

ಬೆಂಗಳೂರು: ಸಚಿವ ಡಿ ಕೆ ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ ಎಫ್ಐಆರ್ ದಾಖಲಿಸುವ ಸಾಧ್ಯತೆಯಿದೆ ಎಂಬ ಊಹಾಪೋಹ ನಿನ್ನೆಯಿಂದ ಕೇಳಿಬರುತ್ತಿರುವ ಹಿನ್ನಲೆಯಲ್ಲಿ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬಿಜೆಪಿ ವಿರುದ್ಧ ನೇರ ಆರೋಪ ಮಾಡಿದ್ದಾರೆ. ಕೇಂದ್ರ ತನಿಖಾ ಸಂಸ್ಥೆಯನ್ನು ಬಿಜೆಪಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪ ಮಾಡಿದ್ದಾರೆ.
ಕಳೆದೊಂದು ವಾರದಿಂದ ಬಿಜೆಪಿ ನಾಯಕರು ಜಾರಿ ನಿರ್ದೇಶನಾಲಯ ಶಿವಕುಮಾರ್ ಅವರನ್ನು ಬಂಧಿಸುತ್ತದೆ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಅವರ ಮಾತಿನ ಹಿನ್ನಲೆಯೇನು,ಯಾವುದರ ಆಧಾರದ ಮೇಲೆ ಅವರು ಆ ರೀತಿ ಹೇಳಿದ್ದಾರೆ ಎಂದು ನನಗೆ ಗೊತ್ತಾಗುತ್ತಿಲ್ಲ. ಆದರೆ ಈಗ ನಮಗೆ ಸಂಶಯ ಬರುತ್ತಿದೆ, ಕೇಂದ್ರ ತನಿಖಾ ಸಂಸ್ಥೆಯಿಂದ ಬಿಜೆಪಿ ನಾಯಕರಿಗೆ ಮಾಹಿತಿ ರವಾನೆಯಾಗುತ್ತಿದೆ ಎಂದು ನಿನ್ನೆ ಸುದ್ದಿಗೋಷ್ಠಿಯಲ್ಲಿ ಸಂಸದ ಹಾಗೂ ಡಿ ಕೆ ಶಿವಕುಮಾರ್ ಸೋದರ ಡಿ ಕೆ ಸುರೇಶ್ ಆರೋಪಿಸಿದ್ದರು.
ಇವರ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ದನಿಗೂಡಿಸಿದ್ದು ಸಮ್ಮಿಶ್ರ ಸರ್ಕಾರದ ವಿರುದ್ಧ ಬಿಜೆಪಿ ನಡೆಸುತ್ತಿರುವ ಪಿತೂರಿಯಿದು. ಕೇಂದ್ರ ತನಿಖಾ ಸಂಸ್ಥೆಗಳ ಮೇಲೆ ಕಾಂಗ್ರೆಸ್ ಗೆ ಯಾವುದೇ ರೀತಿಯ ಸಮಸ್ಯೆಗಳಿಲ್ಲ, ಆದರೆ ಅವರನ್ನು ನಮ್ಮ ರಾಜಕೀಯ ಶತ್ರುಗಳು ದಾಳವನ್ನಾಗಿ ಬಳಸಿಕೊಂಡು ಸರ್ಕಾರವನ್ನು ಅಸ್ಥಿರಗೊಳಿಸಲು ನೋಡುತ್ತಿದೆ. ಸರ್ಕಾರ ಸುಭದ್ರವಾಗಿದ್ದು 5 ವರ್ಷಗಳ ಆಡಳಿತವನ್ನು ಪೂರ್ಣಗೊಳಿಸಲಿದೆ ಎಂದು ಹೇಳಿದ್ದಾರೆ.
ಡಿ ಕೆ ಸುರೇಶ್ ಅವರು ಸುಳ್ಳು ಪತ್ರವನ್ನು ಬಿಡುಗಡೆ ಮಾಡಿ ರಾಜ್ಯದ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ನಾನು ಬರೆದ ಪತ್ರ ಎಂದು ಸುಳ್ಳು ಪತ್ರಗಳನ್ನು ತೋರಿಸುವ ಕಾಂಗ್ರೆಸ್ ನ ಕ್ರಮ ಅಪವಿತ್ರ ಸರ್ಕಾರದ ಖಿನ್ನತೆ, ಒತ್ತಡವನ್ನು ತೋರಿಸುತ್ತದೆ. ನಾನು ಅಂತಹ ಕೀಳು ಮಟ್ಟದ ಕೆಲಸದಲ್ಲಿ ತೊಡಗಿಲ್ಲ, ಒಂದು ವೇಳೆ ಅದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. ತಮ್ಮನ್ನು ಬಚಾವ್ ಮಾಡಿಕೊಳ್ಳಲು ಜಾತಿಯ ಚಿತ್ರಣವನ್ನು ಡಿಕೆ ಸಹೋದರರು ತರುತ್ತಿದ್ದಾರೆ ಎಂದು ಆರೋಪಿಸಿದರು.
ಡಿಕೆ ಸೋದರರಿಗೆ ಜೆಡಿಎಸ್ ಬೆಂಬಲ: ಒಂದೆಡೆ ಬಿಜೆಪಿ ಡಿ ಕೆ ಸೋದರರ ವಿರುದ್ಧ ಆರೋಪದ ಸುರಿಮಳೆಗೈಯುತ್ತಿದ್ದರೆ ಸರ್ಕಾರದ ಮೈತ್ರಿಪಕ್ಷ ಜೆಡಿಎಸ್ ಅದರ ಬೆಂಬಲಕ್ಕೆ ನಿಂತಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಎ ಎಚ್ ವಿಶ್ವನಾಥ್, ಕೇಂದ್ರ ಸರ್ಕಾರ ತನ್ನ ಪಕ್ಷದ ನಾಯಕರನ್ನು ರಕ್ಷಿಸಲು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದಿದ್ದಾರೆ.