ಗುಜರಾತ್ ಚುನಾವಣೆಯಲ್ಲಿ ಭರ್ಜರಿ ಗೆಲವು: ರಾಜ್ಯ ಬಿಜೆಪಿಗೆ ಬೂಸ್ಟರ್ ಡೋಸ್; ಹಿಮಾಚಲ ಪ್ರದೇಶ ಫಲಿತಾಂಶ ನೋಡುವಂತೆ ವಿಪಕ್ಷಗಳ ತಿರುಗೇಟು
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು, ಈ ಗೆಲುವು 2023ರ ವಿಧಾನಸಭೆ ಚುನಾವಣೆಗೂ ಮುನ್ನ ಕರ್ನಾಟಕದಲ್ಲಿ ಪಕ್ಷದ ನಾಯಕರಿಗೆ ದೊಡ್ಡ ಉತ್ತೇಜನ ನೀಡಿದಂತಾಗಿದೆ.
Published: 09th December 2022 09:52 AM | Last Updated: 09th December 2022 01:04 PM | A+A A-

ಬೆಂಗಳೂರಿನಲ್ಲಿರುವ ಪಕ್ಷದ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರು ಗುಜರಾತ್ ಚುನಾವಣೆಯ ಪಕ್ಷದ ಗೆಲುವನ್ನು ಆಚರಿಸಿದರು.
ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು, ಈ ಗೆಲುವು 2023ರ ವಿಧಾನಸಭೆ ಚುನಾವಣೆಗೂ ಮುನ್ನ ಕರ್ನಾಟಕದಲ್ಲಿ ಪಕ್ಷದ ನಾಯಕರಿಗೆ ದೊಡ್ಡ ಉತ್ತೇಜನ ನೀಡಿದಂತಾಗಿದೆ.
ಆದರೆ, ಗುಜರಾತ್ ಚುನಾವಣೆ ಕರ್ನಾಟಕದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಹೇಳಿದ್ದಾರೆ. ಹಿಮಾಚಲ ಪ್ರದೇಶದ ಫಲಿತಾಂಶಗಳನ್ನು ಅವಲೋಕಿಸುವಂತೆ ಬಿಜೆಪಿ ನಾಯಕರಿಗೆ ಒತ್ತಾಯಿಸಿದ್ದಾರೆ.
ಈ ನಡುವೆ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಬಿಜೆಪಿಯ ಹಲವು ಹಿರಿಯ ನಾಯಕರು ಗುಜರಾತ್ ಫಲಿತಾಂಶ ಕರ್ನಾಟಕ ಚುನಾವಣೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ವಿಧಾನಸಭಾ ಚುನಾವಣೆ 2023: ಬೆಂಗಳೂರಿನಲ್ಲಿ ಉತ್ತಮ ಸಾಧನೆ ಮಾಡಿ, ನಂತರ ರಾಜ್ಯದತ್ತ ಗಮನಹರಿಸಲು ಬಿಜೆಪಿ ಚಿಂತನೆ!
ಇದು ಕರ್ನಾಟಕದ ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ನೈತಿಕ ಬೂಸ್ಟರ್ ಆಗಿದೆ. ಹೆಚ್ಚು ಉತ್ಸಾಹದಿಂದ ಕೆಲಸ ಮಾಡುವುದರಿಂದ ರಾಜ್ಯದಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಲು ಸಹಕಾರಿಯಾಗುತ್ತದೆ ಎಂದು ಬೊಮ್ಮಾಯಿ ಅವರು ಹೇಳಿದ್ದಾರೆ.
ಗುಜರಾತ್‌ನಲ್ಲಿನ ಗೆಲುವಿಗೆ ಪ್ರಧಾನಿ ಮೋದಿಯವರ ಬಲಿಷ್ಠ ಮತ್ತು ಸಕಾರಾತ್ಮಕ ನಾಯಕತ್ವ ಮತ್ತು ಉತ್ತಮ ಆಡಳಿತವೇ ಕಾರಣ. "ಜನರು ಯಾವಾಗಲೂ ಉತ್ತಮ ಆಡಳಿತವನ್ನು ಬೆಂಬಲಿಸುತ್ತಾರೆ ಮತ್ತು ಇಲ್ಲಿಯವರೆಗೆ ದೇಶದಾದ್ಯಂತ ಆಡಳಿತ ವಿರೋಧಿ ಪ್ರವೃತ್ತಿ ಇತ್ತು. ಆದರೆ, ಗುಜರಾತ್ ಚುನಾವಣಾ ಫಲಿತಾಂಶಗಳು ಬಿಜೆಪಿ ಪರವಾಗಿ ಹಾಗೂ ಅಧಿಕಾರದ ಪರವಾದ ಪ್ರವೃತ್ತಿಯನ್ನು ಸಾಬೀತುಪಡಿಸಿವೆ. ಸತತ ಏಳನೇ ಬಾರಿ ಗೆಲುವು ಸಾಧಿಸುವುದು ಸುಲಭವಲ್ಲ ಎಂದು ತಿಳಿಸಿದರು.
ಬಳಿಕ ದೆಹಲಿ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಸಾಧನೆ ಕುರಿತು ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಯಲ್ಲಿ 15 ವರ್ಷಗಳ ಕಾಲ ಆಡಳಿತ ನಡೆಸಿರುವುದು ದೊಡ್ಡ ಸಾಧನೆಯಾಗಿದೆ. ಅಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಮತದಾರರ ಸಂಖ್ಯೆ ಕಡಿಮೆಯಿದೆ. ಪಾಲಿಕೆ ಚುನಾವಣೆಯನ್ನು ಸಾರ್ವತ್ರಿಕ ಚುನಾವಣೆಗೆ ಹೋಲಿಕೆ ಮಾಡುವಂತಿಲ್ಲ ಎಂದರು.
ಇದನ್ನೂ ಓದಿ: ಗುಜರಾತ್ ಬೆನ್ನಲ್ಲೇ ರಾಜ್ಯದಲ್ಲೂ ಅವಧಿ ಪೂರ್ವ ಚುನಾವಣೆ?: ಅಂತಹ ಯಾವುದೇ ಚಿಂತನೆಗಳಿಲ್ಲ ಎಂದ ಬಿಜೆಪಿ
ಕನ್ನಡ ಮತ್ತು ಸಂಸ್ಕೃತಿ ಇಂಧನ ಸಚಿವ ವಿ ಸುನೀಲ್ ಕುಮಾರ್ ಅವರು ಮಾತನಾಡಿ, ಹಿಮಾಚಲ ಪ್ರದೇಶದ ಮತದಾರರ ತೀರ್ಪನ್ನು ಪಕ್ಷ ಗೌರವಿಸುತ್ತದೆ ಮತ್ತು ರಾಜ್ಯ ಮತ್ತು ಕೇಂದ್ರ ನಾಯಕರು ಇದಕ್ಕೆ ಕಾರಣಗಳನ್ನು ಆತ್ಮಾವಲೋಕನ ಮಾಡುತ್ತಾರೆ. ಕರ್ನಾಟಕದಲ್ಲಿ ಪಕ್ಷವು ಹಿರಿಯರಿಗೆ ಪ್ರಾಮುಖ್ಯತೆ ನೀಡಿ ಹೊಸಬರಿಗೆ ಅವಕಾಶ ನೀಡಲಿದೆ ಎಂದು ಹೇಳಿದರು.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಮಾತನಾಡಿ, "ಜನರು ಮತ್ತೊಮ್ಮೆ ಪ್ರಧಾನಿ ಮೋದಿಯವರ ನಾಯಕತ್ವ ಮತ್ತು ಅಭಿವೃದ್ಧಿ ಕಾರ್ಯಸೂಚಿಯಲ್ಲಿ ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಜನತೆ ಬಿಜೆಪಿಗೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಆದರೆ, ಎರಡೂ ರಾಜ್ಯಗಳ ರಾಜಕೀಯ ಸನ್ನಿವೇಶಗಳು ಸಂಪೂರ್ಣವಾಗಿ ಭಿನ್ನವಾಗಿರುವುದರಿಂದ ಗುಜರಾತ್ ಚುನಾವಣೆ ಕರ್ನಾಟಕ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಹೇಳಿದ್ದಾರೆ.
ಇದನ್ನೂ ಓದಿ: ವಿಧಾನಸಭೆ ಚುನಾವಣೆ ಫಲಿತಾಂಶ: ಗುಜರಾತ್‌ನಲ್ಲಿ ಮತ್ತೆ ಬಿಜೆಪಿ, ಹಿಮಾಚಲದಲ್ಲಿ ಕಾಂಗ್ರೆಸ್‌ಗೆ ಅಧಿಕಾರ
ಕರ್ನಾಟಕದ ಬಿಜೆಪಿ ನಾಯಕರು ಕೂಡ ಹಿಮಾಚಲ ಪ್ರದೇಶ ಫಲಿತಾಂಶದತ್ತ ಗಮನಹರಿಸಬೇಕಿದೆ ಎಂದು ರಾಜ್ಯ ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದೆ.
ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಮಾಡಿದಂತೆಯೇ ಕರ್ನಾಟಕದಲ್ಲಿಯೂ ಜನರು ಬಿಜೆಪಿಯನ್ನು ತಿರಸ್ಕರಿಸುತ್ತಾರೆ ಎಂದು ಪಕ್ಷ ಹೇಳಿದೆ.
ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಮಾತನಾಡಿ, ಗುಜರಾತ್ ಚುನಾವಣೆ ಕರ್ನಾಟಕದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಗುಜರಾತ್ ರಾಜ್ಯದಲ್ಲಿ ಪ್ರಬಲ ವಿರೋಧ ಪಕ್ಷಗಳ ಅನುಪಸ್ಥಿತಿಯಿಂದ ಜನರು ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆಂದು ಹೇಳಿದ್ದಾರೆ.
ಈ ನಡುವೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಗುಜರಾತ್‌ನಲ್ಲಿ ಪಕ್ಷದ ವಿಜಯೋತ್ಸವ ಆಚರಿಸಿದರು.