ನಾವೇನು ರಾಜಕೀಯ ಸನ್ಯಾಸಿಗಳಲ್ಲ, ಮೈತ್ರಿ ಪತನಗೊಂಡರೆ ಸರ್ಕಾರ ರಚನೆ: ಯಡಿಯೂರಪ್ಪ

ನಾವೇನು ರಾಜಕೀಯ ಸನ್ಯಾಸಿಗಳಲ್ಲ, ಅತೃಪ್ತ ಶಾಸಕರು ರಾಜೀನಾಮೆ ನೀಡಿ ಮೈತ್ರಿ ಸರಕಾರ ಪತನಗೊಂಡರೆ...
ಬಿ ಎಸ್ ಯಡಿಯೂರಪ್ಪ
ಬಿ ಎಸ್ ಯಡಿಯೂರಪ್ಪ
Updated on: 
ಬೆಂಗಳೂರು: ನಾವೇನು ರಾಜಕೀಯ ಸನ್ಯಾಸಿಗಳಲ್ಲ, ಅತೃಪ್ತ ಶಾಸಕರು ರಾಜೀನಾಮೆ ನೀಡಿ ಮೈತ್ರಿ ಸರಕಾರ ಪತನಗೊಂಡರೆ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದು ಬಿಜೆಪಿ‌ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕ ಸ್ಥಾನಕ್ಕೆ ಆನಂದ್ ಸಿಂಗ್ ರಾಜೀನಾಮೆ ನೀಡಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ, ರಾಜ್ಯಪಾಲರ ಭೇಟಿ ಮಾಡುವ ಕುರಿತು ಮಾಧ್ಯಮಗಳಿಂದ ತಿಳಿದುಕೊಂಡಿದ್ದೇನೆ, ಇನ್ನೂ ಹತ್ತು ಹನ್ನೆರಡು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇದೆ. ಆದರೆ ಬಿಜೆಪಿ ಯಾವುದೇ ಕಾರಣಕ್ಕೂ ಸರ್ಕಾರವನ್ನು ಬೀಳಿಸುವ ಕೆಲಸಕ್ಕೆ ಕೈಹಾಕುವುದಿಲ್ಲ. ಆದರೆ ಅತೃಪ್ತ ಶಾಸಕರ ರಾಜೀನಾಮೆಯಿಂದ ಸರ್ಕಾರ ಬಿದ್ದರೆ ನಾವು ಸರ್ಕಾರ ರಚನೆ ಮಾಡುತ್ತೇವೆ ಎಂದರು.
ಈ ಸರ್ಕಾರ ಬೀಳಿಸುವ ಅಥವಾ ಆಡಳಿತರೂಢ ಪಕ್ಷಗಳ ಶಾಸಕರನ್ನು ಸೆಳೆಯುವ ಕೆಲಸಕ್ಕೆ ಬಿಜೆಪಿ ಕೈ ಹಾಕುವುದಿಲ್ಲ. ಅವರೇ ರಾಜೀನಾಮೆ ಕೊಟ್ಟರೆ ನೋಡೋಣ ಎಂದಿದ್ದೆ, ಈಗಲೂ ಅದನ್ನೇ ಹೇಳುತ್ತೇನೆ, ಏನಾಗಲಿದೆ ಎಂಬುದನ್ನು ಕಾದು ನೋಡುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.
ನಮಗೆ ಬಂದಿರುವ ಮಾಹಿತಿ‌ ಪ್ರಕಾರ, ಕಾಂಗ್ರೆಸ್, ಜೆಡಿಎಸ್ ನಲ್ಲಿ 20 ಕ್ಕೂ ಹೆಚ್ಚು ಅತೃಪ್ತ ಶಾಸಕರಿದ್ದಾರೆ, ಅವರು ಯಾವ ನಿಲುವು ತೆಗೆದುಕೊಳ್ಳಲಿದ್ದಾರೆ ಎನ್ನುವುದರ ಮೇಲೆ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ, ಆದರೆ ಸರ್ಕಾರ ಪತನಗೊಂಡರೆ ಯಾವುದೇ ಕಾರಣಕ್ಕೂ ಚುನಾವಣೆಗೆ ಹೋಗುವುದಿಲ್ಲ. ಅಂತಹ ಸ್ಥಿತಿ ಬಂದರೆ ನಾವು ಸರ್ಕಾರ ರಚಿಸಿ ಒಳ್ಳೆಯ ಆಡಳಿತ ನೀಡುತ್ತೇವೆ ಎಂದು ಬಿಜೆಪಿ ಸರ್ಕಾರ ರಚನೆಯ ಸುಳಿವು ನೀಡಿದರು.
ಮಳೆಗಾಲದ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಿಲ್ಲ, ಅದರ ಬದಲು ರಾಜ್ಯದಲ್ಲಿ ಬರ ಇದೆ, ಬರ ಸಮಸ್ಯೆ ಪರಿಹಾರಕ್ಕೆ ಚರ್ಚೆ ಆಗಬೇಕು, ಆ ನಿಟ್ಟಿನಲ್ಲಿ ನಾವು ಸದನದಲ್ಲಿ‌ ಚರ್ಚೆಗೆ ಮುಂದಾಗುತ್ತೇವೆ ಎಂದು ಹೇಳಿದರು.
ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ತರಲು ಹೊರಟಿರುವುದು ಅವೈಜ್ಞಾನಿಕ, ಯಾವ ಕಾರಣಕ್ಕೂ ಈ ಯೋಜನೆ ಜಾರಿ ಮಾಡಲು ಬಿಡುವುದಿಲ್ಲ. ಅದರ ಬದಲು ಕಾಲುವೆ ದುರಸ್ತಿ ಮಾಡಿ, ಬೆಂಗಳೂರಿಗೆ ನೀರು ಕೊಡಲು ನಮ್ಮ ಬೆಂಬಲ ಇದೆ, ಪರ್ಯಾಯ ವ್ಯವಸ್ಥೆ ಮಾಡಿ ಎಂದು ಸರ್ಕಾರಕ್ಕೆ ಯಡಿಯೂರಪ್ಪ ಸಲಹೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com