

ಬೆಂಗಳೂರು: ತಮ್ಮ ನಾಯಕತ್ವದ ವಿರುದ್ಧ ಪಕ್ಷದೊಳಗಿನ ಒಂದು ಗುಂಪು ಪದೇ ಪದೇ ಗೊಂದಲ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ ಕುರ್ಚಿಯನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯ ಪ್ರವಾಸ ಕೈಗೊಳ್ಳಲು ಮುಂದಾಗಿದ್ದಾರೆ.
ರಾಜ್ಯಾದ್ಯಂತ ಪ್ರವಾಸ ಮಾಡಿ ಈ ಮೂಲಕ ತಮ್ಮ ನಾಯಕತ್ವದ ವಿರುದ್ಧ ಎದ್ದಿರುವ ಗೊಂದಲಗಳಿಗೆ ತೆರೆ ಎಳೆದು 2023ರ ವಿಧಾನಸಭೆ ಚುನಾವಣೆವರೆಗೂ ತಾವೇ ಅಧಿಕಾರದಲ್ಲಿ ಮುಂದುವರೆಯುತ್ತೇನೆ ಎಂಬ ಸಂದೇಶವನ್ನು ವಿರೋಧಿ ಬಣಗಳಿಗೆ ನೀಡಲು ಸಜ್ಜಾಗಿದ್ದಾರೆ.
ರಾಜ್ಯದ 31 ಜಿಲ್ಲೆಗಳಲ್ಲಿಯೂ ಯಡಿಯೂರಪ್ಪ ಪ್ರವಾಸ ಮಾಡಲಿದ್ದು, ತುಮಕೂರಿನಿಂದಲೇ ಆರಂಭಿಸಿದ್ದಾರೆ, ಎಲ್ಲಾ ಪ್ರಮುಖ ತಾಲೂಕುಗಳನ್ನು ಮೊದಲು ಭೇಟಿ ಮಾಡಲು ಆದ್ಯತೆ ನೀಡಲಾಗಿದೆ. ಪಕ್ಷ ಬಲ ವರ್ಧನೆಗೆ ಒತ್ತು ನೀಡುವುದರ ಜೊತೆಗೆ ಜನರ ಕುಂದುಕೊರತೆಗಳನ್ನು ಆಲಿಸಲಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ತಿಳಿಸಿದ್ದಾರೆ.
ತಮ್ಮದೇ ಪಕ್ಷದ ನಾಯಕರು ಎಸೆದ ಸವಾಲನ್ನು ಎದುರಿಸುವುದು ಹಾಗೂ 2023ರ ಚುನಾವಣೆಗೆ ಏಕಕಾಲದಲ್ಲಿ ತಯಾರಿ ನಡೆಸುವುದು ಈ ಪ್ರವಾಸದ ಉದ್ದೇಶ ಎಂದು ಯಡಿಯೂರಪ್ಪ ಬೆಂಬಲಿಗರು ತಿಳಿಸಿದ್ದಾರೆ.
ತಮ್ಮದೇ ಪಕ್ಷದ ಮುಖಂಡರು ಎಸೆದ ಸವಾಲುಗಳನ್ನು ನಿವಾರಿಸುವುದು ಮತ್ತು 2023 ರ ಚುನಾವಣೆಗೆ ಏಕಕಾಲದಲ್ಲಿ ತಯಾರಿ ನಡೆಸುವುದು ಅವರ ತಂತ್ರ ಎಂದು ಬೆಂಬಲಿಗರು ಹೇಳಿದ್ದಾರೆ. ಅನೇಕ ಶಾಸಕರು ತಮ್ಮ ಕ್ಷೇತ್ರಗಳಿಗೆ ಅಗತ್ಯ ಕಾರ್ಯಗಳಿಗಾಗಿ ಅಭಿವೃದ್ಧಿ ನಿಧಿಯನ್ನು ಕಡಿತಗೊಳಿಸಲಾಗಿದೆ ಎಂದು ಬಹಿರಂಗವಾಗಿ ದೂರು ನೀಡಿದ್ದರು. ಹೀಗಾಗಿ ಸಿಎಂ ಪ್ರವಾಸದ ವೇಳೆ ಈ ಸಮಸ್ಯೆಗಳನ್ನು ಪರಿಹರಿಸುವ ನಿರೀಕ್ಷೆಯಿದೆ.
ಪ್ರಸ್ತುತ ರಾಜ್ಯದಲ್ಲಿ ಕೋವಿಡ್-19 ಸೋಂಕು ಇಳಿಮುಖವಾಗುತ್ತಿದ್ದು, ಇದು ಇನ್ನಷ್ಟು ಕಡಿಮೆಯಾಗುತ್ತಿದ್ದಂತೆ ಕಲ್ಯಾಣ ಕರ್ನಾಟಕ ಭಾಗದಿಂದ ಜಿಲ್ಲಾವಾರು ಪ್ರವಾಸಗಳನ್ನು ಕೈಗೊಳ್ಳಲು ಸಿಎಂ ಈಗಾಗಲೇ ನೀಲನಕ್ಷೆ ಸಿದ್ದಪಡಿಸಿದ್ದಾರೆ. ಪ್ರತಿ ದಿನ ಕನಿಷ್ಠ ಮೂರು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸರ್ಕಾರ ಮಾಡಿರುವ ಸಾಧನೆಗಳು, ಕೋವಿಡ್ ಸಂದರ್ಭದಲ್ಲಿ ಜನರಿಗೆ ಕೊಟ್ಟ ವಿಶೇಷ ಆರ್ಥಿಕ ಪ್ಯಾಕೇಜ್, ಕೋವಿಡ್ ನಿರ್ವಹಣೆ ಸೇರಿದಂತೆ ಸರ್ಕಾರದ ಕಾರ್ಯಕ್ರಮಗಳನ್ನು ಜನತೆಗೆ ಮನವರಿಕೆ
ಮಾಡಲಿದ್ದಾರೆ.
ಯಡಿಯೂರಪ್ಪ ಕನಿಷ್ಠ ಒಂದು ತಿಂಗಳು 31 ಜಿಲ್ಲೆಗಳಲ್ಲೂ ಪ್ರವಾಸ ಮಾಡಿ ತಮ್ಮ ವರ್ಚಸನ್ನು ವೃದ್ಧಿಸಿಕೊಳ್ಳುವ ಆಲೋಚನೆಯಲ್ಲಿದ್ದಾರೆ. ಇದು ಸಂಪೂರ್ಣವಾಗಿ ಸರ್ಕಾರದ ಕಾರ್ಯಕ್ರಮವಾಗಿದ್ದು, ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು, ಶಾಸಕರು ಪ್ರವಾಸದ ಸಂದರ್ಭದಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ಪ್ರವಾಸದ ದಿನಾಂಕವನ್ನು ಸದ್ಯದಲ್ಲೇ ನಿಗದಿಪಡಿಸಲಾಗುತ್ತದೆ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.