

ಬೆಂಗಳೂರು: ಶಿವಕುಮಾರ್ ತಿಹಾರ್ ಜೈಲಿಗೆ ಹೋಗಿ ಬಂದಿದ್ದಾರೆ, ಮತ್ತೆ ಶಾಶ್ವತವಾಗಿ ಹೋದರೂ ಅಚ್ಚರಿ ಇಲ್ಲ ಎಂಬ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಗುಡುಗಿದ್ದಾರೆ.
ಈ ಕುರಿತು ಜ್ಞಾನಜ್ಯೋತಿ ಸಭಾಂಗಣದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕುಮಾರಣ್ಣ ಹಿಂದೆ ಏನು ಮಾಡಿದ್ದರು, ಮುಂದೆ ಏನು ಮಾಡಲು ಹೊರಟಿದ್ದಾರೆ ಎಂಬುದನ್ನು ತಮ್ಮ ಹೇಳಿಕೆ ಮೂಲಕ ತಿಳಿಸಿದ್ದಾರೆ ಎಂದು ಹೇಳಿದರು.
ಕುಮಾರಸ್ವಾಮಿ ಅವರು ತಮ್ಮ ಪ್ಲಾನ್ ಏನಿದೆ ಎಂಬುದನ್ನು ಹೇಳಿದ್ದಾರೆ. ಅವರು ಏನೆಲ್ಲಾ ಮಾಡಲು ಸಾಧ್ಯವೋ ಅದನ್ನು ಹೇಳಿದ್ದಾರೆ. ಮುಂದೆ ಏನು ಮಾಡಬೇಕು ಅಂದುಕೊಂಡಿದ್ದಾರೋ ಅದನ್ನು ಹೇಳಿದ್ದಾರೆ. ಈ ವಿಚಾರವಾಗಿ ಮುಂದೆ ಮಾತನಾಡೋಣ ಎಂದು ತಿಳಿಸಿದರು.
ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿಯವರು ತಮ್ಮ ತಂಗಿ, ಸಹೋದರ ಹಾಗೂ ನನ್ನ ಹೆಂಡತಿ ಮೇಲೆ ಕೇಸ್ ಹಾಕಿದ್ದನ್ನು ಇದೇ ವೇಳೆ ಸ್ಮರಿಸಿದರು.
ಮೈತ್ರಿ ಸರ್ಕಾರ ಬೀಳಲು ಡಿ.ಕೆ ಶಿವಕುಮಾರ್ ಅವರೇ ಕಾರಣ, ಈ ಸರಕಾರ ಶೀಘ್ರ ಉರುಳಿ ಹೋಗುತ್ತದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಅವರು ಬಹಳ ದೊಡ್ಡವರು. ಅವರ ನುಡಿಮುತ್ತುಗಳು ಏನಿವೆ? ಅವರು ಏನು ಹೇಳಿದ್ದಾರೆ ಎಂದು ಸಂಪೂರ್ಣವಾಗಿ ಮಾಹಿತಿ ಪಡೆದ ನಂತರ ಪ್ರತಿಕ್ರಿಯಿಸುತ್ತೇನೆ ಎಂದರು.