ಅಡ್ಡ ಮತದಾನ ಮಾಡಿದವರ ಹೆಸರು ಹೇಳಿ: ತಡ ಮಾಡದೆ 25 ಶಾಸಕರನ್ನು ಬಿಜೆಪಿಗೆ ಸೇರಿಸಿಕೊಳ್ಳಿ; ವಿಪಕ್ಷ ನಾಯಕರಿಗೆ ಡಿಕೆಶಿ ಸವಾಲು

ಕರ್ನಾಟಕದಲ್ಲಿ ಬಿಜೆಪಿಯವರು ತಪ್ಪು ಮಾಡಿಲ್ಲ ಎಂದಾದರೆ ಯಾಕೆ ಪ್ರಕರಣ ದಾಖಲಿಸಬೇಡಿ ಎನ್ನುತ್ತಿದ್ದಾರೆ? ಯಾಕೆ ರಾಜ್ಯಪಾಲರ ಬಳಿಗೆ ಹೋಗಿದ್ದಾರೆ? ಪ್ರತಿಭಟನೆ ಮಾಡುತ್ತೇವೆ ಎನ್ನುತ್ತಿದ್ದಾರೆ?
Dk Shivakumar
ಡಿ.ಕೆ ಶಿವಕುಮಾರ್
Updated on: 

ದೆಹಲಿ: ಮತಗಳ್ಳತನದ ಬಗ್ಗೆ ಕರ್ನಾಟಕದಲ್ಲಿ ನಾವು ತನಿಖೆ ಮುಂದುವರೆಸುತ್ತೇವೆ. ಸಂವಿಧಾನ ಉಳಿಸಲು, ಪ್ರಜಾಪ್ರಭುತ್ವ ರಕ್ಷಿಸಲು ನಾವು ಹೋರಾಡುತ್ತೇವೆ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.

ದೆಹಲಿಯ ಕರ್ನಾಟಕ ಭವನದ ಬಳಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಬಿಜೆಪಿಯವರು ತಪ್ಪು ಮಾಡಿಲ್ಲ ಎಂದಾದರೆ ಯಾಕೆ ಪ್ರಕರಣ ದಾಖಲಿಸಬೇಡಿ ಎನ್ನುತ್ತಿದ್ದಾರೆ? ಯಾಕೆ ರಾಜ್ಯಪಾಲರ ಬಳಿಗೆ ಹೋಗಿದ್ದಾರೆ? ಪ್ರತಿಭಟನೆ ಮಾಡುತ್ತೇವೆ ಎನ್ನುತ್ತಿದ್ದಾರೆ? ಅರ್ಜಿ ನಮೂನೆ 7ಕ್ಕೆ ಅಮಾಯಕ ಕಾರ್ಯಕರ್ತರಿಂದ ಸಹಿ ಹಾಕಿಸಿದ್ದಾರೆ. ಮುಖಂಡರುಗಳೇ ಸಹಿ ಹಾಕಬೇಕಿತ್ತು" ಎಂದರು.

"ಅನೇಕ ಕಡೆ ಅರ್ಜಿ ನಮೂನೆ 7 ಕ್ಕೆ ತಪ್ಪಾಗಿ ಸಹಿ ಮಾಡಿದ್ದೇವೆ ಎಂದು ಅರ್ಜಿ ವಾಪಸ್ ಪಡೆದಿದ್ದಾರೆ. ಅನೇಕ ಕಡೆ ಪ್ರಕರಣಗಳು ದಾಖಲಾಗಿವೆ, ಬಿಎಲ್ ಓಗಳೇ ದೂರು ನೀಡಿದ್ದಾರೆ. ಕಾರ್ಯಕರ್ತರಿಂದ ಮಾಡಬಾರದ್ದನೆಲ್ಲಾ ಮಾಡಿಸಿಕೊಂಡು ಅರಾಜಕತೆ ಸೃಷ್ಟಿ ಮಾಡಿರುವವರು ಬಿಜೆಪಿಯವರು. ಅವರು ಮಾಡಿರುವ ತಪ್ಪನ್ನು ಮುಚ್ಚಿಕೊಳ್ಳಲೇ ಬೇಕಲ್ಲವೇ? ಮತದಾನದ ಹಕ್ಕನ್ನು ಕಿತ್ತು ಹಾಕಲು ಹೊರಟವರು ಬಿಜೆಪಿಯವರು. ಅಪರಾಧ ಮಾಡಿ ಬಡವರ ವಿರುದ್ಧ ಕೆಲಸ ಮಾಡಿದ್ದಾರೆ" ಎಂದು ಕಿಡಿಕಾರಿದರು.

ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರ ಬಳಿ ನಾನು ಮನವಿ ಮಾಡುತ್ತೇನೆ. ಎಚ್ಚರಿಕೆಯಿಂದಿರಿ, ಮತಗಳು ಕಳೆದುಕೊಂಡಿರುವವರು ಬಿಎಲ್ಎ, ಬಿಎಲ್ಓ ಗಳಿಗೆ ಮನವರಿಕೆ ಮಾಡಿ. ಜನರ ಮತದಾನದ ಹಕ್ಕನ್ನು ಉಳಿಸಬೇಕು ಎಂದರು.

Dk Shivakumar
ಚುನಾವಣೆ ಘೋಷಣೆಯಾದ್ರೆ 25 ಕಾಂಗ್ರೆಸ್‌ ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ ಹೊಸ ಬಾಂಬ್‌

"ಇಂಡಿಯಾ ಒಕ್ಕೂಟದ ಪಕ್ಷಗಳ ‌ನಾಯಕರೆಲ್ಲರೂ ಒಟ್ಟಿಗೆ ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದೇವೆ. ನಮಗೆ ನ್ಯಾಯ ದೊರಕುತ್ತದೆ ಎನ್ನುವ ವಿಶ್ವಾಸವಿದೆ. ನಮ್ಮ ಹೋರಾಟಕ್ಕೆ ಮಣಿದು ಅಲ್ಪಸಂಖ್ಯಾತರ, ಹಿಂದುಳಿದವರ, ಪರಿಶಿಷ್ಟರ ಮತಗಳನ್ನು ತೆಗೆದು ಹಾಕಿರುವ ಬಗ್ಗೆ ವಿಶೇಷ ಅಭಿಯಾನ ನಡೆಸಿ ಎಂದು ಈಗಾಗಲೇ ಚುನಾವಣಾ ಆಯೋಗ ತಿಳಿಸಿತ್ತು" ಎಂದರು.

"ಮತಗಳ್ಳತನ ವಿರೋಧಿಸಿ ದೆಹಲಿಯಲ್ಲಿ ನಡೆದ ಪ್ರತಿಭಟನೆಗೆ ಲಕ್ಷಾಂತರ ಜನ ಸೇರಿದ್ದನ್ನು ಮಾಧ್ಯಮಗಳೇ ಬಿತ್ತರಿಸಿವೆ. ಲೆಕ್ಕಕ್ಕೆ ಸಿಗದಷ್ಟು ಜನ ಸೇರಿದ್ದರು. ನವರಾತ್ರಿ ಸಮಯದಲ್ಲಿ ಕರ್ನಾಟಕದಿಂದ ಸಚಿವರು, ನೂರಕ್ಕೂ ಹೆಚ್ಚು ಶಾಸಕರು, 300 ಕ್ಕೂ ಹೆಚ್ಚು ಪದಾಧಿಕಾರಿಗಳು ಭಾಗವಹಿಸಿದ್ದರು" ಎಂದರು.

ಸಾಕಷ್ಟು ಶಾಸಕರು ಬಿಜೆಪಿ ಸೇರಲು ಉತ್ಸುಕರಾಗಿದ್ದಾರೆ ಎನ್ನುವ ವಿಜಯೇಂದ್ರ ಹೇಳಿಕೆ ಬಗ್ಗೆ ಕೇಳಿದಾಗ, "ಮೊದಲು ಅವರನ್ನು ಅದಷ್ಟು ಬೇಗ ಕರೆಸಿಕೊಳ್ಳಲಿ. ತಡಮಾಡುವುದು ಬೇಡ. ವಿಜಯೇಂದ್ರ ಹಾಗೂ ಕುಮಾರಸ್ವಾಮಿ ಅವರಿಗೆ ಅಡ್ಡ ಮತದಾನ ಮಾಡಿದ ತಮ್ಮ 12 ಜನ ಶಾಸಕರು ಯಾರು ಎಂದು ಹೇಳಲು ಆಗಲಿಲ್ಲ. ಅವರು ಎನ್ ಡಿಎ ಸರಿಯಿಲ್ಲ ಎಂದು ನಮಗೆ ಮತ ಹಾಕಿದ್ದಾರೆ" ಎಂದು ಲೇವಡಿ ಮಾಡಿದರು.

ಅಡ್ಡ ಮತದಾನ ಮಾಡಿದ 12 ಶಾಸಕರನ್ನು ಕಾಂಗ್ರೆಸ್ ‌ಪಕ್ಷಕ್ಕೆ ಸೇರಿಸಿಕೊಳ್ಳುವಿರಾ ಎಂದಾಗ, "ಅದು ಗುಪ್ತ ಮತದಾನ. ಈಗ ಆ ವಿಚಾರ ಬೇಡ" ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com