ಮುಖ್ಯಮಂತ್ರಿ ಬೊಮ್ಮಾಯಿ ನಾಳೆ ದೆಹಲಿ ಪ್ರಯಾಣ: ಸಂಪುಟ ವಿಸ್ತರಣೆ ಸಂಬಂಧ ವರಿಷ್ಠರ ಜೊತೆ ಮಾತುಕತೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ ದೆಹಲಿಗೆ ತೆರಳುತ್ತಿದ್ದು, ಸಚಿವ ಸಂಪುಟ ವಿಸ್ತರಣೆ ಸಂಬಂಧ ಕೇಂದ್ರದ ಬಿಜೆಪಿ ವರಿಷ್ಠರ ಜೊತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Updated on: 

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ ದೆಹಲಿಗೆ ತೆರಳುತ್ತಿದ್ದು, ಸಚಿವ ಸಂಪುಟ ವಿಸ್ತರಣೆ ಸಂಬಂಧ ಕೇಂದ್ರದ ಬಿಜೆಪಿ ವರಿಷ್ಠರ ಜೊತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಈ ಮೊದಲೇ ವರಿಷ್ಠರಿಂದ ಭೇಟಿಗೆ ಒಪ್ಪಿಗೆ ಸಿಕ್ಕ ಹಿನ್ನಲೆಯಲ್ಲಿ ಬೊಮ್ಮಾಯಿ ನಾಳೆ ದೆಹಲಿಗೆ ತೆರಳುತ್ತಿದ್ದು, ಸಂಪುಟದಲ್ಲಿ ಖಾಲಿ ಇರುವ  4 ಸ್ಥಾನಗಳ ಭರ್ತಿಯ ಜೊತೆಗೆ ನಿಗಮ ಮಂಡಳಿ ನೇಮಕಾತಿ ಸೇರಿದಂತೆ ರಾಜ್ಯ ರಾಜಕೀಯ ವಿಚಾರ ಹಾಗೂ ಪಕ್ಷ ಸಂಘಟನೆ ಸೇರಿದಂತೆ ಮತ್ತಿತ್ತರ ವಿಚಾರಗಳ ಬಗ್ಗೆ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.

ಸಂಪುಟ ವಿಸ್ತರಣೆಗೆ ಒತ್ತಾಯ ತೀವ್ರವಾಗಿದ್ದು, ಬೊಮ್ಮಾಯಿ ಮಂತ್ರಿಮಂಡಲ ಸೇರಲು ಒಂದಿಷ್ಟು ಶಾಸಕರು ಬೆನ್ನುಬಿಡದೇ ಒತ್ತಡ ಹೇರುತ್ತಿದ್ದರೆ, ಮತ್ತೊಂದಿಷ್ಟು ಶಾಸಕರು ದೆಹಲಿ ವಲಯದಲ್ಲಿ ಲಾಬಿಯನ್ನು ತೀವ್ರಗೊಳಿಸಿದ್ದಾರೆ. ಒಂದು ಕಡೆ ಯಡಿಯೂರಪ್ಪ ಪಕ್ಷಸಂಘಟನೆಯ ವಿಚಾರವೂ ಕೂಡ ಮುನ್ನಲೆಗೆ ಬಂದಿದೆ. ಮುಂದಿನ ಬಾರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯದ ಚುನಾವಣೆ ಬಿಜೆಪಿ ಎದುರಿಸಲಿದೆ ಎಂದು ಕೇಂದ್ರದ ಗೃಹ ಸಚಿವ ಅಮಿತ್ ಷಾ ಸ್ಪಷ್ಟಪಡಿಸುವ ಮೂಲಕ ಯಡಿಯೂರಪ್ಪ ಯುಗ ಸದ್ಯಕ್ಕೆ ಪಕ್ಷದಲ್ಲಿ ಮುಗಿದ ಅಧ್ಯಾಯವೆನ್ನುವ ಸೂಚನೆಯನ್ನು ಕರ್ನಾಟಕಕ್ಕೆ ರವಾನಿಸಿದ್ದಾರೆ. 

ಸದ್ಯ ಯಡಿಯೂರಪ್ಪ ರಾಜ್ಯ ಪ್ರವಾಸ ಪಕ್ಷ ಸಂಘಟನೆಯ ಓಡಾಟಕ್ಕೆ ದೆಹಲಿ ವರಿಷ್ಠರು ತಡೆಹಾಕಿದ್ದರಾದರೂ ಯಡಿಯೂರಪ್ಪ ಸುಮ್ಮನಿದ್ದಂತೆ ಕಾಣುತ್ತಿಲ್ಲ. ಬಸವರಾಜ ಬೊಮ್ಮಾಯಿ ಸಿಎಂ ಗದ್ದುಗೆಗೇರುತ್ತಿದ್ದಂತೆ ಕೇಂದ್ರದ ಬಿಜೆಪಿ ಪಾಳಯದಲ್ಲಿ ಅಲ್ಪಸಮಯದಲ್ಲಿಯೇ ಸೈ ಎನಿಸಿಕೊಂಡಿದ್ದಾರೆ. ಹೀಗಾಗಿ ಅಳೆದುತೂಗಿ ಪಕ್ಷಕ್ಕೆ ಯಾವುದೇ ಹೊಡೆತ ಬೀಳದಂತೆ ಅಸಮಾಧಾನದ ಹೊಗೆ ಬುಗಿಲೇಳದಂತೆ ಸಂಪುಟ ವಿಸ್ತರಣೆ ಮಾಡಬೇಕಿದೆ.

ಇದರೊಂದಿಗೆ ಈಗಾಗಲೇ ನಿಗಮ ಮಂಡಳಿಯಲ್ಲಿ ಇರುವ ಯಡಿಯೂರಪ್ಪ ಆಪ್ತರನ್ನು ಸಹ ಬದಲಾಯಿಸಿ ಅಸಮಾಧಾನಿತರಿಗೆ ಅವಕಾಶ ನೀಡುವ ಯೋಚನೆಯೂ ಬಿಜೆಪಿಯಲ್ಲಿದೆ. ಹೀಗಾಗಿ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗಲು ಸೂಚನೆಯ ಜೊತೆಗೆ ಸಂಪುಟ ವಿಸ್ತರಣೆಗೆ ದೆಹಲಿ ವರಿಷ್ಠರು ಸಿಎಂ ಬೊಮ್ಮಾಯಿಗೆ ಹಸಿರು ನಿಶಾನೆ ನೀಡುವ ಸಾಧ್ಯತೆಯೂ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com