ಪ್ರಧಾನಿ ಮೋದಿ ಸಾಲ ಮಾಡಿಲ್ಲವೇ? ಅಚ್ಚೇ ದಿನ್ ಯಾರಿಗಾದರೂ ಬಂದಿದೆಯೇ?: ಡಿ.ಕೆ ಶಿವಕುಮಾರ್

ಮೋದಿ ಅವರು ದೇಶದ ಪ್ರತಿಯೊಬ್ಬರ ಅಕೌಂಟ್‌ಗೆ 15 ಲಕ್ಷ ರೂಪಾಯಿ ಹಾಕುತ್ತೇವೆ ಎಂದಿದ್ದರು ಎಲ್ಲಿ ಹಾಕಿದ್ದಾರೆ? ನಾವು ಕನಿಷ್ಠ ಪಕ್ಷ ಗೃಹಲಕ್ಷ್ಮಿ ಯೋಜನೆಯಡಿ 2,000 ರೂ., ಉಚಿತ ವಿದ್ಯುತ್, ಅಕ್ಕಿ ಮತ್ತು ಬಸ್ ಪ್ರಯಾಣದ ಮೂಲಕ ಜನರಿಗೆ ಸಹಾಯ ಮಾಡುತ್ತಿದ್ದೇವೆ.
DK Shivkumar
ಡಿಕೆ.ಶಿವಕುಮಾರ್
Updated on

ದಾವಣಗೆರೆ: ಬಿಜೆಪಿ ನಾಯಕರು ನಮ್ಮನ್ನು ‘ಸಾಲದ ಸರ್ಕಾರ’ ಎಂದು ಕರೆಯುತ್ತಿದ್ದಾರೆ. ಆದರೆ, ಕೇಂದ್ರದ ನರೇಂದ್ರ ಮೋದಿ ಸರ್ಕಾರ ಸಾಲವನ್ನೇ ಮಾಡಿಲ್ಲವೇ? ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಶುಕ್ರವಾರ ಪ್ರಶ್ನೆ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ನಮ್ಮನ್ನು 'ಸಾಲದ ಸರ್ಕಾರ' ಎಂದು ಕರೆಯುತ್ತಿದ್ದಾರೆ. ಆದರೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಸಾಲ ಪಡೆದಿಲ್ಲವೇ? ಬೆಲೆ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ನಾವು ಜನರ ಕೈಗೆ ಹಣ ನೀಡುತ್ತಿದ್ದೇವೆ ಎಂದು ಹೇಳಿದರು.

ಮೋದಿ ಅವರು ದೇಶದ ಪ್ರತಿಯೊಬ್ಬರ ಅಕೌಂಟ್‌ಗೆ 15 ಲಕ್ಷ ರೂಪಾಯಿ ಹಾಕುತ್ತೇವೆ ಎಂದಿದ್ದರು ಎಲ್ಲಿ ಹಾಕಿದ್ದಾರೆ? ಅಚ್ಚೇ ದಿನ್ ಯಾರಿಗಾದರೂ ಬಂದಿದೆಯೇ? ನಾವು ಕನಿಷ್ಠ ಪಕ್ಷ ಗೃಹಲಕ್ಷ್ಮಿ ಯೋಜನೆಯಡಿ 2,000 ರೂ., ಉಚಿತ ವಿದ್ಯುತ್, ಅಕ್ಕಿ ಮತ್ತು ಬಸ್ ಪ್ರಯಾಣದ ಮೂಲಕ ಜನರಿಗೆ ಸಹಾಯ ಮಾಡುತ್ತಿದ್ದೇವೆ. ಜನರ ಬಗ್ಗೆ ನೈಜ ಕಾಳಜಿ ಇದ್ದರೆ ಕೇಂದ್ರ ಸರ್ಕಾರ ಕೂಡ ಇಂತಹದೊಂದು ಯೋಜನೆ ರೂಪಿಸಲಿ. ಜನರ ಬ್ಯಾಂಕ್‌ ಖಾತೆಗಳಿಗೆ ತಿಂಗಳಿಗೆ ರೂ. 10,000 ಆರ್ಥಿಕ ನೆರವು ನೀಡಲಿ ಎಂದು ಸವಾಲು ಹಾಕಿದರು.

DK Shivkumar
ನಿಮ್ಮ ತಪ್ಪುಗಳ ಮುಚ್ಚಿಕೊಳ್ಳಲು ಸಂಸದರ ಮೇಲೆ ಆರೋಪ ಮಾಡುವುದು ಎಷ್ಟು ಸರಿ? ಅಭಿವೃದ್ಧಿ ನಿಲ್ಲಿಸಿ ಸಾಲ ಹೆಚ್ಚಿಸಿರುವ ಶ್ರೇಯಸ್ಸು ಸಿದ್ದರಾಮಯ್ಯಗೆ ಸಲ್ಲುತ್ತದೆ!

‘ಬಿಜೆಪಿ ಖಾಲಿ ಮಾತುಗಳ ಮೂಲಕ ಜನರನ್ನು ಮರಳು ಮಾಡುತ್ತಿದೆ. ಅಕ್ಕಿಗೆ ಅರಿಶಿನ ಬೆರೆಸಿ ಅಯೋಧ್ಯೆಯಿಂದ ತಂದಿರುವಂತೆ ಬಿಂಬಿಸಿಕೊಂಡಿದೆ. ಅಕ್ಕಿ ಹಾಗೂ ಅರಿಶಿನ ಬೆರೆಸಿದ ವಿಡಿಯೊಗಳು ನಮ್ಮ ಬಳಿ ಇನ್ನೂ ಹಾಗೆ ಇವೆ. ಅಕ್ಷತೆಯನ್ನು ಮನೆ–ಮನೆಗೆ ತಲುಪಿಸಿದ ರೀತಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳು ಏಕೆ ಪೂರೈಸಬಾರದು?’ ಎಂದು ವ್ಯಂಗ್ಯವಾಡಿದರು.

‘ನನ್ನೊಬ್ಬನಿಂದ ಅಥವಾ ಸಿದ್ದರಾಮಯ್ಯ ಅವರೊಬ್ಬರಿಂದ ರಾಜ್ಯ ಸರ್ಕಾರ ನಡೆಯುತ್ತಿಲ್ಲ. ಇಬ್ಬರು ಒಟ್ಟಿಗೆ ಶ್ರಮಿಸಿ ಕಾಂಗ್ರೆಸ್‌ ಅಧಿಕಾರಕ್ಕೆ ತಂದಿದ್ದೇವೆ. ಉಪಚುನಾವಣೆಯಲ್ಲಿ ಕೂಡ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ನಮ್ಮೊಂದಿಗೆ ಪಕ್ಷದ ಕಾರ್ಯಕರ್ತರು, ಶಾಸಕರು ಹಾಗೂ ಸಚಿವರೂ ಇದ್ದಾರೆ. ನಾವು ಜಾತಿ, ಧರ್ಮದ ಮೇಲೆ ರಾಜಕಾರಣ ಮಾಡುವುದಿಲ್ಲ. ನೀತಿಯ ಮೇಲೆ ರಾಜಕಾರಣ ಮಾಡುತ್ತೇವೆ’ ಎಂದು ಇದೇ ವೇಳೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com