

ಬೆಂಗಳೂರು: ಮಾಜಿ ಮುಖ್ಯಮಂತ್ರಿ ವಿರುದ್ಧ ನಡೆದಿದೆಯೆನ್ನಲಾದ ಸ್ಟಿಂಗ್ ಆಪರೇಷನ್ಗೆ ಹಣಕಾಸು ಒದಗಿಸಿದ ಮೂಲದ ಬಗ್ಗೆ ತನಿಖೆ ನಡೆಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.
ಈ ಸ್ಟಿಂಗ್ ಆಪರೇಷನ್ ನಡೆಸಲು ಸುಮಾರು 10ರಿಂದ 15 ಕೋಟಿ ರೂ. ಖರ್ಚು ಮಾಡಲಾಗಿದೆ. “ಈ ಕಪ್ಪುಹಣ ಎಲ್ಲಿಂದ ಬಂತು? ಯಾರ ಹಣವನ್ನು ಲೂಟಿ ಮಾಡಲಾಗಿದೆ? ಈ ಎಲ್ಲ ವಿಚಾರಗಳು ಬಹಿರಂಗವಾಗಲು ತನಿಖೆ ನಡೆಸಬೇಕು. ತನಿಖೆಯ ಮೂಲಕ ಸತ್ಯ ಹೊರಬರಬೇಕು. ಇಲ್ಲದಿದ್ದರೆ ರಾಜ್ಯದ ಮಾಜಿ ಮುಖ್ಯಮಂತ್ರಿಗಳಿಗೆ ಅವಮಾನ ಮಾಡಿದಂತಾಗುತ್ತದೆ ಎಂದು ಹೇಳಿದ್ದಾರೆ.
ಗುಪ್ತಚರ ಇಲಾಖೆ ಮುಖ್ಯಮಂತ್ರಿಯವರ ಅಧೀನದಲ್ಲಿರುವುದರಿಂದ ಯಾವುದೇ ವಿಳಂಬವಿಲ್ಲದೆ ತನಿಖೆಗೆ ಆದೇಶಿಸಬೇಕು. ಈ ವಿಚಾರದಲ್ಲಿ ಕಾಂಗ್ರೆಸ್ನಲ್ಲಿ ಒಗ್ಗಟ್ಟಿಲ್ಲ. ಕಾಂಗ್ರೆಸ್ನ ಕೆಲ ನಾಯಕರು ಸಿದ್ದರಾಮಯ್ಯ ಅವರ ಪರವಾಗಿದ್ದರೆ, ಇನ್ನು ಕೆಲವರು ವಿರೋಧವಾಗಿದ್ದಾರೆ. ಮತ್ತೊಂದಷ್ಟು ನಾಯಕರು ತಟಸ್ಥ ನಿಲುವು ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಸ್ಟಿಂಗ್ ಆಪರೇಷನ್ ಮಾಡಿಸಿದವರು ಯಾರು ಎಂಬ ಸತ್ಯ ಹೊರಬಂದರೆ ದೊಡ್ಡ ಕೋಲಾಹಲವೇ ಸೃಷ್ಟಿಯಾಗಲಿದೆ. ಜನರಿಗೆ ಕಾಂಗ್ರೆಸ್ ಪಕ್ಷದ ಮೇಲಿನ ನಂಬಿಕೆ ಕಳೆದುಹೋಗಲಿದೆ. ಜನರೇ ಇಡೀ ಪಕ್ಷವನ್ನು ದೂರ ತಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯ ಅವರನ್ನು ಇಂತಹ ಪರಿಸ್ಥಿತಿಗೆ ಸಿಲುಕಿಸಬಾರದಿತ್ತು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ