ಜನವರಿ 3ರಂದು ಸಚಿವ ಸಂಪುಟ ವಿಸ್ತರಣೆಗೆ ಚಿಂತನೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ರಾಜ್ಯದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಒಂದಾದ ನಂತರ ಒಂದು ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು. ರೈತನ ಒಳಿತಿಗೆ ಹಾಗೂ ಅವರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ದೊರಕುವಂತೆ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹುಬ್ಬಳ್ಳಿ: ರಾಜ್ಯದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಒಂದಾದ ನಂತರ ಒಂದು ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು. ರೈತನ ಒಳಿತಿಗೆ ಹಾಗೂ ಅವರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ದೊರಕುವಂತೆ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಧಾರವಾಡ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಭೂ ಪೂಜೆ ನೆರವೇರಿಸುವ ಸಲುವಾಗಿ, ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಇಲ್ಲಿನ ನವಲಗುಂದ ಹಾಗೂ ನರಗುಂದ ಸೇರಿದಂತೆ ಉತ್ತರ ಕರ್ನಾಟಕ ನೀರಾವರಿ ಯೋಜನೆಗಳಿಗೆ ಸಾವಿರ ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಈ ಕಾಮಗಾರಿಗಳಿಗೆ ಇಂದು‌ ಶಂಕು ಸ್ಥಾಪನೆ ನೆರವೇರಲಿದೆ ಎಂದು ಹೇಳಿದರು.

ಉಪಚುನಾವಣೆಯಲ್ಲಿ  ಆಡಳಿತ ಪಕ್ಷಕ್ಕೆ 12 ಸ್ಥಾನಗಳಲ್ಲಿ ಗೆಲುವು ದೊರೆತಿರುವುದು, ಯಾವುದೇ ಅಡ್ಡಿ ಆತಂಕ  ಇಲ್ಲದೆ ಮೂರುವರೆ ವರ್ಷಗಳ ಕಾಲ ಆಡಳಿತ ನೀಡಲು ಅವಕಾಶ ಕಲ್ಪಿಸಿದೆ. ಇನ್ನೂ ಆರು  ತಿಂಗಳಲ್ಲಿ ರಾಜ್ಯದ ಚಿತ್ರಣ ಬದಲಾವಣೆ ಮಾಡಲಿದ್ದೇವೆ. ಡಿಸೆಂಬರ್ ತಿಂಗಳ  ಅಂತ್ಯದಲ್ಲಿ ದೆಹಲಿಗೆ ತೆರಳಿ ಪಕ್ಷದ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ  ಚರ್ಚಿಸಿದ ನಂತರ, ಪಕ್ಷವನ್ನು ಬೆಂಬಲಿಸಿ ಚುನಾವಣೆಯಲ್ಲಿ ವಿಜೇತರಾದ ಎಲ್ಲರಿಗೂ ಸಚಿವ  ಸ್ಥಾನ ನೀಡಲಾಗುವುದು ಎಂದು ಹೇಳಿದರು. 

ಪ್ರಧಾನ  ಮಂತ್ರಿಗಳು ಜನವರಿ 2 ರಂದು ರಾಜ್ಯಕ್ಕೆ ಆಗಮಿಸಲಿದ್ದಾರೆ. ಜನವರಿ 3 ರಂದು ಬೃಹತ್  ಸಮಾವೇಶವನ್ನು ಏರ್ಪಡಿಸಿ ಸಚಿವ ಸಂಪುಟ ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಪ್ರಧಾನ  ಮಂತ್ರಿಗಳ ಕಾರ್ಯಾಲಯದೊಂದಿಗೆ ಚರ್ಚೆ ನಡೆಸಲಾಗುತ್ತಿದೆ.  ಮಹಾದಾಯಿ ಹೋರಾಟ ಬಹುದಿನಗಳದ್ದು, ಗೋವಾ ಹಾಗೂ ಕೇಂದ್ರ ಸರ್ಕಾರದೊಂದಿಗೆ ಮಾತನಾಡಿ ಆದಷ್ಟೂ ಬೇಗ ಸಮಸ್ಯೆ ಪರಿಹರಿಸಲಾಗುವುದು ಎಂದು ಹೇಳಿದರು.

ನಿರ್ಭಯ ಪ್ರಕರಣದ ತೀರ್ಪಿಗೆ ಸ್ವಾಗತ 
ನಿರ್ಭಯ  ಪ್ರಕರಣದ ಅತ್ಯಾಚಾರಿಗಳಿಗೆ ಸರ್ವೋಚ್ಚ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿರುವುದನ್ನು  ಮುಖ್ಯಮಂತ್ರಿಗಳು ಸ್ವಾಗತಿಸಿದ್ದಾರೆ. ತ್ವರಿತವಾಗಿ ಘಟನೆಯ ಬಗ್ಗೆ ನ್ಯಾಯಾಲಯ ತೀರ್ಪು  ನೀಡಿದೆ. ಈ ತರಹದ ಕೃತ್ಯಗಳಲ್ಲಿ ಪಾಲ್ಗೊಳ್ಳುವರಿಗೆ ಎಚ್ಚರಿಕೆ ಗಂಟೆಯಾಗಿದೆ ಎಂದು  ಹೇಳಿದರು.

ಬೆಂಗಳೂರಿನಿಂದ  ಆಗಮಿಸಿದ ಮುಖ್ಯಮಂತ್ರಿಗಳಿಗೆ ಜಿಲ್ಲಾಡಳಿತದಿಂದ ಗೌರವ ರಕ್ಷೆ ನೀಡಲಾಯಿತು. ಉಪ ಮುಖ್ಯ  ಮಂತ್ರಿ, ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಗೋವಿಂದ ಎಂ . ಕಾರಜೋಳ,  ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ಯಿಮೆ ಹಾಗೂ ಧಾರವಾಡ ಜಿಲ್ಲಾ  ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್, ಗಣಿ ಮತ್ತು ವಿಜ್ಞಾನ ಹಾಗೂ ವಾಣಿಜ್ಯ ಮತ್ತು  ಕೈಗಾರಿಕಾ ಸಚಿವ ಸಿ.ಸಿ.ಪಾಟೀಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com