

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಗುರುವಾರ ಸಂಪುಟ ವಿಸ್ತರಣೆಯಾಗುವುದು ಖಚಿತವಾಗಿದ್ದು, 13 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಈ ಕುರಿತು ಮಾತನಾಡಿರುವ ಅವರು, " ನಾಳೆ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, 13 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಎರಡು ಮೂರು ದಿನಗಳಲ್ಲಿ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗುತ್ತದೆ" ಎಂದು ಹೇಳಿದ್ದಾರೆ. ಪಕ್ಷದಲ್ಲಿ ಸಚಿವ ಸ್ಥಾನ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಅದು ಸಹಜ. ಆದರೆ, ಇದನ್ನು ಮುಖ್ಯಮಂತ್ರಿಯವರು ಸಮರ್ಥವಾಗಿ ನಿಭಾಯಿಸುತ್ತಾರೆ. ಸೋತ ಮತ್ತು ಗೆದ್ದ ಶಾಸಕರಿಗೆ ಸಚಿವ ಸ್ಥಾನದ ಬಗ್ಗೆ ಕೇವಲ ಚರ್ಚೆ ಮಾತ್ರ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.