

ಬೆಂಗಳೂರು: ಖಾಲಿ ಇರುವ ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ನಾಮನಿರ್ದೇಶನ ಮಾಡಲು ಕಾಂಗ್ರೆಸ್ ಹೈಕಮಾಂಡ್ ಅನುಮೋದನೆ ನೀಡಿದೆ.
ಏಪ್ರಿಲ್ 8 ಮತ್ತು 9 ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಎಐಸಿಸಿ ಅಧಿವೇಶನದ ನಂತರ ಏಪ್ರಿಲ್ 10 ರಂದು ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಮತ್ತು ಎಐಸಿಸಿ ಪದಾಧಿಕಾರಿಗಳು ಇಬ್ಬರೂ ಇದರಲ್ಲಿ ಭಾಗವಹಿಸಲಿದ್ದಾರೆ.
ಎಂಎಲ್ ಸಿ ರೇಸ್ ನಲ್ಲಿರುವ ಕಾರ್ಯದರ್ಶಿಗಳು ಸೇರಿದಂತೆ ಎಐಸಿಸಿ ಪದಾಧಿಕಾರಿಗಳಾಗಿರುವ ನಾಯಕರಿಗೆ ಯಾವುದೇ ಮುಜುಗರವಾಗದಂತೆ ನೋಡಿಕೊಳ್ಳಲು ಈ ಘೋಷಣೆ ಸಮಯ ನಿಗದಿಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಒಕ್ಕಲಿಗ ಸಮುದಾಯದ ಹಿರಿಯ ನಾಯಕ, ಎಸ್‌ಸಿ ಮತ್ತು ಒಬಿಸಿ ಸಮುದಾಯಗಳಿಂದ ತಲಾ ಒಬ್ಬರು ಮತ್ತು ಇನ್ನೊಬ್ಬ ಅಲ್ಪಸಂಖ್ಯಾತ ನಾಯಕ ಸೇರಿದಂತೆ ನಾಲ್ವರ ಹೆಸರುಗಳನ್ನು ಪಕ್ಷದ ಹೈಕಮಾಂಡ್ ಅನುಮೋದಿಸಿದೆ ಎಂದು ಮೂಲಗಳು ತಿಳಿಸಿವೆ.
"ಪಕ್ಷಕ್ಕಾಗಿ ಕೆಲಸ ಮಾಡುತ್ತಿರುವವರನ್ನು ನಾಮನಿರ್ದೇಶನ ಮಾಡುವುದು ನಮ್ಮ ಚಿಂತನೆ. ಅದು ನಿರುದ್ಯೋಗ ಭತ್ಯೆಯಾಗಬಾರದು. ಈ ಬಗ್ಗೆ ನಾನು ಸಿಎಂ ಮತ್ತು ಹೈಕಮಾಂಡ್ ಜೊತೆ ಮಾತನಾಡಿದ್ದೇನೆ" ಎಂದು ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಶುಕ್ರವಾರ ನವದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಬೆಂಗಳೂರಿಗೆ ತೆರಳುವ ಮೊದಲು ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಹಲವಾರು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ.
ಸಿದ್ದರಾಮಯ್ಯ ಅವರು ಸಂಭಾವ್ಯರ ಪಟ್ಟಿಯನ್ನು ಪಟ್ಟಿಯನ್ನು ಖರ್ಗೆ ಅವರಿಗೆ ನೀಡಿದ್ದಾರೆ. ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಸಹಮತಕ್ಕೆ ಬಂದು ಸಂಭಾವ್ಯರ ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸಿ’ ಎಂದು ಖರ್ಗೆ ಸೂಚಿಸಿದ್ದಾರೆ. ಪಕ್ಷಕ್ಕಾಗಿ ಹಲವು ವರ್ಷಗಳಿಂದ ಎಲೆಮರೆ ಕಾಯಿಯಂತೆ ದುಡಿಯುತ್ತಿರುವ ಸಣ್ಣ ಸಮುದಾಯಗಳ ನಾಯಕರಿಗೆ ಅವಕಾಶ ನೀಡುವ ಬಗ್ಗೆಯೂ ಪರಿಶೀಲನೆ ನಡೆಸಿ ಎಂದು ಖರ್ಗೆ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.