

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಸೋಲಿನ ಭಯ ಕಾಡ್ತಿದೆ. ಆದ್ದರಿಂದ ಪ್ರತಿದಿನ ಬೆಳಗ್ಗೆ ಆಧಾರರಹಿತ, ಅನುಪಯುಕ್ತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಹೇಳಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಳಿಸಲು ಮತ್ತು ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಅನುಮೋದಿಸುವಂತೆ ಸಿಎಂ ಕಚೇರಿಯಿಂದಲೇ ಯತ್ನಗಳು ನಡೆಯುತ್ತಿವೆ ಎಂಬ ಡಿಕೆ ಶಿವಕುಮಾರ್ ಅವರ ಆರೋಪ ಕುರಿತಂತೆ ಎಎನ್ ಐ ಜೊತೆಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಚುನಾವಣಾ ಆಯೋಗ ಸಾಂವಿಧಾನಿಕವಾಗಿ ರೂಪುಗೊಂಡ ಸ್ವತಂತ್ರ ಸಂಸ್ಥೆಯಾಗಿದೆ. ಇದು ಚುನಾವಣಾ ಆಯೋಗದ ನಿಯಮಗಳ ಪ್ರಕಾರ ನಡೆಯುತ್ತದೆ. ಹಾಗಾಗಿ ಹಸ್ತಕ್ಷೇಪ ಮಾಡುವ ಪ್ರಶ್ನೆಯೇ ಇಲ್ಲ ಎಂದರು.
ಶಿವಕುಮಾರ್ ಸೋಲಿನ ಭಯದಿಂದ ಪ್ರತಿದಿನ ವಿನಾಕಾರಣ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರ ಎಲ್ಲಾ ಆರೋಪಗಳಿಗೆ ಉತ್ತರಿಸುವ ಅಗತ್ಯವಿಲ್ಲ, ಸಿದ್ದರಾಮಯ್ಯರಿಗೆ ಡಿಕೆ ಶಿವಕುಮಾರ್ ಏನು ಮಾಡುತ್ತಿದ್ದಾರೆ ಎಂಬುದು ರಾಜ್ಯಕ್ಕೆ ಚೆನ್ನಾಗಿ ಗೊತ್ತಿದೆ. ಮೊದಲು ಅವರು ತಮ್ಮ ಪಕ್ಷದತ್ತ ನೋಡಲಿ ಎಂದು ಬೊಮ್ಮಾಯಿ ತಿರುಗೇಟು ನೀಡಿದರು.