

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವಿನ ಜಟಾಪಟಿ ಮುಂದುವರೆದಿದ್ದು, ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಸುರೇಶ್ ಕುಮಾರ್ ವಿರುದ್ಧ ಕಾಂಗ್ರೆಸ್ ನಾಯಕಿ ಲಾವಣ್ಯ ಬಲ್ಲಾಳ್ ತೀವ್ರ ಟೀಕೆ ಮಾಡಿದ್ದಾರೆ.
ಬಿಜೆಪಿ ನಾಯಕ ಸುರೇಶ್ ಕುಮಾರ್ ಕಾಂಗ್ರೆಸ್ ಸಂಸದ ಹಾಗೂ ವಿಪಕ್ಷ ನಾಯಕ ರಾಹುಲ್ ಗಾಂಧಿ ಕುರಿತಂತೆ ಟ್ವೀಟ್ ಮಾಡಿ ಕಾಲೆಳೆದಿರುವುದು ಲಾವಣ್ಯ ಬಲ್ಲಾಳ್ ಅವರ ಕಣ್ಣು ಕೆಂಪಾಗುವಂತೆ ಮಾಡಿದೆ.
ಇದೇ ವಿಚಾರವಾಗಿ ಎಕ್ಸ್ ನಲ್ಲಿ ಸುರೇಶ್ ಕುಮಾರ್ ಅವರ ಪೋಸ್ಟ್ ವೊಂದನ್ನು ಟೀಕಿಸಿರುವ ಲಾವಣ್ಯ ಬಲ್ಲಾಳ್, 'ಮೂರು ಕತ್ತೆ ವಯಸ್ಸಾದ್ರು ಹೀಗೆ ಮಾತಾಡ್ತೀರಲ್ಲ' ಎಂದು ಕಿಡಿಕಾರಿದ್ದಾರೆ.
ಸುರೇಶ್ ಕುಮಾರ್ ವ್ಯಂಗ್ಯ
ಇನ್ನು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ರೈತ ಬಸವರಾಜ ಈಶಪ್ಪ ಜಾಲಿಹಾಳ ಎನ್ನುವವರು ತಮ್ಮ ಕೃಷಿಭೂಮಿಯಲ್ಲಿ ಚೆಂಡು ಹೂವಿನ ಬೆಳೆ ಬೆಳೆದಿದ್ದರು.
ಅದರಲ್ಲಿ ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಮೂಡುವಂತೆ ವಿವಿಧ ಕಡೆ ಕೆಂಪು ಬಣ್ಣದ ಹೂಗಿಡ ನೆಟ್ಟಿದ್ದರು. ಇದೀಗ ಅದು ಹೂ ಬಿಟ್ಟಿದ್ದು ಆಗಸದಿಂದ ನೋಡಿದರೆ ಅಲ್ಲಿ ಮೋದಿ ಎಂಬ ಹೆಸರು ಕಾಣುತ್ತದೆ.
ಈ ಕುರಿತ ಪತ್ರಿಕಾ ವರದಿಯನ್ನು ಹಂಚಿಕೊಂಡ ಸುರೇಶ್ ಕುಮಾರ್, ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು 'ಅಯ್ಯಯ್ಯೋ! ರಾಹುಲ್ ಗಾಂಧಿಗೆ ಮತ್ತೊಂದು ಅಸ್ತ್ರ ಸಿಕ್ಕೇ ಬಿಡ್ತು. "#ತೋಟ_ಚೋರಿ " ಎಂದು ವ್ಯಂಗ್ಯಾತ್ಮಕ ಪೋಸ್ಟ್ ಮಾಡಿದ್ದಾರೆ.
ಇದಕ್ಕೆ ಉತ್ತರವಾಗಿ ಲಾವಣ್ಯ ಬಲ್ಲಾಳ್ ಪೋಸ್ಟ್ ಮೂಲಕ ಕಿಡಿಕಾರಿದ್ದಾರೆ.