ಯಾರ ಕುಟುಂಬದ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದಿಲ್ಲ ಹೇಳಿ? ಮಾಜಿ ಸಿಎಂ ಎಚ್‍ಡಿಕೆ ಪ್ರಶ್ನೆ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುಟುಂಬದ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.
ಎಚ್‌ಡಿ ಕುಮಾರಸ್ವಾಮಿ
ಎಚ್‌ಡಿ ಕುಮಾರಸ್ವಾಮಿ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುಟುಂಬದ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.

ರಾಜಕಾರಣಿಗಳ ಮೇಲೆ ಭ್ರಷ್ಟಾಚಾರದ ಆರೋಪ ಬರುವುದು ಸಹಜ. ಯಾರ ಕುಟುಂಬದಲ್ಲಿ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದಿಲ್ಲ ಹೇಳಿ?. ಭ್ರಷ್ಟಾಚಾರ ವಿಷಯಗಳ ತಾರ್ಕಿಕ ಅಂತ್ಯ ಎಲ್ಲಿಗೆ ಹೋಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿದೆ ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದರು.

ವಿಧಾನಸೌಧದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವಿಶ್ವಾಸ ನಿರ್ಣಯ ವಿಚಾರದ ಬಗ್ಗೆ ಜೆಡಿಎಸ್ ಈಗಲೇ ಏನು ಮಾತನಾಡುವುದಿಲ್ಲ. ಸಂದರ್ಭ ಬಂದಾಗ ಯೋಚಿಸುತ್ತೇನೆ. ನನ್ನ ವಿಶ್ವಾಸಕ್ಕಿಂತ ರಾಜ್ಯದ ಜನತೆಯ ವಿಶ್ವಾಸ ಮುಖ್ಯವಾಗಿದ್ದು, ಕೊರೋನಾ ಸಂಕಷ್ಟ ಇರುವಾಗ ನಾವೆಲ್ಲರೂ ಒಟ್ಟಾಗಿ ಕೆಲಸ ನಿರ್ವಹಿಸಬೇಕಾದ ಸಂದರ್ಭದಲ್ಲಿ ಗೊಂದಲ ಮೂಡಿಸುವ ನಡೆಗಳು ಏಕೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಕೇವಲ ಪ್ರಚಾರಕ್ಕಾಗಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ವಿಚಾರ ಮಂಡಿಸಿರಬಹುದು. ನಮ್ಮ ಪಕ್ಷ ಈ ಕುರಿತು ಯಾವುದೇ ಚರ್ಚೆ ನಡೆಸಿಲ್ಲ ಎಂದರು.

ಸದನದಲ್ಲಿ ನೆರೆ ಹಾವಳಿ, ಕೋವಿಡ್ ನಿಂದ ಎದುರಾಗಿರುವ ಕೆಟ್ಟ ಪರಿಸ್ಥಿತಿಯನ್ನು ಎಲ್ಲಾ ಜನಪ್ರತಿನಿಧಿಗಳು ಜೊತೆಯಾಗಿ ಎದುರಿಸಬೇಕಿದೆ. ಭೂ ಸುಧಾರಣಾ ಕಾಯಿದೆ ಬಗ್ಗೆ ಚರ್ಚೆ ಮಾಡಬೇಕಿತ್ತು. ಸರ್ಕಾರ ಏನೇ ಮಾಡಿದರೂ ನಡೆಯುತ್ತದೆ ಎಂಬ ಧೋರಣೆ ಸರಿಯಲ್ಲ. ಎಪಿಎಂಸಿ ಮತ್ತು ಭೂಸುಧಾರಣಾ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುವ ಅವಶ್ಯಕತೆ ಏನಿತ್ತು ಎಂದು ಹೇಳುವ ಮೂಲಕ ಯಡಿಯೂರಪ್ಪ ಕುಟುಂಬದ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪ ಕುರಿತು ಕೇಳಿದ ಪ್ರಶ್ನೆಗೆ ವಿಷಯಾಂತರ ಮಾಡಿದರು.

ಈ ಎರಡೂ ಕಾಯ್ದೆಗಳನ್ನು ವಿರೋಧಿಸಿ ಜೆಡಿಎಸ್ ಎಲ್ಲ ಜಿಲ್ಲಾಕೇಂದ್ರಗಳಲ್ಲೂ ಪ್ರತಿಭಟನೆ ನಡೆಸಲಿದೆ. ಆದರೆ ತಾವು ಶಸ್ತ್ರ ತ್ಯಾಗ ಮಾಡಿಲ್ಲ. ಈ ಕಾಯ್ದೆಯಲ್ಲಿರುವ ಸಾಧಕ-ಬಾಧಕಗಳ ಬಗ್ಗೆ ರೈತರು, ಶಾಸಕರ ಜತೆ ಚರ್ಚೆ ಮಾಡಬೇಕಾಗಿತ್ತು. ಇದರಿಂದ ರೈತರಿಗೆ ಯಾವ ರೀತಿ ಅನುಕೂಲವಾಗುತ್ತದೆ. ಯಾವ ಉದ್ದೇಶಕ್ಕಾಗಿ ಈ ಕಾಯ್ದೆಯನ್ನು ಜಾರಿಗೆ ತಂದಿದ್ದೇವೆ ಎಂಬುದನ್ನು ಸರ್ಕಾರ ಬೆಳಕು ಚೆಲ್ಲಬೇಕಾಗಿತ್ತು. ಆದರೆ ಯಾವುದೇ ಚರ್ಚೆಯಾಗಿಲ್ಲ. ಆದ್ದರಿಂದ ಸರ್ಕಾರ ಈ ಕಾಯ್ದೆಗಳನ್ನು ವಾಪಸ್ಸು ಪಡೆಯಬೇಕೆಂದು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com