

ಬೆಂಗಳೂರು: ಬಿಡದಿ ಸಮೀಪದ ಪ್ರಸ್ತಾವಿತ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ (GBIT) ಯೋಜನೆಗೆ ಸಂಬಂಧಿಸಿದಂತೆ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ನಡೆಸಿದ ಪಿಸುಮಾತು ಕುರಿತು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಪಷ್ಟನೆ ನೀಡಿದ್ದಾರೆ.
ಹೌದು.. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಅತಿವೃಷ್ಠಿ ಹಾಗೂ ಅನಾವೃಷ್ಟಿ ಪರಿಶೀಲನಾ ಸಭೆಗೂ ಮುನ್ನ ಸಚಿವ ಮಧು ಬಂಗಾರಪ್ಪ ಹಾಗೂ ವಿಜಯೇಂದ್ರ ನಡುವೆ ನಡೆದ ಮಾತುಕತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿತ್ತು.
ಬಿಡದಿ ಟೌನ್ ಶಿಪ್ ಹೋರಾಟದ ವಿಚಾರವಾಗಿ ಉಭಯ ನಾಯಕರು ಪಿಸು ದನಿಯಲ್ಲಿ ಮಾತುಕತೆ ನಡೆಸಿದ್ದರು. ಹೋರಾಟ ಗಂಭೀರ ಸ್ವರೂಪದಲ್ಲಿಲ್ಲ ಎಂಬ ವಿಚಾರವನ್ನು ಮಧು ಬಂಗಾರಪ್ಪ ಅವರಲ್ಲಿ ವಿಜಯೇಂದ್ರ ಹಂಚಿಕೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ಈ ಆಡಿಯೋ ಫುಲ್ ವೈರಲ್ ಅಗುತ್ತಿದ್ದಂತೆಯೇ ಸ್ವತಃ ವಿಜಯೇಂದ್ರ ಸ್ಪಷ್ಟನೆ ನೀಡಿದ್ದಾರೆ.
ವಿಜಯೇಂದ್ರ ಹೇಳಿದ್ದೇನು?
'ರೈತರ ಭೂಮಿ ಮತ್ತು ಹಿತಾಸಕ್ತಿಗಳ ರಕ್ಷಣೆಯ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಬಿಡದಿ ಹೋರಾಟಕ್ಕೆ ಸಂಬಂಧಿಸಿದಂತೆ ಬಿಜೆಪಿಯ ನಿಲುವಿನಲ್ಲಿ ಯಾವುದೇ ಗೊಂದಲವಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳು ರೈತರ ಹಿತಾಸಕ್ತಿ ರಕ್ಷಿಸುವ ಸಾಮಾನ್ಯ ಉದ್ದೇಶಕ್ಕಾಗಿ ಹೋರಾಟ ನಡೆಸುತ್ತಿವೆ' ಎಂದು ವಿಜಯೇಂದ್ರ ತಿಳಿಸಿದ್ದಾರೆ.
ಕಳೆದ ವಾರ ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ಎರಡೂ ಪಕ್ಷಗಳು ಜಂಟಿಯಾಗಿ ಪಾದಯಾತ್ರೆ ನಡೆಸುವ ಸಾಧ್ಯತೆ ಕುರಿತು ಚರ್ಚಿಸಿದ್ದಾಗಿ ವಿಜಯೇಂದ್ರ ಹೇಳಿದ್ದಾರೆ. ಇದಕ್ಕೆ ಕುಮಾರಸ್ವಾಮಿ ಸಕಾರಾತ್ಮಕವಾಗಿ ಸ್ಪಂದಿಸಿದ್ದರು ಎಂದು ಅವರು ತಿಳಿಸಿದ್ದಾರೆ.
ಬಳಿಕ ಜೆಡಿಎಸ್ ಪಾದಯಾತ್ರೆಯ ದಿನಾಂಕಗಳನ್ನು ಘೋಷಿಸಿದ ನಂತರ ಹಿರಿಯ ಬಿಜೆಪಿ ನಾಯಕರೊಂದಿಗೆ ಚರ್ಚೆ ನಡೆಸಲಾಯಿತು. ಪಾದಯಾತ್ರೆಗೆ ಸಾಂಕೇತಿಕ ಬೆಂಬಲ ನೀಡುವುದರ ಜೊತೆಗೆ, ವಿಧಾನಮಂಡಲದ ಒಳಗೂ ರೈತರ ಸಮಸ್ಯೆಗಳನ್ನು ಪ್ರಸ್ತಾಪಿಸುವ ನಿರ್ಧಾರ ಕೈಗೊಳ್ಳಲಾಯಿತು ಎಂದು ವಿಜಯೇಂದ್ರ ವಿವರಿಸಿದ್ದಾರೆ.
ಪಾದಯಾತ್ರೆಗೆ ಗೈರಾಗಿದ್ದೇಕೆ?
ಬಿಡದಿ ರೈತರ ಪಾದಯಾತ್ರೆಯಲ್ಲಿ ತಾವು ಭಾಗವಹಿಸದಿರುವುದರ ಹಿಂದೆ ಯಾವುದೇ ರಾಜಕೀಯ ಕಾರಣವಿಲ್ಲ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಹಲವು ಕಾರ್ಯಕ್ರಮಗಳಿಗೆ ಭಾನುವಾರ ಹಾಜರಾಗಬೇಕಿತ್ತು. ಸ್ಥಳೀಯ ಪಕ್ಷದ ನಾಯಕರು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಆ ಕಾರ್ಯಕ್ರಮಗಳಿಗೆ ತೆರಳಿದ್ದಾಗಿ ಅವರು ಹೇಳಿದ್ದಾರೆ.
ವಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಹಲವು ಬಿಜೆಪಿ ನಾಯಕರು ಪಾದಯಾತ್ರೆಗೆ ಸಾಂಕೇತಿಕ ಬೆಂಬಲ ನೀಡಿದ್ದಾರೆ. ಹೀಗಾಗಿ ಈ ವಿಚಾರದಲ್ಲಿ ಪಕ್ಷದೊಳಗೆ ಯಾವುದೇ ಗೊಂದಲವಿಲ್ಲ ಎಂದು ವಿಜಯೇಂದ್ರ ತಿಳಿಸಿದ್ದಾರೆ. “ಬಿಜೆಪಿ ಯಾವಾಗಲೂ ರೈತರ ಪರವಾಗಿ ನಿಲ್ಲಲಿದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರೈತರ ಮೇಲೆ ಸರ್ಕಾರ ಒತ್ತಡ
ಬಿಡದಿ ಹೋರಾಟ ನಡೆಸುತ್ತಿರುವ ರೈತರ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.
ಪರಿಹಾರ ನೀಡುವ ಆಮಿಷವೊಡ್ಡಿ ಕೆಲ ರೈತರನ್ನು ಹೋರಾಟದಿಂದ ಹಿಂದೆ ಸರಿಸಲು ಪ್ರಯತ್ನಿಸಲಾಗುತ್ತಿದೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ. ಈ ವಿಚಾರವನ್ನು ಈಗಾಗಲೇ ಸಂಬಂಧಪಟ್ಟ ಸಚಿವರ ಗಮನಕ್ಕೂ ತರಲಾಗಿದೆ. ಬಿಡದಿ ಹೋರಾಟಕ್ಕೆ ಬಿಜೆಪಿಯ ಬೆಂಬಲ ಅಚಲವಾಗಿದೆ. ಕರ್ನಾಟಕದಾದ್ಯಂತ ರೈತರ ಭೂಮಿ ರಕ್ಷಣೆಗಾಗಿ ಬಿಜೆಪಿ ಹೋರಾಟ ನಡೆಸಲಿದೆ ಎಂದು ಅವರು ಘೋಷಿಸಿದ್ದಾರೆ.
ಬಿಡದಿ ಮಾತ್ರವಲ್ಲದೆ, ವಿಮಾನ ನಿಲ್ದಾಣ ಸೇರಿದಂತೆ ವಿವಿಧ ಯೋಜನೆಗಳಿಗಾಗಿ ನಡೆಯುವ ಭೂಸ್ವಾಧೀನದ ವಿಚಾರದಲ್ಲೂ ರೈತರ ಪರವಾಗಿ ಬಿಜೆಪಿ ನಿಲ್ಲಲಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಜೆಡಿಎಸ್ ಹೋರಾಟ ತೀವ್ರ
ಬಿಡದಿ ಯೋಜನೆಗಾಗಿ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳುವ ಸರ್ಕಾರದ ಕ್ರಮವನ್ನು ಬಿಜೆಪಿ ಹಾಗೂ ಮೈತ್ರಿ ಪಕ್ಷ ಜೆಡಿಎಸ್ ವಿರೋಧಿಸುತ್ತಿವೆ. ರೈತರ ಜೀವನೋಪಾಯಕ್ಕೆ ಧಕ್ಕೆಯಾಗಲಿದೆ ಎಂದು ಆರೋಪಿಸಿರುವ ಎರಡೂ ಪಕ್ಷಗಳು ರೈತರ ಹೋರಾಟಕ್ಕೆ ಬೆಂಬಲ ನೀಡಿವೆ.
ಈ ನಡುವೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರು ಕೂಡ ಬಿಡದಿ ಯೋಜನೆ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಬಿಡದಿ ಭೂಸ್ವಾಧೀನ ವಿರೋಧಿಸಿ ಬಿಜೆಪಿ-ಜೆಡಿಎಸ್ ಜಂಟಿಯಾಗಿ ಪಾದಯಾತ್ರೆಯನ್ನೂ ನಡೆಸಿದ್ದು, ರೈತರ ಭೂಮಿ ಮತ್ತು ಜೀವನೋಪಾಯವನ್ನು ರಕ್ಷಿಸಬೇಕು ಎಂದು ಒತ್ತಾಯಿಸಿವೆ.
ಸಮಿತಿ ರಚನೆ
ಮತ್ತೊಂದೆಡೆ, ಬಿಡದಿ ಟೌನ್‌ಶಿಪ್ ಯೋಜನೆಯು ಬೆಂಗಳೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಯೋಜಿತ ನಗರಾಭಿವೃದ್ಧಿ ಹಾಗೂ ಆಧುನಿಕ ಸಮಗ್ರ ಟೌನ್‌ಶಿಪ್ ನಿರ್ಮಾಣದ ಉದ್ದೇಶ ಹೊಂದಿದೆ ಎಂದು ರಾಜ್ಯ ಸರ್ಕಾರ ಸಮರ್ಥಿಸಿಕೊಂಡಿದೆ. ಯೋಜನೆಗೆ ಸಂಬಂಧಿಸಿದ ವಿವಿಧ ಅಭಿಪ್ರಾಯಗಳು ಹಾಗೂ ರೈತರು ಮತ್ತು ಸ್ಥಳೀಯರ ಆತಂಕಗಳನ್ನು ಪರಿಶೀಲಿಸಲು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಜಸ್ಟಿಸ್ ಗುಹಾನಾಥನ್ ನರೇಂದ್ರ ಅವರ ನೇತೃತ್ವದಲ್ಲಿ ಸರ್ಕಾರ ಉನ್ನತ ಮಟ್ಟದ ಸಮಿತಿಯನ್ನೂ ರಚಿಸಿದೆ.