ಮಾಧ್ಯಮಗಳ ವರದಿ 'ಒಂದು ಸಣ್ಣ ತುಣುಕು ಮಾತ್ರ', ಸಮಿತಿ ವರದಿ ಆಧಾರದಲ್ಲಿ BSY-ಶ್ರೀರಾಮುಲು ವಿರುದ್ಧ ಸರ್ಕಾರ ಕ್ರಮ: ಸಿಎಂ ಸಿದ್ದರಾಮಯ್ಯ

ಕೋವಿಡ್ ಸಂದರ್ಭದಲ್ಲಿ ಇಡೀ ರಾಜ್ಯದ ಜನತೆ ಭಯ, ಆತಂಕದಲ್ಲಿ ದೇವರ ಪ್ರಾರ್ಥನೆ ಮಾಡುತ್ತಿದ್ದಾಗ ಸರ್ಕಾರ ಮತ್ತು ಸಚಿವ ಶ್ರೀರಾಮುಲು ಅವರು ಹಣ ಲೂಟಿ ಮಾಡುವುದರಲ್ಲಿ ಮುಳುಗಿದ್ದರು. ಮುಗ್ಧ ಜನರ ಮೃತದೇಹಗಳ ಹೆಸರಲ್ಲೂ ಭ್ರಷ್ಟಚಾರ ನಡೆಸಿದ ಬಿಜೆಪಿ ನಾಯಕರನ್ನು ಯಾವ ದೇವರೂ ಕ್ಷಮಿಸಲ್ಲ, ನೀವೂ ಕ್ಷಮಿಸಬೇಡಿ.
Siddaramaiah
ಸಿದ್ದರಾಮಯ್ಯ
Updated on

ಬೆಂಗಳೂರು: ಕೊರೋನಾ ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಇಡೀ ರಾಜ್ಯವೇ ಭಯ, ಆತಂದಲ್ಲಿ ದೇವರ ಪ್ರಾರ್ಥನೆ ಮಾಡುತ್ತಿದ್ದಾಗ ಬಿಜೆಪಿ ಸರ್ಕಾರ ಮತ್ತು ಸಚಿವ ಶ್ರೀರಾಮುಲು ಅವರು ಹಣ ಲೂಟಿ ಮಾಡುವುದರಲ್ಲಿ ಮುಳುಗಿದ್ದರು. ಮುಗ್ಧ ಜನರ ಮೃತದೇಹಗಳ ಹೆಸರಲ್ಲೂ ಭ್ರಷ್ಟಚಾರ ನಡೆಸಿದ ಬಿಜೆಪಿ ನಾಯಕರನ್ನು ಯಾವ ದೇವರೂ ಕ್ಷಮಿಸಲ್ಲ, ನೀವೂ ಕ್ಷಮಿಸಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದರು.

ಸಂಡೂರು ವಿಧಾನಸಭಾ ಕ್ಷೇತ್ರದ ಮೆಟ್ರಿಕಿ ಗ್ರಾಮದಲ್ಲಿ ನಡೆದ ಬೃಹತ್ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಮತ್ತು ಆರೋಗ್ಯ ಮಂತ್ರಿ ಶ್ರೀರಾಮುಲು ಇಬ್ಬರೂ ಕೋವಿಡ್ ಸಂದರ್ಭದಲ್ಲಿ ಚೀನಾದಿಂದ ಪಿಪಿಇ ಕಿಟ್ ತರಿಸಿ ಭ್ರಷ್ಟಾಚಾರ ನಡೆಸಿದ್ದಾರೆ. ಇವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ನ್ಯಾ.ಮೈಕೆಲ್ ಡಿ ಕುನ್ಹಾ ಅವರ ತನಿಖಾ ಆಯೋಗ ಶಿಫಾರಸು ಮಾಡಿದೆ. ಕೋವಿಡ್ ಸಂದರ್ಭದಲ್ಲಿ ಇಡೀ ರಾಜ್ಯದ ಜನತೆ ಭಯ, ಆತಂಕದಲ್ಲಿ ದೇವರ ಪ್ರಾರ್ಥನೆ ಮಾಡುತ್ತಿದ್ದಾಗ ಸರ್ಕಾರ ಮತ್ತು ಸಚಿವ ಶ್ರೀರಾಮುಲು ಅವರು ಹಣ ಲೂಟಿ ಮಾಡುವುದರಲ್ಲಿ ಮುಳುಗಿದ್ದರು. ಮುಗ್ಧ ಜನರ ಮೃತದೇಹಗಳ ಹೆಸರಲ್ಲೂ ಭ್ರಷ್ಟಚಾರ ನಡೆಸಿದ ಬಿಜೆಪಿ ನಾಯಕರನ್ನು ಯಾವ ದೇವರೂ ಕ್ಷಮಿಸಲ್ಲ, ನೀವೂ ಕ್ಷಮಿಸಬೇಡಿ ಎಂದು ಹೇಳಿದರು.

ಬಿಜೆಪಿ ಶ್ರೀಮಂತರ ಮತ್ತು ಮೇಲ್ವರ್ಗದವರ ಪಕ್ಷ. ಕಾಂಗ್ರೆಸ್ ಜಾರಿ ಮಾಡುವ ಎಲ್ಲಾ ಬಡವರ ಪರವಾದ ಕಾರ್ಯಕ್ರಮಗಳನ್ನು ವಿರೋಧಿಸುತ್ತದೆ. ಅಪಪ್ರಚಾರ ಮಾಡುತ್ತದೆ. ಆಗ ಇಂದಿರಾಗಾಂಧಿಯವರ 20 ಅಂಶಗಳ ಕಾರ್ಯಕ್ರಮಗಳನ್ನು ಬಿಜೆಪಿ ವಿರೋಧಿಸಿ ಅಪಪ್ರಚಾರ ಮಾಡಿತ್ತು. ಈಗ ನಮ್ಮ‌ ಸರ್ಕಾರದ ಐದು ಗ್ಯಾರಂಟಿಗಳನ್ನು ವಿರೋಧಿಸಿ ಅಪಪ್ರಚಾರ ಮಾಡುತ್ತಿದೆ. ಇದೇ ಬಿಜೆಪಿಯ ಜಾಯಮಾನ. ಬಿಜೆಪಿಯವರು ರೈತರು, ಕಾರ್ಮಿಕರು, ಮಹಿಳೆಯರು, ಯುವಕರು, ವಿದ್ಯಾರ್ಥಿಗಳು, ದಲಿತರು, ಹಿಂದುಳಿದವರ ಪರವಾಗಿ ಒಂದೇ ಒಂದು ಕಾರ್ಯಕ್ರಮ ಕೊಟ್ಟಿದ್ದರೆ ನೆನಪಿಸಿಕೊಂಡು ಹೇಳಿ ನೋಡೋಣ. ಯಾವ ಕಾರ್ಯಕ್ರಮವನ್ನೂ ಕೊಟ್ಟಿಲ್ಲ. ಅದಕ್ಕೇ ನಿಮಗೆ ನೆನಪಾಗಲು ಸಾಧ್ಯವೇ ಇಲ್ಲ.

ಸಂಡೂರಿನಲ್ಲಿರುವ ರಸ್ತೆ, ಶಾಲೆ, ವಸತಿ ಶಾಲೆ, ಅಂಗನವಾಡಿ, ಆಸ್ಪತ್ರೆ, ನೀರು, ನೀರಾವರಿ ಎಲ್ಲವೂ ಆಗಿರುವುದು ಸಂತೋಷ್ ಲಾಡ್ ಮತ್ತು ತುಕಾರಾಮ್ ಅವರ ಅವಧಿಯಲ್ಲಿ. ಬಿಜೆಪಿಯವರು ಕೇವಲ ಸುಳ್ಳು ಹೇಳಿಕೊಂಡು, ಜನರ ನಡುವೆ ದ್ವೇಷ ಬಿತ್ತುತ್ತಾ ರಾಜಕಾರಣ ಮಾಡುತ್ತಿದ್ದಾರೆ. ಹಿಂದೆ ಜನಾರ್ದನರೆಡ್ಡಿಯವರ ಟೀಮು ನಡೆಸಿದ್ದ ಭ್ರಷ್ಟಾಚಾರವನ್ನು ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ಬಯಲಿಗೆ ಎಳೆದಿದ್ದರು. ಇವರು ಅಧಿಕಾರಕ್ಕೆ ಬರೋದೇ ಲೂಟಿ ಮಾಡೋದಕ್ಕೆ. ಆದ್ದರಿಂದ ಸಂಡೂರಿನಲ್ಲಿ ಅನ್ನಪೂರ್ಣ ತುಕಾರಾಮ್ ಅವರನ್ನು ಗೆಲ್ಲಿಸಿ ಅಭಿವೃದ್ಧಿಗೆ ನಿಮ್ಮ ಬೆಂಬಲ ನೀಡಿ ಎಂದು ತಿಳಿಸಿದರು.

ಎಲ್ಲಾ ಜಾತಿ, ಧರ್ಮಗಳ ಬಡವರ ಪರವಾಗಿ ಕೆಲಸ ಮಾಡುತ್ತಿರುವ ನನ್ನನ್ನು ಪ್ರಧಾನಿ ಮೋದಿಯವರು ಟಾರ್ಗೆಟ್‌ ಮಾಡಿದ್ದಾರೆ. ಕಳೆದ 11 ವರ್ಷಗಳಲ್ಲಿ ನರೇಂದ್ರ ಮೋದಿ ಅವರು ಈ ದೇಶದ ಜನರಿಗೆ ಮಾಡಿರುವ ಅನ್ಯಾಯ, ಅಕ್ರಮಗಳ ವಿರುದ್ಧ ಧ್ವನಿಯೆತ್ತಿದ್ದಕ್ಕಾಗಿ ನನ್ನ ವಿರುದ್ಧ ಸುಳ್ಳು ಕೇಸ್‌ ಗಳನ್ನು ದಾಖಲಿಸಿದ್ದಾರೆ. ಜನರ ಬೆಂಬಲ ನನ್ನ ಜೊತೆ ಇರುವವರೆಗೆ ಈ ಯಾವುದಕ್ಕೂ ನಾನು ಜಗ್ಗಲ್ಲ, ಬಗ್ಗಲ್ಲ, ಕುಗ್ಗಲ್ಲ ಎಂದರು.

ಬಳಿಕ ಜನಾರ್ಧನ ರೆಡ್ಡಿ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಜನಾರ್ಧನ ರೆಡ್ಡಿ ಇಡೀ ಬಳ್ಳಾರಿಯನ್ನೇ ಲೂಟಿಹೊಡೆದು ಜೈಲಿಗೆ ಹೋಗಿ ಬಂದ ಖದೀಮ. ಇಂಥವರು ಇಂದು ನನ್ನ ಬಗ್ಗೆ ಏಕವಚನದಲ್ಲಿ ಟೀಕೆ ಮಾಡ್ತಾರೆ. ಜನಾರ್ಧನರೆಡ್ಡಿಯವರೊಬ್ಬ ಜುಜುಬಿ ರಾಜಕಾರಣಿ. ನೀವು ಎಷ್ಟು ವರ್ಷ ಜೈಲಿಗೆ ಹೋಗಿ ಬಂದಿದೀರಿ ಎಂದು ಜಗತ್ತು ನೋಡಿದೆ. ನಿಮ್ಮ ಅಟ್ಟಹಾಸ ಮುರಿದದ್ದು, ಬಳ್ಳಾರಿ ಜಿಲ್ಲೆಯ ಮಹಾಜನತೆಯನ್ನು ಭಯಮುಕ್ತಗೊಳಿಸಿದ್ದು ಇದೇ ಸಿದ್ದರಾಮಯ್ಯ ಅನ್ನೋದನ್ನು ಮರೀಬೇಡಿ.

ಕರ್ನಾಟಕ ರಾಜ್ಯ ರಾಜಕಾರಣಕ್ಕೆ ನನ್ನ ಕೊಡುಗೆ ಏನು? ಬಳ್ಳಾರಿಗೆ ನಿಮ್ಮ ಕೊಡುಗೆ ಏನು? ನೀವೇನು ಬಳ್ಳಾರಿ ಯಜಮಾನರಾ? ಮತ ಹಾಕುವ ಬಳ್ಳಾರಿಯ ಜನ, ಸಂಡೂರಿನ ಜನ ನಮ್ಮ ಯಜಮಾನರು. ನೆನಪಿರಲಿ. ನಾನು ಗಂಗಾವತಿಗೆ ಪ್ರಚಾರಕ್ಕೆ ಹೋಗಲು ಆಗಲಿಲ್ಲ, ನಮ್ಮ ಕಾಂಗ್ರೆಸ್ ಅಭ್ಯರ್ಥಿ ಸರಿಯಾದ ಪ್ರಚಾರ ಮಾಡಲಿಲ್ಲ ಹೀಗಾಗಿ ನೀವು ಗೆದ್ರಿ. ನಿಮ್ಮ ಈ ಗೆಲುವು ಶಾಶ್ವತ ಅಲ್ಲ. ಯಾರ ಗೆಲುವೂ ಶಾಶ್ವತ ಅಲ್ಲ. ನೆನಪಿರಲಿ. ನನ್ನ ಬಗ್ಗೆ ಏಕ ವಚನದಲ್ಲಿ ಮಾತನಾಡುವ ಯೋಗ್ಯತೆ ನಿಮಗಿಲ್ಲ.

ಬಳ್ಳಾರಿಯಲ್ಲಿ ಪ್ರಜಾಪ್ರಭುತ್ವ ಇರಬಾರದಾ? ನಮ್ಮ ಸರ್ಕಾರ ಇದೆ. ಯಡಿಯೂರಪ್ಪ ಅವರು, ನೀವು ಮಾತನಾಡುತ್ತಿಲ್ಲವಾ? ನಿಮ್ಮ ಸರ್ಕಾರ ಇದ್ದಾಗ ನನಗೆ ಬಳ್ಳಾರಿಯಲ್ಲಿ ಮಾತನಾಡಲು ಜಾಗ ಕೊಟ್ಟಿರಲಿಲ್ಲ. ನನಗೆ ಕುಡಿಯೋದಕ್ಕೆ ನೀರು ಕೇಳಿದ್ರೂ ಜನ ನೀರು ಕೊಡೋಕೂ ಭಯ ಪಡ್ತಾ ಇದ್ರು. ನಮ್ಮ ಯಜಮಾನರಾದ ಬಳ್ಳಾರಿ ಜನರನ್ನು ಇಷ್ಟು ಭಯದಲ್ಲಿ ಇಟ್ಟಿದ್ರಲ್ಲಾ ಈಗ ಯಾವ ಮುಖ ಹೊತ್ತುಕೊಂಡು ಇದೇ ಜನರ ಬಳಿ ಮತ ಕೇಳಲು ಬಂದಿದ್ದೀರಿ? ನಾಚಿಕೆ ಆಗೋದಿಲ್ವಾ ನಿಮಗೆ? ಎಂದು ವಾಗ್ದಾಳಿ ನಡೆಸಿದರು.

ಬಳಿಕ ಬಿಜೆಪಿ ಕೋವಿಡ್ ಹಗರಣ ವಿಚಾರ ಕುರಿತು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಕೊರೋನಾ ಕಾಲದಲ್ಲಿ ಬಿಜೆಪಿ ಸರ್ಕಾರ ಹೆಣ ಹೂಳುವುದರಲ್ಲಿಯೂ ಹಣ ಮಾಡಿದೆ. ಅಂದಿನ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವರಾದ ಶ್ರೀರಾಮುಲು ಅವರು ಸೇರಿಕೊಂಡು ಪಿಪಿಇ ಕಿಟ್‌ ಗಳ ಖರೀದಿಯಲ್ಲಿ ಭಾರೀ ಭ್ರಷ್ಟಾಚಾರ ಮಾಡಿರುವುದು ಈ ಹಗರಣದ ತನಿಖೆ ನಡೆಸಿದ ನ್ಯಾ. ಜಾನ್‌ ಮೈಕೆಲ್‌ ಡಿಕುನ್ಹಾ ಅವರ ಸಮಿತಿಯ ವರದಿಯಲ್ಲಿ ಬಯಲಾಗಿದೆ ಎಂದು ಹೇಳಿದರು.

Siddaramaiah
ಕೋವಿಡ್ ಹಗರಣ: ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್​ಗೆ ಶಿಫಾರಸು- ದಿನೇಶ್ ಗುಂಡೂರಾವ್

ನ್ಯಾಯಮೂರ್ತಿ ಡಿಕುನ್ಹಾ ಸಮಿತಿ ಕಳೆದ ಆಗಸ್ಟ್ ತಿಂಗಳಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಸುಮಾರು 1,700ಕ್ಕೂ ಹೆಚ್ಚು ಪುಟಗಳ ತನಿಖಾ ವರದಿಯನ್ನು ಸಂಪುಟ ಉಪಸಮಿತಿ ಅಧ್ಯಯನ ನಡೆಸುತ್ತಿದೆ. ಅದು ನೀಡುವ ವರದಿಯನ್ನು ಸರ್ಕಾರ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲಿದೆ. ಇದು ನಾವೇ ಬಯಲುಗೊಳಿಸಿರುವ ಹಗರಣ. ಕೊರೋನಾ ಕಾಲದಲ್ಲಿ ಅಸಹಾಯಕ ಜನರ ನೆರವಿಗೆ ಧಾವಿಸಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ರಕ್ಷಿಸಬೇಕಾದ ಹೊಣೆ ಸರ್ಕಾರದ್ದಾಗಿತ್ತು. ಆದರೆ ಜನ ಸರಿಯಾಗಿ ಚಿಕಿತ್ಸೆ ಇಲ್ಲದೆ ಸಾಯುತ್ತಿದ್ದ ಸಂದರ್ಭವನ್ನೂ ಬಳಸಿಕೊಂಡು ದುಡ್ಡು ನುಂಗಲು ಯತ್ನಿಸಿದ್ದನ್ನು ಇಡೀ ಕರ್ನಾಟಕ ಕಂಡಿದೆ.

ಕೊರೋನಾ ಕಾಲದಲ್ಲಿ ಬೆಡ್, ಪಿಪಿಇ, ವೆಂಟಿಲೇಟರ್, ಆಕ್ಸಿಜನ್ ಸಿಲಿಂಡರ್ ನಿಂದ ಹಿಡಿದು ಸ್ಯಾನಿಟೈಸರ್ ಮತ್ತು ಮಾಸ್ಕ್ ವರೆಗೆ ಪ್ರತಿಯೊಂದು ಸಾಮಗ್ರಿ ಖರೀದಿಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ದಾಖಲೆಗಳ ಸಮೇತ ಆ ಕಾಲದಲ್ಲಿ ನಾವು ಬಯಲಿಗೆಳೆದಿದ್ದೆವು. ಈ ಬಗ್ಗೆ ನಾನು ಸದನದ ಒಳಗೆ ಮತ್ತು ಹೊರಗೆ ಮಾತನಾಡಿದ್ದೆ. ಆದರೆ ಸರ್ಕಾರ ಅವುಗಳನ್ನೆಲ್ಲ ನಿರಾಕರಿಸುತ್ತಲೇ ತನ್ನ ಭ್ರಷ್ಟಾಚಾರದ ದಂಧೆಯನ್ನು ಮುಂದುವರಿಸಿಕೊಂಡು ಹೋಗಿತ್ತು.

ನಮ್ಮ ದೇಶದಲ್ಲಿರುವ ಕಂಪೆನಿಗಳು ಪಿಪಿಇ ಕಿಟ್ ಗಳನ್ನು 200 ರಿಂದ 300 ರೂಪಾಯಿ ದರದಲ್ಲಿ ಮಾರಾಟ ಮಾಡಲು ಸಿದ್ಧ ಇರುವಾಗ ಬಿ.ಎಸ್.ಯಡಿಯೂರಪ್ಪ ಮತ್ತು ಶ್ರೀರಾಮುಲು ಸೇರಿಕೊಂಡು ಚೀನಾದ ಕಂಪೆನಿಯಿಂದ ರೂ.2,000ಕ್ಕೆ ಒಂದರಂತೆ ಪಿಪಿಇ ಕಿಟ್ ಗಳನ್ನು ಖರೀದಿ ಮಾಡಿರುವುದನ್ನು ದಾಖಲೆ ಸಹಿತ ಕೊರೊನಾ ಕಾಲದಲ್ಲಿಯೇ ನಾವು ಹೇಳಿದ್ದೆವು. ನ್ಯಾಯಮೂರ್ತಿ ಜಾನ್ ಮೈಕೆಲ್ ಡಿಕುನ್ಹಾ ತನಿಖಾ ಸಮಿತಿ ನೀಡಿರುವ ವರದಿಯನ್ನು ನಾನಿನ್ನೂ ಪೂರ್ತಿ ಓದಿಲ್ಲ. ನನ್ನ ಪ್ರಕಾರ ಮಾಧ್ಯಮಗಳಲ್ಲಿ ವರದಿಯಾಗಿರುವುದು ಒಂದು ‘‘ಮಂಜುಗಡ್ಡೆಯ ಒಂದು ಸಣ್ಣ ತುದಿ’’ ಮಾತ್ರ. ಒಂದು ಅಂದಾಜಿನ ಪ್ರಕಾರ ಹತ್ತರಿಂದ ಹದಿನೈದು ಸಾವಿರ ಕೋಟಿ ರೂಪಾಯಿಗಳಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಹೇಳಲಾಗಿದೆ. ತನಿಖಾ ಸಮಿತಿ ಆ ಎಲ್ಲ ದಾಖಲೆಗಳನ್ನು ಸಂಗ್ರಹಿಸಿರಬಹುದು ಎಂದು ತಿಳಿಸಿದರು.

ಕೊರೋನಾ ವೈರಸ್ ನಿಂದಾಗಿ ಸಂಭವಿಸಿದ ಸಾವಿನ ಬಗ್ಗೆ ಆಗಿನ ಸರ್ಕಾರ ಕೊಟ್ಟಿರುವ ಸಾವಿನ ಸಂಖ್ಯೆ ಏನೇ ಇರಬಹುದು. ನಮ್ಮ ಪ್ರಕಾರ ರಾಜ್ಯದಲ್ಲಿ ಮಕ್ಕಳು, ಮಹಿಳೆಯರು, ಯುವಜನರು ಹೀಗೆ 50,000ಕ್ಕೂ ಹೆಚ್ಚಿನ ಜನ ಸಾವಿಗೀಡಾಗಿದ್ದಾರೆ. ರಾಜ್ಯ ಸರ್ಕಾರ ಸಕಾಲದಲ್ಲಿ ಚಿಕಿತ್ಸೆ, ಔಷಧಿ ಮತ್ತು ಪ್ರತಿಬಂಧಕ ಕ್ರಮಗಳನ್ನು ಕೈಗೊಂಡಿದ್ದರೆ ಇಷ್ಟೊಂದು ಸಾವು ಖಂಡಿತ ಸಂಭವಿಸುತ್ತಿರಲಿಲ್ಲ. ಜನ ಕೊರೊನಾ ವೈರಸ್ ಗಿಂತ ಹೆಚ್ಚಾಗಿ ಬಿಜೆಪಿಯ ಭ್ರಷ್ಟಾಚಾರದ ವೈರಸ್ ನಿಂದ ಸತ್ತಿದ್ದಾರೆ. ಈ ಸಾವಿಗೆ 2019 ರಿಂದ 2023ರ ವರೆಗೆ ರಾಜ್ಯದಲ್ಲಿ ಇದ್ದ ಬಿಜೆಪಿ ನೇತೃತ್ವದ ಸರ್ಕಾರವೇ ನೇರ ಹೊಣೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಸಾವನ್ನು ಸಂಭ್ರಮಿಸುವ, ಹೆಣ ಬಿದ್ದಲ್ಲಿ ಓಡಿ ರಾಜಕೀಯದ ಬೇಳೆ ಬೇಯಿಸುವ ಬಿಜೆಪಿ ಮತ್ತು ಅದರ ನೇತೃತ್ವದ ಆಗಿನ ಸರ್ಕಾರ ಕೊರೋನಾ ಕಾಲದಲ್ಲಿಯೂ ಇದೇ ಕೆಲಸ ಮಾಡಿದೆ. ಜನ ಬೆಡ್, ವೆಂಟಿಲೇಟರ್, ಔಷಧಿ, ಪಿಪಿಇ ಕಿಟ್, ವ್ಯಾಕ್ಸಿನ್, ಮಾಸ್ಕ್, ಸ್ಯಾನಿಟೈಸರ್ ಇಲ್ಲದೆ ಸಾಯುತ್ತಿರುವಾಗ ಬಿಜೆಪಿಯವರು ಈ ವೈದ್ಯಕೀಯ ಸಾಮಗ್ರಿಗಳ ಖರೀದಿಯಲ್ಲಿ ದುಡ್ಡು ಹೇಗೆ ಬಾಚಬಹುದು ಎನ್ನುವ ಲೆಕ್ಕದಲ್ಲಿ ತೊಡಗಿದ್ದು ಅತ್ಯಂತ ಅಮಾನವೀಯ ನಡವಳಿಕೆಯಾಗಿದೆ.

Siddaramaiah
ಕೋವಿಡ್ ಅಕ್ರಮ: ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್​ಗೆ ಶಿಫಾರಸು; ರಾಜಕೀಯ ‌ದುರುದ್ದೇಶ ಎಂದ BSY

ಯಡಿಯೂರಪ್ಪನವರ ಮಗ ತಾನೊಬ್ಬ ಮಹಾ ಸತ್ಯ ಹರಿಶ್ಚಂದ್ರನ ಮಗನಂತೆ ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಾ ತಿರುಗಾಡುತ್ತಿದ್ದಾರೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿಯೂ ಆಡಳಿತದ ಸೂತ್ರ ವಿಜಯೇಂದ್ರನ ಕೈಯಲ್ಲಿಯೇ ಇತ್ತು. ಮುಖ್ಯಮಂತ್ರಿಯವರ ಸಹಿಯನ್ನು ತಾನೇ ಹಾಕುತ್ತಿದ್ದ ಎಂದು ಅವರ ಪಕ್ಷದ ನಾಯಕರೇ ಆರೋಪ ಮಾಡಿದ್ದಾರೆ. ಆದ್ದರಿಂದ ಕೊರೊನಾ ಭ್ರಷ್ಟಾಚಾರದಲ್ಲಿ ಅವರ ಪಾಲೂ ಇದೆ. ಇನ್ನೊಬ್ಬ ಆರೋಪಿ ಶ್ರೀರಾಮುಲು ರಾಜಕೀಯ ಹುಟ್ಟು ಪಡೆದಿರುವುದೇ ಬಳ್ಳಾರಿಯ ಗಣಿ ಲೂಟಿಯ ಕೆಸರಲ್ಲಿ.

ಇವರು ರಿಪಬ್ಲಿಕ್ ಆಫ್ ಬಳ್ಳಾರಿಯ ಗ್ಯಾಂಗ್ ಲೀಡರ್ ಜನಾರ್ಧನ ರೆಡ್ಡಿಯ ಶಿಷ್ಯಬಳಗಕ್ಕೆ ಸೇರಿದವರು. ಇವರಿಗೆ ರಾಜಕೀಯ ಎಂದರೆ ದುಡ್ಡು ನುಂಗುವುದಾಗಿದೆ. ಅದು ಕಬ್ಬಿಣದ ಅದಿರಾಗಬಹುದು ಇಲ್ಲವೇ ಕೊರೊನಾ ರೋಗಿಗಳನ್ನು ಉಳಿಸುವ ಪಿಪಿಇ ಕಿಟ್ ಆಗಿರಬಹುದು. ಅವರಿಗೆ ಜನರ ಪ್ರಾಣ, ಆರೋಗ್ಯ ಮುಖ್ಯ ಅಲ್ಲ, ಹಣ ಬಂದು ಜೇಬಿಗೆ ಬಿದ್ದರೆ ಸಾಕು. ಇಂತಹವರು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಕೇಳುತ್ತಾ ಅಡ್ಡಾಡುತ್ತಿರುವುದು ನಾಚಿಕೆಗೇಡಿನ ಕೆಲಸವಾಗಿದೆ. ಡಿಕುನ್ಹಾ ಸಮಿತಿ ವರದಿ ಆಧಾರದಲ್ಲಿ ಕ್ರಮಕೈಗೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ. ಕಾನೂನಿನ ಪ್ರಕ್ರಿಯೆ ಅವಸರದಲ್ಲಿ ನಡೆಯುವಂತಹದ್ದಲ್ಲ. ಅದು ಪೂರ್ಣಗೊಳ್ಳುವವರೆಗೆ ಕೊರೋನಾ ಸಾವಿಗೆ ನೇರ ಹೊಣೆಗಾರರಾಗಿರುವ ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ ಹಾಗೂ ಶ್ರೀರಾಮುಲು ಇವರೆಲ್ಲ ತಮ್ಮ ಚುನಾವಣಾ ಪ್ರಚಾರವನ್ನು ತಕ್ಷಣ ನಿಲ್ಲಿಸಿ ಮನೆಗೆ ಹೋಗಬೇಕು. ಮಾನ ಮರ್ಯಾದೆ ಇದ್ದರೆ ತಮ್ಮ ಭ್ರಷ್ಟ ಮುಖವನ್ನು ಹೊತ್ತು ಕೊಂಡು ಜನರ ಬಳಿ ಮತಕೇಳಲು ಹೋಗಬಾರದು. ಜನರು ಕೂಡಾ ಇವರ ಸಭೆಗಳನ್ನು ಬಹಿಷ್ಕರಿಸಬೇಕು ಎಂದು ವಾಗ್ದಾಳಿ ನಡೆಸಿದರು.

ಮಾಜಿ ಸಿ.ಎಂ.ಯಡಿಯೂರಪ್ಪ ಅವರು ಇದೆಲ್ಲ ಸುಳ್ಳು ಎಂದರೆ ವಾಸ್ತವಾಂಶ ಬದಲಾಗಲ್ಲ. ಈ ಬಗ್ಗೆ ನ್ಯಾಯಾಲಯವಿದೆ, ಅಲ್ಲಿ ಸತ್ಯಾಸತ್ಯತೆ ಬಯಲಾಗಲಿದೆ.‌ ಬಿಜೆಪಿಯವರು ಎಲ್ಲವನ್ನೂ ಸುಳ್ಳು ಅಂತಾರೆ. ಅವರು ಸುಳ್ಳಿನ ಪಿತಾಮಹರು. ಯಡಿಯೂರಪ್ಪ ಅವರು ಸಿ.ಎಂ.ಆಗಿದ್ದಾಗ ಕೋವಿಡ್ ಹಗರಣಗಳನ್ನು ನಾನು ವಿರೋಧಪಕ್ಷದ ನಾಯಕನಾಗಿ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ್ದೆ. ಆಗಲೂ ಸಾಕಷ್ಟು ಅಂಶಗಳನ್ನು ದಾಖಲೆ ಸಹಿತ ಮಾತನಾಡಿದ್ದೆ. ಈಗ ಆಯೋಗದ ವರದಿ ಬರಲಿ, ನಂತರ ಕ್ಯಾಬಿನೆಟ್ ನಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು.

ಆಕ್ಸಿಜನ್ ಕೊರತೆಯಿಂದ ಜನರು ಮೃತಪಟ್ಟಿರುವ ದುರ್ಘಟನೆಗಳು ನಡೆದವು. ಇದನ್ನು ಸಚಿವರಾಗಿದ್ದ ಸುಧಾಕರ್ ಅವರು ಸುಳ್ಳು ಸುಳ್ಳು ಎಂದರು. ನಾನು ಮತ್ತು ಡಿ.ಕೆ ಶಿವಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿದ ಮೇಲೆ ಸರ್ಕಾರ ತನ್ನ ನಿರ್ಲಕ್ಷ್ಯ ಒಪ್ಪಿಕೊಂಡು, ಸಮಸ್ಯೆ ಸರಿಪಡಿಸಿ ಜನರಿಗೆ ಅನುಕೂಲ ಮಾಡಿಕೊಟ್ಟಿತು. ಶೀಘ್ರದಲ್ಲೇ ಸಿ.ಎಂ ರಾಜೀನಾಮೆ ನೀಡಲಿದ್ದಾರೆ ಎಂದು ಯಡಿಯೂರಪ್ಪ ಅವರು ಮಾತನಾಡಿದ್ದಾರೆ. ಚುನಾವಣಾ ಕಾರಣಕ್ಕೆ ಇಂತಹ ಹೇಳಿಕೆ ನೀಡುತ್ತಾರೆ. ನಾನು ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳುವವನು. ನಾನು ಸಣ್ಣ ತಪ್ಪೂ ಮಾಡಿಲ್ಲ, ಮಾಡೋದು ಇಲ್ಲ, ಸಿ.ಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ.‌

ಯಡಿಯೂರಪ್ಪ ಅವರು 2 ಸಾವಿರ ಕೋಟಿ ಕೊಟ್ಟು ಮುಖ್ಯಮಂತ್ರಿ‌ ಆದರು.‌ ಇವರ ಪುತ್ರ ವಿಜಯೇಂದ್ರ ಕೂಡ ದುಡ್ಡು ಕೊಟ್ಟೇ ಪಕ್ಷದ ಅಧ್ಯಕ್ಷ ಆಗಿದ್ದು ಅಂತ ಯತ್ನಾಳ್ ಅವರೇ ಹೇಳಿದ್ದಾರೆ. ಇವರಿಗೆ ಸಾವಿರ ಸಾವಿರ ಕೋಟಿ ಎಲ್ಲಿಂದ ಬಂತು? ಇದರ ಸತ್ಯಾಸತ್ಯತೆ ಕೂಡ ಬಯಲಾಗಬೇಕು. ಗೃಹಲಕ್ಷ್ಮಿಗೆ ಹಂಚಲು ಹಣ ಇಲ್ಲ ಎಂಬ ದೇವೇಗೌಡರ ಹೇಳಿಕೆ ಶುದ್ಧ ಸುಳ್ಳು. ಅಕ್ಟೋಬರ್ ವರೆಗೂ ಒಂದು ತಿಂಗಳದ್ದೂ ತಪ್ಪದೆ ಗೃಹಲಕ್ಷ್ಮಿ ಹಣ ನೀಡಿದ್ದೇವೆ ಅಂದರೆ ಏನು ಅರ್ಥ? ನವೆಂಬರ್ ತಿಂಗಳದ್ದೂ ಸದ್ಯದಲ್ಲೇ ಹಾಕುತ್ತೇವೆ.

ವಕ್ಫ್ ಆಸ್ತಿ ಒತ್ತುವರಿಯನ್ನು ತೆರವುಗೊಳಿಸುವುದಾಗಿ ತನ್ನ ಪ್ರಣಾಳಿಕೆಯಲ್ಲೇ ಬಿಜೆಪಿ ಘೋಷಿಸಿದೆ. ಬಿಜೆಪಿ ಸರ್ಕಾರವೇ 216 ಮಂದಿಯನ್ನು ಒಕ್ಕಲೆಬ್ಬಿಸಲು ನೋಟಿಸ್ ನೀಡಿತ್ತು. ಈಗ ನೋಟಿಸ್ ನೀಡಿದವರೇ ಸುಳ್ಳು ಹೇಳಿಕೆ ನೀಡುತ್ತಾ, ಪ್ರತಿಭಟನೆ ನಡೆಸುತ್ತಿದ್ದಾರೆ. ನಾವು ಒಬ್ಬೇ ಒಬ್ಬ ರೈತರನ್ನೂ ಒಕ್ಕಲೆಬ್ಬಿಸುವುದಿಲ್ಲ. ಇದು ನಮ್ಮ‌ ಸ್ಪಷ್ಟ ತೀರ್ಮಾನ.‌ ನೋಟಿಸ್ ಗಳನ್ನು ಹಿಂಪಡೆಯಬೇಕು ಎಂದು ಖಡಕ್ ಸೂಚನೆ ನೀಡಿದ್ದೇನೆ, ಚುನಾವಣೆ ಪ್ರಣಾಳಿಕೆಯಲ್ಲಿ ಅವರೇ ವಕ್ಫ್ ಆಸ್ತಿ ಒತ್ತುವರಿ ತೆರವು ಮಾಡುವುದಾಗಿ ಹೇಳಿ, ಈಗ ರಾಜಕೀಯಕ್ಕಾಗಿ ಮನಬಂದಂತೆ ಮಾತನಾಡುತ್ತಿದ್ದಾರೆಂದು ಕಿಡಿಕಾರಿದರು.ರಪ್ಪ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com