ ಜಾತ್ಯತೀತ ಮತ್ತು ಕೋಮುವಾದಿ ಸಿದ್ದಾಂತಗಳ ನಡುವಿನ ಹೋರಾಟವಾಗಿದ್ದು, ಜೆಡಿಎಸ್ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು.

ಗಣಿ ಆಕ್ರಮದ ಆರೋಪಿ ಜನಾರ್ಧನ್ ರೆಡ್ಡಿ ಅವರ ಸಹೋದರನಿಗೆ  ಪ್ರಧಾನಮಂತ್ರಿ ನರೇಂದ್ರಮೋದಿ ಟಿಕೆಟ್ ನೀಡುತ್ತಾರೆ. ಜನಾರ್ದನ್ ರೆಡ್ಡಿ  ಗ್ಯಾಂಗ್ ನಿಂದ 35 ಸಾವಿರ ಕೋಟಿ ರೂಪಾಯಿ ಲೂಟಿ ಮಾಡಲಾಗಿದೆ. ಇದರಿಂದ ರಾಜ್ಯದ ರೈತರ ಸಾಲವನ್ನು ನಾಲ್ಕು ಬಾರಿಯಾದರೂ ಮನ್ನಾ ಮಾಡಬಹುದಿತ್ತು ಎಂದು ಹೇಳಿದರು.

ರೈತರಿಗೆ ಉದ್ಯೋಗ ಸೃಷ್ಟಿಸಿ ಕೆಲಸ ನೀಡುವಲ್ಲಿಯೂ ನರೇಂದ್ರಮೋದಿ ವಿಫಲರಾಗಿದ್ದಾರೆ.  ಕಾಂಗ್ರೆಸ್ ಮತ್ತೆ  ಅಧಿಕಾರಕ್ಕೆ ಬಂದರೆ ತುಮಕೂರು ಉಪನಗರದಲ್ಲಿ ಆಹಾರ ಸಂಸ್ಕರಣಾ ಘಟಕ ಸ್ಥಾಪಿಸಲಾಗುವುದು ಹಾಗೂ 50 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ರಾಹುಲ್ ಗಾಂಧಿ ಭರವಸೆ ನೀಡಿದರು.

ಇದಕ್ಕೂ ಮುನ್ನ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನಲ್ಲಿ  ರೋಡ್ ಶೋ ನಡೆಸಿದ ರಾಹುಲ್ ಗಾಂಧಿ,  ಕರ್ನಾಟಕದ ರೈತರ ಕಲ್ಯಾಣಕ್ಕಾಗಿ  ಪ್ರಧಾನಿ ಕೈಗೊಂಡಿರುವ ಕಾರ್ಯಕ್ರಮಗಳನ್ನು ಬಹಿರಂಗಪಡಿಸುವಂತೆ ಸವಾಲು ಹಾಕಿದರು. ಭ್ರಷ್ಟಾಚಾರದಲ್ಲಿ ತಳುಕು ಹಾಕಿಕೊಂಡಿರುವ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿರುವ ಬಿಜೆಪಿ ಸಮಾಜಕ್ಕೆ ಎಂತಹ ಸಂದೇಶ ನೀಡುತ್ತಿದೆ ಎಂದು ಪ್ರಶ್ನಿಸಿದರು.





Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com