ನಾವು ಸಿದ್ದರಾಮಯ್ಯನವರನ್ನು ಭೇಟಿ ಮಾಡುವುದಿಲ್ಲ: ಯೂ ಟರ್ನ್ ಹೊಡೆದ ಸತೀಶ್ ಜಾರಕಿಹೊಳಿ

ಸಮ್ಮಿಶ್ರ ಸರ್ಕಾರದ ಭವಿಷ್ಯ ಇನ್ನೂ ತೂಗುಯ್ಯಾಲೆಯಾಗಿದ್ದು, ಪೌರಾಡಳಿತ ಸಚಿವ ರಮೇಶ್ ...
ಸತೀಶ್ ಜಾರಕಿಹೊಳಿ ಮತ್ತು ಸಿದ್ದರಾಮಯ್ಯ(ಸಂಗ್ರಹ ಚಿತ್ರ)
ಸತೀಶ್ ಜಾರಕಿಹೊಳಿ ಮತ್ತು ಸಿದ್ದರಾಮಯ್ಯ(ಸಂಗ್ರಹ ಚಿತ್ರ)
Updated on: 

ಬೆಳಗಾವಿ: ಸಮ್ಮಿಶ್ರ ಸರ್ಕಾರದ ಭವಿಷ್ಯ ಇನ್ನೂ ತೂಗುಯ್ಯಾಲೆಯಾಗಿದ್ದು, ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದ ಕಾಂಗ್ರೆಸ್ ಶಾಸಕರ ಒಂದು ಬಣ ಇನ್ನು ಕೂಡ ಕಾಂಗ್ರೆಸ್ ತೊರೆಯಲು ಉತ್ಸುಕವಾಗಿದೆ ಎನ್ನಲಾಗಿದೆ.

ನಿನ್ನೆ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ, ಬಿಜೆಪಿಯು ಕೆಲವು ಅಸಂತೃಪ್ತ ಕಾಂಗ್ರೆಸ್ ಶಾಸಕರನ್ನು ತನ್ನತ್ತ ಸೆಳೆಯಲು ಕಾತರವಾಗಿದ್ದು, ಮೈತ್ರಿ ಸರ್ಕಾರ ನಾಳೆ ಬಿದ್ದು ಹೋದರೆ ಅದಕ್ಕೆ ತಾನು ಹೊಣೆ ಅಲ್ಲ, ತಾನು ಏನೂ ಮಾಡಲು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ.

ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಕಾಂಗ್ರೆಸ್ ಶಾಸಕರಿಗೆ ಆಮಿಷವೊಡ್ಡಿ ಸೆಳೆಯಲು ನೋಡುತ್ತಿದೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಕೆಲವು ಕಾಂಗ್ರೆಸ್ ಶಾಸಕರು ಬಿಟ್ಟುಹೋಗಿ ಬಿಜೆಪಿ ಸೇರಿದರೆ ಜಾರಕಿಹೊಳಿ ಬ್ರದರ್ಸ್ ಏನು ಮಾಡಲು ಸಾಧ್ಯ, ಅಂತಹ ಬೆಳವಣಿಗೆಗೆ ನಾನು ಹೇಗೆ ಪ್ರತಿಕ್ರಿಯೆ ನೀಡಲಿ ಎಂದು ಹೇಳಿರುವುದು ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಲ್ಲ ಎನ್ನುವುದು ಗೊತ್ತಾಗುತ್ತದೆ.

ಹೀಗೆ ಪ್ರತಿಕ್ರಿಯೆ ನೀಡಿ ತಕ್ಷಣವೇ ಎಚ್ಚೆತ್ತುಕೊಂಡ ಸತೀಶ್ ಜಾರಕಿಹೊಳಿ, ಮೈತ್ರಿ ಸರ್ಕಾರಕ್ಕೆ ಜಾರಕಿಹೊಳಿ ಸೋದರರಿಂದ ಯಾವುದೇ ತೊಂದರೆಯಿಲ್ಲ ಎಂದು ಹೇಳಿದರು. ಎರಡು ವಾರಗಳ ಹಿಂದೆ ಜಾರಕಿಹೊಳಿ ಸೋದರರ ನೇತೃತ್ವದಲ್ಲಿ ಕನಿಷ್ಠ 8 ಮಂದಿ ಶಾಸಕರು ಬಿಜೆಪಿಯನ್ನು ಸೇರಲು ಮುಂದಾಗಿದ್ದರು ಎನ್ನಲಾಗುತ್ತಿದೆ.

ಮೊನ್ನೆಯವರೆಗೆ ಸಿದ್ದರಾಮಯ್ಯನವರು ವಿದೇಶ ಪ್ರವಾಸ ಮುಗಿಸಿ ವಾಪಸ್ಸಾಗುವವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಹೇಳುತ್ತಿದ್ದ ಜಾರಕಿಹೊಳಿ ಬ್ರದರ್ಸ್ ನಿನ್ನೆ ಯೂ-ಟರ್ನ್ ಹೊಡೆದಿದ್ದಾರೆ. ನಾವು ಸಿದ್ದರಾಮಯ್ಯನವರನ್ನು ಭೇಟಿಯಾಗುವುದಿಲ್ಲ ಎಂದು ನಿನ್ನೆ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ನನಗೆ ಅಥವಾ ನನ್ನ ಸೋದರ ರಮೇಶ್ ಗೆ ಸಿದ್ದರಾಮಯ್ಯನವರನ್ನು ಭೇಟಿ ಮಾಡುವ ಅಗತ್ಯವಿಲ್ಲ. ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುವ ಯಾವುದೇ ಗಂಭೀರ ವಿಷಯಗಳು ಇಲ್ಲ ಎಂದು ಹೇಳಿದ್ದಾರೆ.

ಇನ್ನೊಂದೆಡೆ ಮೊನ್ನೆ ಶನಿವಾರದಿಂದ ಸಚಿವ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಮುಖಂಡರ ಕೈಗೆ ಸಿಗುತ್ತಿಲ್ಲ. ಅವರು ಎಲ್ಲಿದ್ದಾರೆ ಎಂದು ನಿನ್ನೆ ಕಾಂಗ್ರೆಸ್ ನಾಯಕರಿಗ್ಯಾರಿಗೂ ಮಾಹಿತಿ ಇರಲಿಲ್ಲ. ಕಳೆದ ಶನಿವಾರ ಬೆಳಗಾವಿಯಲ್ಲಿ ಪ್ರಮುಖ ಕಾರ್ಯಕ್ರಮಗಳಿದ್ದರೂ ಕೂಡ ಮುಖ್ಯಮಂತ್ರಿ ಭಾಗವಹಿಸಿದ್ದರೂ ರಮೇಶ್ ಜಾರಕಿಹೊಳಿ ಬಂದಿರಲಿಲ್ಲ. ಈ ಬಗ್ಗೆ ಸತೀಶ್ ಜಾರಕಿಹೊಳಿಯನ್ನು ಕೇಳಿದರೆ, ತಮಗೆ ಅವರು ಎಲ್ಲಿದ್ದಾರೆ ಎಂದು ಗೊತ್ತಿಲ್ಲ ಎಂದಿದ್ದಾರೆ. ರಮೇಶ್ ಜಾರಕಿಹೊಳಿ ಸರ್ಕಾರಿ ವಾಹನವನ್ನು ಬಳಸಿಲ್ಲ ಎನ್ನಲಾಗುತ್ತಿದೆ.

ಡಿಕೆಶಿ ವಿರೋಧಿ ಬಣ ಬಲವಾಗಿದೆಯೇ?:
ಜಾರಕಿಹೊಳಿ ಬ್ರದರ್ಸ್ ಗೆ ಆಪ್ತವಾಗಿರುವ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಕಾಂಗ್ರೆಸ್ ನಲ್ಲಿನ ಹಲವು ಅತೃಪ್ತ ನಾಯಕರು ಜಾರಕಿಹೊಳಿ ಬೆಂಬಲಿತ 8 ಶಾಸಕರಿಗೆ ಬೆಂಬಲ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಡಿ ಕೆ ಶಿವಕುಮಾರ್ ಕಾಂಗ್ರೆಸ್ ನಲ್ಲಿನ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಲು ನೋಡುತ್ತಿದ್ದು ಇದನ್ನು ಮಟ್ಟಹಾಕಲು ಕಾಂಗ್ರೆಸ್ ನೊಳಗೆ ಅತೃಪ್ತ ಶಾಸಕರು ಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com