ಉಪಚುನಾವಣೆ: ಜನದಟ್ಟಣೆ ನಿಯಂತ್ರಿಸಲು ಟೋಕನ್ ವ್ಯವಸ್ಥೆ ಜಾರಿ

ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರಿನ ರಾಜರಾಜೇಶ್ವರಿನಗರ ವಿಧಾನಸಭಾ ಉಪಚುನಾವಣೆಗೆ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ. ಇದರ ಬೆನ್ನಲ್ಲೇ ಕೋವಿಡ್‌ ಸೋಂಕಿತರು, ಶಂಕಿತರಿಗೆ ಅಂಚೆ ಮತದಾನದ ಅವಕಾಶ ಸೇರಿದಂತೆ ಸುರಕ್ಷಿತ ಮತದಾನಕ್ಕೆ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರಿನ ರಾಜರಾಜೇಶ್ವರಿನಗರ ವಿಧಾನಸಭಾ ಉಪಚುನಾವಣೆಗೆ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ. ಇದರ ಬೆನ್ನಲ್ಲೇ ಕೋವಿಡ್‌ ಸೋಂಕಿತರು, ಶಂಕಿತರಿಗೆ ಅಂಚೆ ಮತದಾನದ ಅವಕಾಶ ಸೇರಿದಂತೆ ಸುರಕ್ಷಿತ ಮತದಾನಕ್ಕೆ ಮಾರ್ಗಸೂಚಿಗಳನ್ನು ಹೊರಡಿಸಿದೆ.

80 ವರ್ಷ ಮೇಲ್ಪಟ್ಟವರಿಗೆ, ವಿಕಲಚೇತನರಿಗೆ ಮತ್ತು ಕೋವಿಡ್‌ ಶಂಕರಿತರಿಗೆ ಅಂಚೆ ಮತದಾನದ ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಮತಗಟ್ಟೆಗೆ ಆಗಮಿಸುವ ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳಬೇಕು ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.

ಜೊತೆಗೆ, ಮತಗಟ್ಟೆ ಸಿಬ್ಬಂದಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಂಡು ಆಸನದ ವ್ಯವಸ್ಥೆ ಮಾಡಿಕೊಳ್ಳಬೇಕು ಎಂಬ ನಿಯಮವನ್ನು ಕೂಡ ಆಯೋಗ ವಿಧಿಸಿದೆ.

ಉಪಚುನಾವಣೆ ವೇಳೆ ಮಾಸ್ಕ್ ಧರಿಸುವುದು, ಥರ್ಮಲ್ ಸ್ಕ್ರೀನಿಂಗ್ಮಾಡುವುದು, ಮತದಾನ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಾಮಾನ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಮತದಾನ ಕ್ಷೇತ್ರಗಳಲ್ಲಿ ಜನದಟ್ಟಣೆ ತಪ್ಪಿಸಲು ಹೊಸ ನಿಯಮಗಳನ್ನು ಅನುಸರಿಸುವಂತೆ ಸೂಚಿಸಿದೆ. 

ಜನ ದಟ್ಟಣೆ ನಿಯಂತ್ರಿಸಲು ಟೋಕನ್ ವ್ಯವಸ್ಥೆ ಜಾರಿಗೆ ತರುವಂತೆ ಸೂಚಿಸಿದೆ. ಮತದಾನ ಕ್ಷೇತ್ರಗಳಿಗೆ ಫಸ್ಟ್ ಕಮ್ ಫಸ್ಟ್ ವೋಟ್ ನಿಯಮ ಜಾರಿಗೆ ತರಲು ಮುಂದಾಗಿದೆ. 

ಮತದಾನ ಕ್ಷೇತ್ರಕ್ಕೆ ಬರುವ ಪ್ರತೀಯೊಬ್ಬರನ್ನೂ ಆಶಾ ಕಾರ್ಯಕರ್ತರು ಥರ್ಮಲ್ ಸ್ಕ್ರೀನಿಂಗ್'ಗೆ ಒಳಪಡಿಸಬೇಕು. ಸ್ಥಳಕ್ಕೆ ಅನುಗುಣವಾಗಿ 15-20 ಮಂದಿ ಇರುವಂತೆ ಹಾಗೂ 6 ಅಡಿ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು. ಮತದಾನ ಮಾಡಲು ಬರುವ ವ್ಯಕ್ತಿ ಒಳಗೆ ಹೋಗುವಾಗ ಹಾಗೂ ಹೊರಗೆ ಬರುವ ವೇಳೆ ಸ್ಯಾನಿಟೈಸ್ ಬಳಕೆ ಮಾಡುವಂತೆ ನೋಡಿಕೊಳ್ಳಬೇಕು. ಮತಗಟ್ಟೆಯಲ್ಲಿರುವ ಪ್ರತೀಯೊಬ್ಬ ಅಧಿಕಾರಿಯೂ ಮಾಸ್ಕ್ ಧಾರಣೆ, ಸ್ಯಾನಿಟೈಸರ್ ಬಳಕೆ, ಫೇಸ್ ಶೀಲ್ಡ್, ಗ್ಲೌಸ್, ಪಿಪಿಇ ಕಿಟ್ ಗಳನ್ನು ಧರಿಸಿರುವುದು ಕಡ್ಡಾಯ. 

ಮನೆಬಾಗಿಲಿಗೆ ತೆರಳಿ ಮತ ಕೇಳುವುದಕ್ಕೆ ಅನುಮತಿ ನೀಡಲಾಗಿದ್ದು, ಪ್ರತೀ ಅಭ್ಯರ್ಥಿಗಳು ಕ್ಷೇತ್ರಕ್ಕೆ ಭೇಟಿ ನೀಡಿದ ಅರ್ಧ ಗಂಟೆಯ ಬಳಿಕ ಮತ್ತೊಬ್ಬ ಅಭ್ಯರ್ಥಿ ಪ್ರಚಾರ (ರೋಡ್ ಶೋ) ನಡೆಸಬಹುದಾಕಿದೆ. ನಿಯಮ ಪಾಲನೆ ಮಾಡದಿರುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಸಾಂಕ್ರಾಮಿಕ ಕಾಯ್ದೆಯಡಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com