
ಬೆಂಗಳೂರು: ವಿಧಾನಪರಿಷತ್ತಿನಲ್ಲಿ ವಿಧೇಯಕ ಅಂಗೀಕಾರಕ್ಕೆ ಅಡ್ಡಿ ಉಂಟಾದ ಕಾರಣಕ್ಕೆ ಸುಗ್ರೀವಾಜ್ಞೆ ಮೂಲಕ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.
ಶುಕ್ರವಾರ ತಮ್ಮ ನಿವಾಸದಲ್ಲಿ ಗೋಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಪರಿಷತ್ತಿನ ಕಲಾಪ ಸಲಹಾ ಸಮಿತಿಯಲ್ಲಿ ಡಿ.15ರವರೆಗೆ ಸದನದ ಕಲಾಪ ನಡೆಸುವಂತೆ ತೀರ್ಮಾನಿಸಲಾಗಿತ್ತು. ಆ ಸಭೆಯಲ್ಲ ಸಭಾಪತಿಗಳು ಕೂಡ ಇದ್ದರು. ಆದರೆ, ಈಗ ಏಕಾಏಕಿ ಸದನವನ್ನು ಸಭಾಪತಿಗಳು ಮುಂದೂಡಿಕೆ ಮಾಡಿದ್ದು ಸರಿಯಲ್ಲ ಎಂದು ಹೇಳಿದ್ದಾರೆ.
ಸದನ ಮುಂದೂಡುವ ಅಧಿಕಾರವೂ ಅವರಿಗಿಲ್ಲ. ಹಾಗಾಗಿ ಮಂಗಳವಾರ ಮತ್ತೆ ಸದನ ನಡೆಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರಕ್ಕೆ ಕೊನೆ ಪ್ರಯತ್ನ ನಡೆಸುವ ಪರೋಕ್ಷ ಸುಳಿವು ನೀಡಿದ್ದಾರೆ.
ಶ್ರದ್ಧಾ ಭಕ್ತಿಯಿಂದ ಗೋ ಮಾತೆಗೆ ಪೂಜೆ ಸಲ್ಲಿಸಿದ್ದೇವೆ. ಹಿಂದೂ ಧರ್ಮದಲ್ಲಿ ಗೋವುಗಳನ್ನು ಪೂಜ್ಯ ಭಾವದಿಂದ ಕಾಣುವುದು ಜಗತ್ತಿಗೆ ಗೊತ್ತಿರುವ ವಿಚಾರ. ಕೃಷಿ ಪ್ರಧಾನ ಭಾರತದಲ್ಲಿ ಪಶುಸಂಗೋಪನೆ ಕೃಷಿಕರಿಗೆ ಆದಾಯ ನೀಡುವ ಉಪ ಕಸುಬಾಗಿದೆ. ಹೀಗಾಗಿ ನಮ್ಮ ರಾಜ್ಯದ ಗೋ ಸಂಪತ್ತಿನ ರಕ್ಷಣೆಗೆ ಸರ್ಕಾರ ಕಾನೂನು ಜಾರಿಗೊಳಿಸಿದೆ ಎಂದು ಹೇಳಿದರು.
Advertisement