

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಸ್ಟಿಂಗ್ ಆಪರೇಷನ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿ, ಸಿದ್ದರಾಮಯ್ಯ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ ನಡೆದಿದೆ. ಜನತಾದಳದವರನ್ನು ಬಿಟ್ಟು ಬೇರೆ ಯಾರು ಈ ರೀತಿ ಮಾಡಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಈ ರೀತಿ ಕೆಲಸ ಮಾಡೋದು ಜನತಾ ದಳದವರು. ಅವರನ್ನು ಬೇರೆ ಯಾರು ಈ ರೀತಿ ಮಾಡಲು ಸಾಧ್ಯವಿಲ್ಲ. ಈಗ ಸಿದ್ದರಾಮಯ್ಯ ಬಗ್ಗೆ ಅನುಕಂಪದಿಂದ ಮಾತನಾಡುತ್ತಿದ್ದಾರೆ. ಯಾವತ್ತೂ ಇಲ್ಲದ ಅನುಕಂಪ ಈಗ ಬಂದಿದೆ. ಪಕ್ಷದಿಂದ ಓಡಿಸಿದಾಗ ಇರಲಿಲ್ಲ. ಇಂದು ಸಿದ್ದರಾಮಯ್ಯ ಮೇಲೆ ಎಚ್ಡಿಕೆಗೆ ಅನುಕಂಪ ಹುಟ್ಟಿದೆ ಪಾಪ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಅವರ ನಾಯಕತ್ವ, ಅವರು ಬಂದ ದಾರಿ ಎಲ್ಲರಿಗೂ ಗೊತ್ತಿದೆ. ಯಾರೋ ಒಬ್ಬ ಮೈಕ್ ಹಿಡಿದು ಹೆಸರು ಹೇಳಿಸಿದ್ರೆ ಆಗುತ್ತಾ? ಎಚ್.ಡಿ ಕುಮಾರಸ್ವಾಮಿ ರೀತಿ ಸಿದ್ದರಾಮಯ್ಯ ಅವರ ಚರಿತ್ರೆ ಅಲ್ಲ. ಇವರ ರೀತಿ ಸಿದ್ದರಾಮಯ್ಯ ಚರಿತ್ರೆ ಇದ್ರೆ ನಾವು ಒಪ್ಪುತ್ತೇವೆ. ಸಿದ್ದರಾಮಯ್ಯ ಸಿಎಂ ಆದಾಗ ಬರದೆ ಇರೋದು, ಈಗ ಏಕೆ ಬಂತು? ನಮ್ಮ ಪಕ್ಷದಲ್ಲಿ ಗೊಂದಲ ಹುಟ್ಟಿಸಲು ಎಚ್ಡಿಕೆ ಹುನ್ನಾರ ಮಾಡುತ್ತಿದ್ದಾರೆ. ನಾವು ನಮ್ಮ ತಪ್ಪಿದ್ದರೂ ಒಪ್ಪುತ್ತೇವೆ ಮತ್ತು ಸಿದ್ದರಾಮಯ್ಯ ಅವರ ತಪ್ಪಿದ್ದರೂ ಒಪ್ಪುತ್ತೇವೆ. ಆದರೆ, ಇದೆಲ್ಲವೂ ಹುನ್ನಾರದ ಭಾಗ' ಚಲುವರಾಯಸ್ವಾಮಿ ಆರೋಪಿಸಿದ್ದಾರೆ.
ಸ್ಟಿಂಗ್ ಆಪರೇಷನ್ ವಿಚಾರವಾಗಿ ಸಿಬಿಐ ತನಿಖೆಗೆ ವಿಪಕ್ಷಗಳ ಆಗ್ರಹ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ನಾಳೆ ಸಚಿವ ಸಂಪುಟ ಸಭೆ ಇದೆ. ಸಿಎಂ ಅಥವಾ ಎಲ್ಲ ಸಚಿವರು ಈ ಬಗ್ಗೆ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ನೋಡೋಣ. ಆದರೆ, ನನಗೆ ಅದರ ಅವಶ್ಯಕತೆ ಇಲ್ಲ ಅನ್ನಿಸುತ್ತೆ. ತನಿಖೆಗೆ ಅವಶ್ಯಕತೆ ಇದ್ದರೇ ಈ ಬಗ್ಗೆ ಸಿಎಂ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.