ಕ್ಷೇತ್ರ ಮರುವಿಂಗಡಣೆ: ಕರ್ನಾಟಕ ಮತ್ತಿತರ ರಾಜ್ಯಗಳ ರಾಜಕೀಯ ಧ್ವನಿಯನ್ನು ಹೇಗೆ ಬಲಪಡಿಸುತ್ತದೆ? ಪ್ರಧಾನಿ ಮೋದಿಯಿಂದ ಉತ್ತರ ಕೇಳಿದ ಸಿದ್ದರಾಮಯ್ಯ!

ಬೆಂಗಳೂರು: ಭಾರತದ ಜನಸಂಖ್ಯೆಯ ಸ್ಥಿರೀಕರಣ ನೀತಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿರುವ ಕರ್ನಾಟಕ ಮತ್ತಿತರ ರಾಜ್ಯಗಳ ರಾಜಕೀಯ ಧ್ವನಿಯನ್ನು ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣೆ (delimitation) ಪ್ರಕ್ರಿಯೆಯು ಹೇಗೆ ಬಲಪಡಿಸುತ್ತದೆ ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಶುಕ್ರವಾರ ಒತ್ತಾಯಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿರುವ ಸಿದ್ದರಾಮಯ್ಯ, ಲೋಕಸಭಾ ಸ್ಥಾನಗಳನ್ನು ಶೇ. 50ರಷ್ಟು ಹೆಚ್ಚಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಪ್ರಸ್ತಾವನೆಯ ಅನ್ವಯ, ಕರ್ನಾಟಕದ ಪ್ರಾತಿನಿಧ್ಯವು 28 ರಿಂದ 42 ಸ್ಥಾನಗಳಿಗೆ ಏರಿಕೆಯಾಗಲಿದ್ದು, ಉತ್ತರ ಪ್ರದೇಶದ ಪ್ರಾತಿನಿಧ್ಯವು 80 ರಿಂದ 120 ಸ್ಥಾನಗಳಿಗೆ ಹೆಚ್ಚಾಗಲಿದೆ. ಹೀಗಾಗಿ, ಈ ಎರಡು ರಾಜ್ಯಗಳ ನಡುವಿನ ಸ್ಥಾನಗಳ ಅಂತರವು 52 ರಿಂದ 78 ಕ್ಕೆ ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದ ಪಾಲಿಗೆ ರಾಜಕೀಯ ಪ್ರಾತಿನಿಧ್ಯವೆಂದರೆ ಕೇವಲ ಸಂಸದರ ಸಂಖ್ಯೆಯಷ್ಟೇ ಅಲ್ಲ. ಇದು ನಮ್ಮ ರಾಜಕೀಯ ಅಸ್ಮಿತೆ, ನಮ್ಮ ಸಾಂವಿಧಾನಿಕ ಹಕ್ಕುಗಳು, ರಾಷ್ಟ್ರೀಯ ನೀತಿಗಳ ಮೇಲೆ ಪ್ರಭಾವ ಬೀರುವ ನಮ್ಮ ಸಾಮರ್ಥ್ಯ ಮತ್ತು ಭಾರತೀಯ ಒಕ್ಕೂಟದಲ್ಲಿ ನಮಗಿರುವ ನ್ಯಾಯಯುತ ಸ್ಥಾನಕ್ಕೆ ಸಂಬಂಧಿಸಿದ ವಿಷಯವಾಗಿದೆ ಎಂದಿದ್ದಾರೆ.
ಮಹಿಳಾ ಮೀಸಲಾತಿ ವಿಚಾರ: ಮಹಿಳಾ ಮೀಸಲಾತಿ ವಿಚಾರದಲ್ಲಿ ನಮ್ಮ ನಿಲುವು ಅತ್ಯಂತ ಸ್ಪಷ್ಟವಾಗಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ (UPA) ಸರ್ಕಾರವು 2008 ರಲ್ಲಿ 'ಮಹಿಳಾ ಮೀಸಲಾತಿ ಮಸೂದೆ'ಯನ್ನು ಮಂಡಿಸಿ, 2010 ರಲ್ಲಿ ಅದನ್ನು ರಾಜ್ಯಸಭೆಯಲ್ಲಿ ಅಂಗೀಕರಿಸುವಂತೆ ಮಾಡಿತ್ತು. ಆದರೆ, ಮೋದಿ ಸರ್ಕಾರವು 2023 ರಲ್ಲಿ ಈ ಮಸೂದೆಯ ಜಾರಿಯನ್ನು ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಯೊಂದಿಗೆ ಜೋಡಿಸುವ ನಿರ್ಧಾರವನ್ನು ತೆಗೆದುಕೊಂಡಿತು. ಮಹಿಳೆಯರು ತಮ್ಮ ನ್ಯಾಯಯುತ ಪ್ರಾತಿನಿಧ್ಯವನ್ನು ಪಡೆಯಲು ಸಂಸತ್ತಿನ ವಿಸ್ತರಣೆಯವರೆಗೂ ಏಕೆ ಕಾಯಬೇಕು? ಬಿಜೆಪಿ 2029 ರೊಳಗೆ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಲು ಬದ್ಧವಾಗಿದ್ದರೆ, ಅದಕ್ಕೆ ಅಗತ್ಯವಿರುವ ಸಾಂವಿಧಾನಿಕ ತಿದ್ದುಪಡಿಯನ್ನು ತರಲಿ ಮತ್ತು ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳ ಪ್ರಸ್ತುತ ಸದಸ್ಯ ಬಲದ ಚೌಕಟ್ಟಿನಲ್ಲೇ ಅದನ್ನು ಜಾರಿಗೊಳಿಸಲಿ ಎಂದು ಒತ್ತಾಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಪಕ್ಷ ಸಭೆಯನ್ನು ಕರೆಯಬೇಕು, ಪ್ರಸ್ತಾವಿತ ಶೇ. 50 ರಷ್ಟು ವಿಸ್ತರಣೆಯ ಹಿಂದಿರುವ ತರ್ಕವನ್ನು ಬಹಿರಂಗಪಡಿಸಬೇಕು ಮತ್ತು ಕ್ಷೇತ್ರ ಮರುವಿಂಗಡಣೆಯ ಪರ್ಯಾಯ ಮಾದರಿಗಳನ್ನು ದೇಶದ ಮುಂದಿಡಬೇಕೆಂದು ಆಗ್ರಹಿಸಿದ್ದಾರೆ.
ಕರ್ನಾಟಕವು ಯಾವುದೇ ವಿಶೇಷ ಸವಲತ್ತುಗಳನ್ನಾಗಲಿ ಅಥವಾ ಇನ್ನೊಂದು ರಾಜ್ಯದ ಹಕ್ಕನ್ನು ಕಸಿದುಕೊಂಡು ಪ್ರಾತಿನಿಧ್ಯವನ್ನಾಗಲಿ ಕೋರುತ್ತಿಲ್ಲ. ನಾವು ಬಯಸುತ್ತಿರುವುದು ರಾಜಕೀಯ ನ್ಯಾಯ, ಒಕ್ಕೂಟ ವ್ಯವಸ್ಥೆಯಲ್ಲಿ ಸಮಾನತೆ ಮತ್ತು ನಮ್ಮ ಸಾಧನೆಗಳೇ ನಮಗೆ ಅನಾನುಕೂಲಗಳಾಗದಂತೆ ನೋಡಿಕೊಳ್ಳುವ ಶಾಶ್ವತ ಸಾಂವಿಧಾನಿಕ ಖಾತರಿಯನ್ನು ಮಾತ್ರ. ರಾಜ್ಯದ ಬಿಜೆಪಿ ಸಂಸದರು ಮೋದಿ ಮುಂದೆ ಕೇವಲ ತಲೆ ಅಲ್ಲಾಡಿಸುವವರಾಗಿ (yes-men) ನಿಲ್ಲುವುದನ್ನು ನಿಲ್ಲಿಸಬೇಕು. ಪಕ್ಷದ ನಿಷ್ಠೆಗಳನ್ನು ಮೀರಿ ನಿಂತು, ನಮ್ಮ ರಾಜ್ಯಕ್ಕೆ ನ್ಯಾಯಯುತ ರಾಜಕೀಯ ಪ್ರಾತಿನಿಧ್ಯವನ್ನು ಖಾತ್ರಿಪಡಿಸದ ಯಾವುದೇ ಕ್ಷೇತ್ರ ಮರುವಿಂಗಡಣಾ ಪ್ರಕ್ರಿಯೆಯನ್ನು ದೃಢವಾಗಿ ವಿರೋಧಿಸುವ ಮೂಲಕ, ಕರ್ನಾಟಕದ ನ್ಯಾಯಯುತ ಹಿತಾಸಕ್ತಿಗಳ ಪರವಾಗಿ ಧ್ವನಿ ಎತ್ತುವ ಧೈರ್ಯವನ್ನು ತೋರಬೇಕು ಎಂದು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



