ದೇಶ

ಕ್ಷೇತ್ರ ಮರುವಿಂಗಡಣೆ ಬಿಜೆಪಿ ಪಿತೂರಿ: ಬೆಂಬಲಿಸುವವರು 21ನೇ ಶತಮಾನದ ಅತಿದೊಡ್ಡ ದೇಶದ್ರೋಹಿಗಳು; ಸಂಜಯ್ ರಾವತ್

ಕ್ಷೇತ್ರ ಮರುವಿಂಗಡಣೆ ಬಿಜೆಪಿ ಪಿತೂರಿ: ಬೆಂಬಲಿಸುವವರು 21ನೇ ಶತಮಾನದ ಅತಿದೊಡ್ಡ ದೇಶದ್ರೋಹಿಗಳು; ಸಂಜಯ್ ರಾವತ್
ಸಂಜಯ್ ರಾವತ್
Published On :

ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಪ್ರಸ್ತಾವಿತ 'ಕ್ಷೇತ್ರ ಮರುವಿಂಗಡಣೆ' ಮಸೂದೆಯ ವಿರುದ್ಧ ತೀವ್ರ ಶಿವಸೇನೆ ಸಂಸದ ಸಂಜಯ್ ರಾವತ್ ವಾಗ್ದಾಳಿ ನಡೆಸಿದ್ದಾರೆ. ಇದು ಜನರ ಪ್ರಜಾಸತ್ತಾತ್ಮಕ ಮತ್ತು ರಾಜಕೀಯ ಅಧಿಕಾರವನ್ನು ಕಸಿದುಕೊಳ್ಳುವ ಗುರಿಯನ್ನು ಹೊಂದಿರುವ ಒಂದು ರಾಜಕೀಯ ಪಿತೂರಿ ಎಂದು ಅವರು ಆರೋಪಿಸಿದ್ದಾರೆ.

ಈಕುರಿತು 'ಎಕ್ಸ್' ಖಾತೆಯಲ್ಲಿ ಕಠಿಣ ಪದಗಳನ್ನು ಬಳಸಿ ಬರೆದು ಪೋಸ್ಟ್‌ ಮಾಡಿರುವ ಅವರು, ದೇಶಪ್ರೇಮಿ ಮತ್ತು ಪ್ರಜಾಸತ್ತಾತ್ಮಕ ರಾಜಕೀಯ ಪಕ್ಷಗಳೆಲ್ಲವೂ ಸಂಸತ್ತಿನಲ್ಲಿ ಈ ಮರುವಿಂಗಡಣೆ ಮಸೂದೆಯನ್ನು ವಿರೋಧಿಸಬೇಕೆಂದು ರಾವುತ್ ಕರೆ ನೀಡಿದ್ದಾರೆ. ಈ ಪ್ರಸ್ತಾವಿತ ಮಸೂದೆಯನ್ನು ಬೆಂಬಲಿಸುವ ಪಕ್ಷಗಳು, ದೇಶದ ಜನರಿಗೆ ದ್ರೋಹ ಬಗೆದವು ಎಂದು ಇತಿಹಾಸದಲ್ಲಿ ದಾಖಲಾಗುತ್ತವೆ ಎಂದು ಎಚ್ಚರಿಸಿದ್ದಾರೆ.

ಇಂದು ಶಿವಸೇನೆ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ ನಮ್ಮೊಂದಿಗೆ ಇಲ್ಲ. ಶರದ್ ಪವಾರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಹೋರಾಡಲು ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲ. ಇಲ್ಲದಿದ್ದರೆ, ಇಂತಹ ಭ್ರಷ್ಟ ರೀತಿಯಲ್ಲಿ ಈ ರಾಷ್ಟ್ರವಿರೋಧಿ ಮರುವಿಂಗಡಣೆ ಮಸೂದೆಯನ್ನು ಸಂಸತ್ತಿನ ಮುಂದೆ ತರುವ ಧೈರ್ಯವನ್ನು ಯಾರೂ ಮಾಡುತ್ತಿರಲಿಲ್ಲ ಎಂದು ರಾವುತ್ ಹೇಳಿದ್ದಾರೆ.

ಇತಿಹಾಸವು ಯಾವಾಗಲೂ ದ್ರೋಹಿಗಳ ಹೆಸರುಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತದೆ. ದ್ರೋಹಕ್ಕೆ ನೀಡುವ ಸಮರ್ಥನೆಗಳು ಗಾಳಿಯಲ್ಲಿ ಕರಗಿ ಹೋಗುತ್ತವೆ ಎಂದು ಹೇಳಿರುವ ರಾವುತ್, ತಮ್ಮ ಪೋಸ್ಟ್‌ನಲ್ಲಿ ಶರದ್ ಪವಾರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿದ್ದಾರೆ.

ಕ್ಷೇತ್ರ ಮರುವಿಂಗಡಣೆಯನ್ನು ಜನರ ರಾಜಕೀಯ ಅಧಿಕಾರವನ್ನು ಕಸಿದುಕೊಳ್ಳುವ ಬಿಜೆಪಿಯ ಪಿತೂರಿ ಎಂದು ಬಣ್ಣಿಸಿರುವ ಅವರು, ಈ ಮಸೂದೆಯನ್ನು ಬೆಂಬಲಿಸುವವರು ಜನರಿಗೆ ದ್ರೋಹ ಬಗೆದಂತಾಗುತ್ತದೆ ಎಂದು ಹೇಳಿದ್ದಾರೆ. ಈ ಮಸೂದೆಯನ್ನು ಬೆಂಬಲಿಸುವವರನ್ನು 21ನೇ ಶತಮಾನದ ಅತಿದೊಡ್ಡ ದ್ರೋಹಿಗಳೆಂದು ಇತಿಹಾಸ ನೆನಪಿಸಿಕೊಳ್ಳುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ನವೆಂಬರ್ 30 ರಿಂದ ಡಿಸೆಂಬರ್ 3 ರವರೆಗೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದ ಹಿನ್ನೆಲೆಯಲ್ಲಿ ರಾಜಕೀಯ ಸಂಘರ್ಷ ಹೆಚ್ಚುತ್ತಿರುವ ಸಂದರ್ಭದಲ್ಲಿಯೇ ರಾವುತ್ ಅವರ ಈ ಹೇಳಿಕೆಗಳು ಹೊರಬಿದ್ದಿವೆ. ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಟು ಮೀಸಲಾತಿಯನ್ನು ಜಾರಿಗೊಳಿಸುವ ಪ್ರಕ್ರಿಯೆಯನ್ನು, ಕ್ಷೇತ್ರ ಮರುವಿಂಗಡಣೆಯೊಂದಿಗೆ ಜೋಡಿಸುವ ಮಸೂದೆಯನ್ನು ಮಂಡಿಸಲು ಸರ್ಕಾರ ಮತ್ತೊಮ್ಮೆ ಪ್ರಯತ್ನಿಸುವ ಸಾಧ್ಯತೆಯಿದೆ.

ಇದಕ್ಕೂ ಮುನ್ನ, ಸಂಸತ್ತಿನಲ್ಲಿ ಮರುವಿಂಗಡಣೆ ಮಸೂದೆಯನ್ನು ಅಂಗೀಕರಿಸಲು ಬೆಂಬಲ ಕೋರಿ, ಪ್ರತಿಪಕ್ಷದ ಪ್ರತಿಯೊಬ್ಬ ಲೋಕಸಭಾ ಸಂಸದರಿಗೆ ಬಿಜೆಪಿ 150 ಕೋಟಿ ರೂಪಾಯಿಗಳನ್ನು ನೀಡುತ್ತಿದೆ ಎಂದು ಸಂಜಯ್ ರಾವುತ್ ಆರೋಪಿಸಿದ್ದರು. ವಿಶೇಷ ಅಧಿವೇಶನಗಳನ್ನು ಕರೆಯುವ ಮೂಲಕ, ಜನರ ಅಧಿಕಾರವನ್ನು ಶಾಶ್ವತವಾಗಿ ಕಸಿದುಕೊಳ್ಳಲು ಬಿಜೆಪಿ ಬಯಸುತ್ತಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.