ಬಿಜೆಪಿಗೆ ಶಾಕ್: ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಬಾಬುರಾವ್ ಚಿಂಚನಸೂರ್ ರಾಜೀನಾಮೆ, ಪಕ್ಷಕ್ಕೂ ಗುಡ್ ಬೈ
ಟಿಕೆಟ್ ಘೋಷಣೆಗೂ ಮುನ್ನವೇ ಬಿಜೆಪಿಗೆ ಆಘಾತ ಎದುರಾಗಿದ್ದು, ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಬಿಜೆಪಿಯ ಬಾಬುರಾವ್ ಚಿಂಚನಸೂರ್ ಸೋಮವಾರ ರಾತ್ರಿ ರಾಜೀನಾಮೆ ನೀಡಿದ್ದಾರೆ.
Published: 20th March 2023 11:35 PM | Last Updated: 21st March 2023 04:53 PM | A+A A-

ಬಿಜೆಪಿಗೆ ಬಾಬುರಾವ್ ಚಿಂಚನಸೂರ್ ರಾಜೀನಾಮೆ
ಬೆಂಗಳೂರು: ಟಿಕೆಟ್ ಘೋಷಣೆಗೂ ಮುನ್ನವೇ ಬಿಜೆಪಿಗೆ ಆಘಾತ ಎದುರಾಗಿದ್ದು, ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಬಿಜೆಪಿಯ ಬಾಬುರಾವ್ ಚಿಂಚನಸೂರ್ ಸೋಮವಾರ ರಾತ್ರಿ ರಾಜೀನಾಮೆ ನೀಡಿದ್ದಾರೆ.
ಬಾಬುರಾವ್ ಚಿಂಚನಸೂರ್ ಅವರ ರಾಜೀನಾಮೆಯನ್ನು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ನೀಡಿದ್ದು, ಅವರೂ ಕೂಡ ರಾಜಿನಾಮೆ ಅಂಗೀಕರಿಸಿದ್ದಾರೆ ಎಂದು ತಿಳಿದುಬಂದಿದೆ. ಬಾಬುರಾವ್ ಚಿಂಚನಸೂರ್ ಅವರು ಗುರುಮಿಠಕಲ್ ಕ್ಷೇತ್ರದ ವಿಧಾನಸಭೆ ಟಿಕೆಟ್ ಕೇಳಿದ್ದರು.
ಟಿಕೆಟ್ ನಿರಾಕರಣೆಯೇ ರಾಜಿನಾಮೆಗೆ ಕಾರಣ
ಬಿಜೆಪಿ ಮೂಲಗಳ ಪ್ರಕಾರ ಚಿಂಚನಸೂರ್ ರಾಜಿನಾಮೆಗೆ ಟಿಕೆಟ್ ನಿರಾಕರಣೆಯೇ ಕಾರಣ ಎನ್ನಲಾಗಿದೆ. ಬಾಬುರಾವ್ ಚಿಂಚನಸೂರ್ ಅವರು ಗುರುಮಿಠಕಲ್ ಕ್ಷೇತ್ರದ ವಿಧಾನಸಭೆ ಟಿಕೆಟ್ ಕೇಳಿದ್ದರು. ಆದರೆ, ವಿಧಾನಪರಿಷತ್ ಸದಸ್ಯರಾಗಿರುವ ಕಾರಣ ಟಿಕೆಟ್ ನೀಡಲಾಗದು ಎಂದು ಬಿಜೆಪಿ ನಾಯಕರು ತಿಳಿಸಿದ್ದರು. ಹೀಗಾಗಿ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದಾರೆ. ಅಂತೆಯೇ ಬಿಜೆಪಿ ಪಕ್ಷಕ್ಕೂ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ.
Karnataka | BJP MLC Baburao Chinchansur tenders resignation. He has submitted his resignation to Legislative Council Chairman Basavaraj Horatti.
— ANI (@ANI) March 20, 2023
Chinchansur is a ticket aspirant from BJP, but was denied of MLA ticket as he is currently an MLC. pic.twitter.com/Qg2KeCvtIN
ನಿಜ ಶರಣ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷರೂ ಆಗಿರುವ ಚಿಂಚನಸೂರ್, 2019 ರ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ಪಡೆ ಆಗಿದ್ದರು. ಇದೀಗ ನಾಲ್ಕು ವರ್ಷಗಳ ಬಳಿಕ ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗಲು ಮುಂದಾಗಿದ್ದಾರೆ. ಗುರುಮಠಕಲ್ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಲು ಚಿಂಚನಸೂರ್ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. 2018ರ ವಿಧಾನಸಭ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಸೋತಿದ್ದ ಅವರು ಇದೀಗ ಮತ್ತೆ ‘ಕೈ’ ಪಕ್ಷದಿಂದ ಸ್ಪರ್ಧೆ ಮಾಡಲು ಮುಂದಾಗಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಗ್ಯಾರಂಟಿ ನಂಬರ್ 4: ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು 3 ಸಾವಿರ ರೂ. ಭತ್ಯೆ
2019ರ ಲೋಕಸಭಾ ಚುನಾವಣೆಯಲ್ಲಿ ಈಗಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸುವಲ್ಲಿ ಚಿಂಚನಸೂರ್ ಪ್ರಮುಖ ಪಾತ್ರ ವಹಿಸಿದ್ದರು. ಅವರು ತಿಂಗಳ ಹಿಂದೆಯೇ ಬಿಜೆಪಿಗೆ ರಾಜೀನಾಮೆ ಕೊಡಲು ಮುಂದಾಗಿದ್ದರು. ಆದರೆ, ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು ಬಿಜೆಪಿಯಲ್ಲೇ ಉಳಿಯುವುದಾಗಿ ಹೇಳಿದ್ದರು.
ನಾಳೆ ಬೆಳಿಗ್ಗೆ ಕಾಂಗ್ರೆಸ್ ಸೇರ್ಪಡೆ
ಬಾಬೂರಾವ್ ಚಿಂಚನಸೂರ್ ಮಂಗಳವಾರ ಬೆಳಿಗ್ಗೆ 9.30ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, ಮಾಜಿ ಸಿಎಂ ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆ ಸಮ್ಮುಖದಲ್ಲಿ ಅವರು ‘ಕೈ’ ಹಿಡಿಯಲಿದ್ದಾರೆ.