ಪುತ್ರ ವಿಜಯೇಂದ್ರಗೆ ಶಿಕಾರಿಪುರ ಕ್ಷೇತ್ರ: ಮೋದಿ, ಅಮಿತ್ ಶಾ ಅವರದ್ದೇ ಅಂತಿಮ ತೀರ್ಮಾನ ಎಂದ ಬಿಎಸ್ ವೈ

ನಿನ್ನೆಯಷ್ಟೇ ಶಿಕಾರಿಪುರ ಕ್ಷೇತ್ರವನ್ನು ಪುತ್ರ ಬಿ.ವೈ. ವಿಜಯೇಂದ್ರಗೆ ಬಿಟ್ಟುಕೊಟ್ಟಿರೋದಾಗಿ ಹೇಳಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಯೂಟರ್ನ್ ಹೊಡೆದಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ....
ಬಿ.ಎಸ್ ಯಡಿಯೂರಪ್ಪ
ಬಿ.ಎಸ್ ಯಡಿಯೂರಪ್ಪ
Updated on: 

ಬೆಂಗಳೂರು: ನಿನ್ನೆಯಷ್ಟೇ ಶಿಕಾರಿಪುರ ಕ್ಷೇತ್ರವನ್ನು ಪುತ್ರ ಬಿ.ವೈ. ವಿಜಯೇಂದ್ರಗೆ ಬಿಟ್ಟುಕೊಟ್ಟಿರೋದಾಗಿ ಹೇಳಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಯೂಟರ್ನ್ ಹೊಡೆದಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಹೈಕಮಾಂಡ್ ಟಿಕೆಟ್ ಘೋಷಣೆಗೂ ಮೊದಲೇ ಪುತ್ರನಿಗೆ ಟಿಕೆಟ್ ಕೊಡಿಸಲು ಕ್ಷೇತ್ರ ಬಿಟ್ಟುಕೊಡುವ ಮಾತಾಡಿದ್ದಾರೆಂಬ ವಿಶ್ಲೇಷಣೆಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ, ನಿನ್ನೆ ನಾನು ನೀಡಿದ ಹೇಳಿಕೆ ಬಗ್ಗೆ ಸಾಕಷ್ಟು ಗೊಂದಲ ಆಗಿದೆ. ನಾನು ವಿಧಾನಸಭೆ ಚುನಾವಣೆಗೆ ನಿಲ್ಲಲ್ಲ. ನನಗೆ ಶಿಕಾರಿಪುರದ ಜನ ಚುನಾವಣೆ ನಿಲ್ಲಲು ಒತ್ತಾಯ ಮಾಡಿದ್ರು.  ಆದ್ರೆ ನಾನು ನಿಲ್ಲೋದಿಲ್ಲ.  ವಿಜಯೇಂದ್ರ ನಿಲ್ತಾರೆ ಎಂದು ಹೇಳಿದೆ. ನಿನ್ನೆ ಅಲ್ಲಿಯ ಜನ ಒತ್ತಾಯ ಮಾಡಿದ ಕಾರಣ ನಾನು ಹಾಗೆ ಹೇಳಿದ್ದೇನೆ. ಆದ್ರೆ ಅಂತಿಮ ತಿರ್ಮಾನ ಮಾಡೋದು ಮೋದಿ, ಅಮಿತ್ ಶಾ , ನಡ್ಡಾ ಅವರದ್ದು. ಪಕ್ಷದ ತೀರ್ಮಾನವೇ ಅಂತಿಮ ಎಂದರು.

ವಿಜಯೇಂದ್ರ ಎಲ್ಲೇ ನಿಂತರೂ ಗೆಲ್ಲುವ ಸಾಮರ್ಥ್ಯ ಬೆಳೆಸಿಕೊಂಡಿದ್ದಾರೆ. ಹಳೆ ಮೈಸೂರು, ಶಿಖಾರಿಪುರ ಎಲ್ಲೇ ನಿಂತರೂ ಅವರು ಗೆಲ್ಲುತ್ತಾರೆ. ಆದ್ರೆ ಅಂತಿಮವಾಗಿ ತೀರ್ಮಾನ ಮಾಡೋದು ಪ್ರಧಾನಿ ಮೋದಿಯವರು ಎಂದರು. ಕುಟುಂಬ ರಾಜಕೀಯ ಆಗೋದಿಲ್ವೆ ಎಂಬ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ಮೋದಿ ಹೇಳಿದ್ದಾರೆ. ಹಾಗಾಗಿ ನಾನು ಚುನಾವಣೆಗೆ ನಿಲ್ತಾ ಇಲ್ಲ‌. ನನ್ನ ಮಗ ನಿಲ್ತಾರೆ. ಈ ಕಾರಣಕ್ಕೆ ನಾನು ಚುನಾವಣೆಯಿಂದ ಹಿಂದೆ ಸರಿದಿದ್ದೇನೆ ಎಂದರು. 

ನನಗೆ ಪಕ್ಷದಲ್ಲಿ ಸಾಕ್ಕಷ್ಟು ಅವಕಾಶ ಸಿಕ್ಕಿದೆ. ನನ್ನನ್ನು ರಾಷ್ಟ್ರ ಮಟ್ಟದಲ್ಲಿ ಬೆಳೆಸಿದ್ದಾರೆ. ನಾಲ್ಕು ಬಾರಿ ಸಿಎಂ ಮಾಡಿದ್ದಾರೆ. ಮೋದಿ ಮೊತ್ತೊಮ್ಮೆ ಪ್ರಧಾನಿ ಆಗಬೇಕು. ಅದನ್ನು ನಾನು ನೋಡಬೇಕು. ರಾಜ್ಯಾದ್ಯಂತ ಪ್ರವಾಸ ಮಾಡಿ 140 ಸ್ಥಾನ ಗೆಲ್ಲೋದೇ ನಮ್ಮ ಗುರಿ.‌‌ ನಾನು ನಾಳೆ ನಾಡಿದ್ದರಿಂದಲೇ ಕೆಲಸ ಶುರು ಮಾಡ್ತೇನೆ ಎಂದು ಪಕ್ಷ ಸಂಘಟನೆಗೆ ಮುಂದಾಗುವುದಾಗಿ ಹೇಳಿದರು.

ಇದೇ ವೇಳೆ ಪಿಎಸ್ ಐ ಹಗರಣದಲ್ಲಿ ವಿಜಯೇಂದ್ರ ಭಾಗಿ ಆರೋಪಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಮೇಲೆ ಗರಂ ಆದ ಯಡಿಯೂರಪ್ಪ, ಇದು ಮೂರ್ಖತನದ ಪರಮಾವಧಿ ಹೇಳಿಕೆ ಎಂದರು. ಅವರು ಹೇಳಿಕೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com