ಕೋವಿಡ್ ರೋಗಿಗಳಿಗೆ ನೆರವು ನೀಡಲು ಕರ್ನಾಟಕ ರಾಜಕೀಯ ಪಕ್ಷಗಳಿಂದ ಕಾರ್ಯಕರ್ತರು ಸಜ್ಜು!

ರಾಜ್ಯದಲ್ಲಿ ಕೊರೋನಾ ಆರ್ಭಟ ಹೆಚ್ಚಾಗುತ್ತಲೇ ಇದ್ದು, ಸೋಂಕಿತ ಜನರಿಗೆ ವೈದ್ಯಕೀಯ ವ್ಯವಸ್ಥೆ ಕಲ್ಪಿಸುವಲ್ಲಿ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಸೋಂಕಿತರಿಗೆ ನೆರವಾಗಲು ರಾಜಕೀಯ ಪಕ್ಷಗಳು ಕಾರ್ಯಕರ್ತರನ್ನು ಸಜ್ಜುಗೊಳಿಸುತ್ತಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಆರ್ಭಟ ಹೆಚ್ಚಾಗುತ್ತಲೇ ಇದ್ದು, ಸೋಂಕಿತ ಜನರಿಗೆ ವೈದ್ಯಕೀಯ ವ್ಯವಸ್ಥೆ ಕಲ್ಪಿಸುವಲ್ಲಿ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಸೋಂಕಿತರಿಗೆ ನೆರವಾಗಲು ರಾಜಕೀಯ ಪಕ್ಷಗಳು ಕಾರ್ಯಕರ್ತರನ್ನು ಸಜ್ಜುಗೊಳಿಸುತ್ತಿವೆ. 

ಬಿಜೆಪಿ ರಾಜ್ಯ ಕಾರ್ಯದರ್ಶಿ ಎನ್.ರವಿಕುಮಾರ್ ಅವರು ಮಾತನಾಡಿ, ಪಕ್ಷವು ಈಗಾಗಲೇ ಪ್ರತಿ ಲೋಕಸಭಾ ಕ್ಷೇತ್ರದಲ್ಲಿಯೂ ಸಹಾಯವಾಣಿಗಳನ್ನು ಆರಂಭಿಸಲಾಗಿದೆ. ಇದು ಐಸಿಯು ಹಾಸಿಗೆ, ಆಮ್ಲಜನಕ ಮತ್ತು ಶವಾಗಾರಗಳಿಗೆ ಆಂಬುಲೆನ್ಸ್‌ಗಳನ್ನು ನೋಡಿಕೊಳ್ಳುವ ಬಿಜೆಪಿ ಕಾರ್ಯಕರ್ತರನ್ನು ಸಂಪರ್ಕಿಸುತ್ತದೆ ಎಂದು ಹೇಳಿದ್ದಾರೆ. 

ತಾಲೂಕು ಮಟ್ಟದಲ್ಲಿ 300 ಮಂಡಲಗಳಿದ್ದು, ಎಲ್ಲಾ ಮಂಡಲದಲ್ಲಿಯೂ 600 ವೈದ್ಯರನ್ನು ನಿಯೋಜಿಸಲು ಚಿಂತನೆ ನಡೆಸಲಾಗುತ್ತಿದೆ. ಸಾಕಷ್ಟು ಜನರು ಸೋಂಕು ಕಾಣಿಸಿಕೊಂಡ ಕೂಡಲೇ ಮನೆ ಆರೈಕೆಯಲ್ಲಿಯೇ ಗುಣಮುಖರಾಗುವ ಅವಕಾಶವಿದ್ದರೂ ಭೀತಿಗೊಳಗಾಗಿ ಆಸ್ಪತ್ರೆಗಳಿಗೆ ದೌಡಾಯಿಸುತ್ತಿದ್ದಾರೆ.  ವೈದ್ಯರ ನಿಯೋಜನೆಯಿಂದ ಇಂತಹ ಜನರಿಂದ ಆಸ್ಪತ್ರೆಗಳಲ್ಲಿ ಎದುರಾಗಿರುವ ಒತ್ತಡಗಳನ್ನು ನಿವಾರಿಸಬಹುದು ಎಂದು ತಿಳಿಸಿದ್ದಾರೆ. 

ಈ ನಡುವೆ ಬಿಜೆಪಿ ಹಾಗೂ ರಾಜ್ಯ ಸರ್ಕಾರ ಶಾಲೆಗಳು, ಕಾಲೇಜು ಹಾಗೂ ಸಮುದಾಯ ಭವನಗಳನ್ನು ಕೋವಿಡ್ ಕೇರ್ ಕೇಂದ್ರಗಳನ್ನಾಗಿ ಮಾರ್ಪಡಿಸಲು ಚಿಂತನೆ ನಡೆಸಿದ್ದು, ಈ ಕೇಂದ್ರಗಳಲ್ಲಿ ಕೊರೋನಾ ಸೋಂಕಿತರಿಗೆ ಹಾಸಿಗೆ ವ್ಯವಸ್ಥೆ ಮಾಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. 

ಇನ್ನು ಕಾಂಗ್ರೆಸ್ ಕೂಡ ಸೋಂಕಿತ ಜನರಿಗೆ ಸಹಾಯ ಮಾಡಲು ಕಾರ್ಯಕರ್ತರನ್ನು ಒಗ್ಗೂಡಿಸುತ್ತಿದೆ. ಕರ್ನಾಟಕ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ರಕ್ಷಾ ರಾಮಯ್ಯ ಅವರು ಮಾತನಾಡಿ, ಐಸಿಯು ಹಾಸಿಗೆ, ಔಷಧಿಗಳನ್ನು ನೀಡುವುದರಿಂದ ಹಿಡಿದು ಎಲ್ಲೆಡೆ ಸಹಾಯಗಳನ್ನು ಮಾಡುವ ಕಾರ್ಯಗಳನ್ನು ಮಾಡಲಾಗುತ್ತಿದೆ. ಪ್ರಮುಖವಾಗಿ ಹೆಚ್ಚು ಸೋಂಕಿತರಿರುವ ಬೆಂಗಳೂರಿನಲ್ಲಿ ನಮ್ಮ ತಂಡ ಹೆಚ್ಚು ಕಾರ್ಯನಿರ್ವಹಿಸುತ್ತಿವೆ. ಇದಲ್ಲದೆ, ಬಳ್ಳಾರಿ, ಬೆಳಗಾವಿ, ಕಲಬುರಗಿಯಲ್ಲೂ ನೆರವಿನ ಕಾರ್ಯ ನಡೆಯುತ್ತಿವೆ ಎಂದು ತಿಳಿಸಿದ್ದಾರೆ. 

ಒಟ್ಟು 24 ಜನರ ತಂಡವಿದ್ದು, 8 ಮಂದಿ ಸದಸ್ಯರು 8 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಸಾಮಾಜಿಕ ಜಾಲತಾಣಗಳಲ್ಲಿ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿರುವ ಸೋಂಕಿತರಿಗೆ ವ್ಯವಸ್ಥೆಗಳನ್ನು ಕಲ್ಪಿಸುತ್ತಿದ್ದಾರೆ ಎಂದು ಹೇಳಿದ್ದಾರೆ. 

ಭಾರತೀಯ ಜನತಾ ಯುವ ಮೋರ್ಚಾ, ಸಂಸದ ತೇಜಸ್ವಿ ಸೂರ್ಯ ನೇತೃತ್ವದ ತಂಡ ಹಾಗೂ ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರು ತಂತ್ರಜ್ಞಾನ ಬಳಕೆ ಮಾಡುತ್ತಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಸೋಂಕಿತರಿಗೆ ಸಹಾಯ ಮಾಡುವ ಕೆಲಸ ಮಾಡುತ್ತಿದ್ದಾರೆ. 

ಆಶ್ಚರ್ಯಕರ ವಿಚಾರವೆಂದರೆ ಜೆಡಿಎಸ್ ಮಾತ್ರ ಎಲ್ಲಿಯೂ ಕಾಣಸಿಗುತ್ತಿಲ್ಲ. ಸೋಂಕಿತರಿಗೆ ನೆರವಾಗುವ ಬದಲು ಜೆಡಿಎಸ್ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡುತ್ತಿರುವುದು ಕಂಡು ಬರುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com