

ಬೆಂಗಳೂರು: ನಮ್ಮನ್ನು ನೋಡಿದಾಗಲೆಲ್ಲ ಕೂಡಲೇ ಮಂತ್ರಿ ಮಾಡುವುದಾಗಿ ಸಿಎಂ ಹೇಳುತ್ತಾರೆ, ಆದರೆ ಇನ್ನೂ ಕೂಡ ನಮ್ಮನ್ನು ಮಂತ್ರಿ ಮಾಡಲು ನಿರ್ಧಾರ ಮಾಡಿಲ್ಲ ಎಂದು ಎಂಟಿಬಿ ನಾಗರಾಜ್ ಅಸಮಾಧಾನ ಹೊರ ಹಾಕಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು , ಬಿಜೆಪಿ ಪಕ್ಷದಲ್ಲಿ ಯಾರನ್ನು ಬೇಕಾದರೂ ಮಂತ್ರಿ ಮಾಡಿಕೊಳ್ಳಲಿ ಆದರೆ ನಾವು ತ್ಯಾಗ ಮಾಡಿ ಬಂದಿರುವವರಿಗೆ ಮೊದಲು ಮಂತ್ರಿ ಮಾಡಬೇಕು ಎಂದು ಎಂಟಿಬಿ ಆಗ್ರಹಪಡಿಸಿದರು.
ಇದೇ ವೇಳೆ ಮಾತನಾಡಿದ ಆರ್ ಶಂಕರ್ ಸಿಎಂ ಬೇಗ ಸಂಪುಟ ವಿಸ್ತರಣೆ ಮಾಡಬೇಕು, ಅವರು ಮನಸ್ಸು ಮಾಡಿದರೆ ಇಂದೇ ಮಾಡಬಹುದು ನಾವು ಕೂಡ ಬಹಳಷ್ಟು ನಿರೀಕ್ಷೆ ಯಲ್ಲಿದ್ದೇವೆ ಎಂದರು.
ಕುರುಬ ಸಮುದಾಯವನ್ನು ಎಸ್ ಟಿ ಗೆ ಸೇರಿಸುವ ಸಂಬಂಧ ತ್ವರಿತವಾಗಿ ನಿರ್ಧಾರ ತೆಗೆದುಕೊಳ್ಳಲು ಹೇಳಿದ್ದೇವೆ, ಕುರುಬರ ಅಭಿವೃದ್ಧಿ ನಿಗಮ ಮಾಡಿ 500 ಕೋಟಿ ರೂ. ಮೀಸಲಿಡಲು ಆಗ್ರಹ ಮಾಡಿದ್ದೇವೆ, ನೀವು ಸಿಎಂ ಆಗಲು ಕಾರಣರಾದ ನಾಲ್ಕು ಕುರುಬ ಶಾಸಕರ ಪೈಕಿ ಬಾಕಿ ಇರುವ ಮೂವರನ್ನೂ ಮಂತ್ರಿ ಮಾಡಬೇಕು ಎಂದು ಸಿಎಂಗೆ ಮನವಿ ಮಾಡಿರುವುದಾಗಿ ಎಚ್. ವಿಶ್ವನಾಥ್ ಹೇಳಿದ್ದಾರೆ.
ಸಚಿವ ಸಂಪುಟ ಸೇರಲು ಲಾಬಿ ನಡೆಸುತ್ತಿರುವ ಕುರುಬ ಸಮುದಾಯದ ಆಕಾಂಕ್ಷಿಗಳ ಬೆನ್ನಿಗೆ ಸಮುದಾಯದ ಸ್ವಾಮೀಜಿಗಳು ನಿಂತಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಕನಕ ಪೀಠ ಈಶ್ವರಾನಂದ ಪುರಿ ನೇತೃತ್ವದಲ್ಲಿ ಸ್ವಾಮೀಜಿಗಳು ಸಮುದಾಯದವರಿಗೆ ಮಂತ್ರಿಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ.
ಕುರುಬ ಸಮುದಾಯದಿಂದ ಆರ್. ಶಂಕರ್, ಎಂಟಿಬಿ ನಾಗರಾಜ್, ಹಾಗೂ ಹೆಚ್.ವಿಶ್ವನಾಥ್ ಸಚಿವ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದು, ಇವರುಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು.ಅಲ್ಲದೇ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಸಮುದಾಯಕ್ಕೆ ನಿಗಮ ಸ್ಥಾಪನೆ ಮಾಡಬೇಕು. ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಆರಂಭಿಕ ಅನುದಾನ ನೀಡಿದಂತೆ 500 ಕೋ ರೂ. ಅನ್ನು ಕುರುಬ ಸಮುದಾಯದ ನಿಗಮಕ್ಕೂ ನೀಡಬೇಕೆಂದು ಮನವಿ ಮಾಡಿದರು. ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕು. ಈ ಸಂಬಂಧ ರಾಜ್ಯ ಸರ್ಕಾರ ಶೀಘ್ರವೇ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.