

ಬೆಂಗಳೂರು: ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ನವದೆಹಲಿಯಿಂದ ವಾಪಾಸಾಗಿದ್ದಾರೆ ಜೊತೆಗೆ ಕಾಂಗ್ರೆಸ್ ಹೈಕಮಾಂಡ್ ನೀಡಿರುವ ಖಡಕ್ ಸಂದೇಶವನ್ನು ಕೂಡ ಹೊತ್ತು ತಂದಿದ್ದಾರೆ. ಪಕ್ಷದಲ್ಲಿರುವ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗಿ ಎಂಬ ಸಂದೇಶ ರವಾನೆಯಾಗಿದೆ,
ಗುಂಪುಗಾರಿಕೆ, ಮೂಲ, ಹಾಗೂ ವಲಸಿಗ ಕಾಂಗ್ರೆಸ್ಸಿಗರು ಎಂಬ ಭಿನ್ನಾಬಿಪ್ರಾಯಗಳು ಮೂಡಿ, ಪಕ್ಷ ತೊರೆಯುವುದಾಗಿ ಹಲವು ಮಂದಿ ಬೆದರಿಕೆ ಹಾಕುತ್ತಿರುವ ಹಿನ್ನೆಲೆಯಲ್ಲಿ ಎಲ್ಲರನ್ನೂ ಒಗ್ಗಟ್ಟಾಗಿ ಕರೆದುಕೊಂಡು ನಡೆಯಿರಿ ಎಂದು ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ.
ಬುಧವಾರ ಮಾಜಿ ಸಿಎಂ ಸಿದ್ದರಾಮಯ್ಯ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿ ಉಪ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಫೈನಲ್ ಗೆ ಅಂಕಿತ ಹಾಕಿಸಿಕೊಂಡು ಬರುವ ವೇಳೆ, ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಡಿಸೆಂಬರ್ 5 ರಂದು ನಡೆಯುವ ಉಪ ಚುನಾವಣೆಗೆ ಇಂದಿನಿಂದಲೇ ಸಿದ್ಧತೆ ನಡೆಸುವಂತೆ ಸಿದ್ದರಾಮಯ್ಯಗೆ ಸೋನಿಯಾ ಗಾಂಧಿ ಆದೇಶಿದ್ದಾರೆ. ಶಿವಾಜಿ ನಗರ ಕ್ಷೇತ್ರಕ್ಕೆ ರಿಜ್ವಾನ್ ಅರ್ಷದ್ ಹೆಸರು ಕೇಳಿ ಬರುತ್ತಿದೆ,
ಇನ್ನೂ ಆರ್ ಆರ್ ನಗರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಕೆಆರ್ ಪುರಂ ಹಾಗೂ ಹೊಸಕೋಟೆಗಳಿಗೆ ಅಭ್ಯರ್ಥಿಗಳು ಯಾರು ಎಂಬುದು ಇನ್ನೂ ನಿಶ್ಚಯವಾಗಿಲ್ಲ. ಪ್ರತಿ ವಿಧಾನಸಭೆ ಕ್ಷೇತ್ರದಿಂದ ಒಬ್ಬೊಬ್ಬ ಸಮರ್ಥ ಅಭ್ಯರ್ಥಿ ಹೆಸರನ್ನು ಸಿದ್ದರಾಮಯ್ಯ ಪಟ್ಟಿ ಮಾಡಿ ತೆಗದುಕೊಂಡು ಹೋಗಿ ಸಲ್ಲಿಸಿದ್ದಾರೆ. ಶೀಘ್ರವೇ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಲಿದೆ. ಆದರೆ ಬೇಗ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸದರೇ ಹಲವರು ಬಂಡಾಯ ಏಳುವ ಸಾದ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಮಂಗಳವಾರ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ನಡೆಸಿದ ಸಭೆಯಲ್ಲಿ ಹಿರಿಯ ನಾಯಕರಾದ, ಕೆಎಚ್ ಮುನಿಯಪ್ಪ,. ಬಿ.ಕೆ ಹರಿಪ್ರಸಾದ್, ರಾಮಲಿಂಗಾ ರೆಡ್ಡಿ, ಎಚ್ ಕೆ ಪಾಟೀಲ್ ಸೇರಿದಂತೆ ಹಲವರು ಗೈರಾಗಿದ್ದರು. ಜೊತೆಗೆ ಸಿದ್ದರಾಮಯ್ಯ ದೆಹಲಿ ಪ್ರವಾಸದ ವೇಳೆಯೂ ಕೂಡ ಪಕ್ಷದ ಹಿರಿಯ ಮುಖಂಡರು ದೂರವೇ ಉಳಿದಿದ್ದರು.
ಬೈರತಿ ಸುರೇಶ್, ಅಶೋಕ್ ಪಟ್ಟಣ್ ಸೇರಿದಂತೆ ಮತ್ತಿತರರು ಸಿದ್ದರಾಮಗೆ ಸಾಥ್ ನೀಡಿದ್ದರು. ಕಾಂಗ್ರೆಸ್ ಹಿರಿಯ ನಾಯಕರುಗಳ ನಡುವೆ ನಡೆಯುತ್ತಿರುವ ಒಳಜಗಳದ ಬಗ್ಗೆ ಹೈಕಮಾಂಡ್ ಗಮನ ಹರಿಸಿದ್ದು, ಎಲ್ಲರೂ ಒಗ್ಗಟ್ಟಾಗಿ ಪಕ್ಷಕ್ಕಾಗಿ ಕೆಲಸ ಮಾಡುವಂತೆ ಸೂಚಿಸಿದೆ ಎನ್ನಲಾಗಿದೆ.