ರೈತರಿಗೆ ಪರಿಹಾರ ನೀಡುವ ಇಚ್ಛಾಶಕ್ತಿ ಇಲ್ಲವೇ? ಖಜಾನೆ ಖಾಲಿಯಾಗಿದೆಯೇ? ಧೈರ್ಯವಿದ್ದರೆ ಸ್ಪಷ್ಟವಾಗಿ ಒಪ್ಪಿಕೊಳ್ಳಿ, ಷರತ್ತುಗಳ ಜಾಲ ಹೆಣೆದು ರೈತರನ್ನು ಸತಾಯಿಸಬೇಡಿ..!

ಪುಡಿಗಾಸಿನ ಪರಿಹಾರಕ್ಕೆ 17 ಷರತ್ತುಗಳು; ಕಾಂಗ್ರೆಸ್ ಸರ್ಕಾರದಲ್ಲಿ ರೈತರಿಗೆ ತಪ್ಪದ ಆಪತ್ತು. ರಾಜ್ಯದಲ್ಲಿ ಬರದ ಬೇಗೆಯಲ್ಲಿ ಅನ್ನದಾತರು ಕಂಗಾಲಾಗಿದ್ದಾರೆ. ಬೆಳೆ ನಷ್ಟದಿಂದ ಕಂಗೆಟ್ಟಿರುವ ರೈತರಿಗೆ ನೆರವಾಗಬೇಕಾದ ಕಾಂಗ್ರೆಸ್ ಸರ್ಕಾರ ಘೋಷಿಸಿರುವುದು ಕೇವಲ ರೂ.2,500 ಪರಿಹಾರ.
D.K. Shivakumar
ಸಿಎಂ ಡಿಕೆ.ಶಿವಕುಮಾರ್
Updated on: 

ಬೆಂಗಳೂರು: ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಲಾಗುತ್ತಿದೆ ಮತ್ತು ಅನಗತ್ಯ ಷರತ್ತುಗಳನ್ನು ವಿಧಿಸಿ ರೈತರನ್ನು ಸರ್ಕಾರಿ ಕಚೇರಿಗಳಿಗೆ ಅಲೆದಾಡುವಂತೆ ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ರೈತರಿಗೆ ಪರಿಹಾರ ನೀಡಲು ಸಾಧ್ಯವಾಗದಿದ್ದರೆ ಕ್ಷಮೆಯಾಚಿಸಿ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸವಾಲು ಹಾಕಿದ್ದಾರೆ.

ಪುಡಿಗಾಸಿನ ಪರಿಹಾರಕ್ಕೆ 17 ಷರತ್ತುಗಳು; ಕಾಂಗ್ರೆಸ್ ಸರ್ಕಾರದಲ್ಲಿ ರೈತರಿಗೆ ತಪ್ಪದ ಆಪತ್ತು. ರಾಜ್ಯದಲ್ಲಿ ಬರದ ಬೇಗೆಯಲ್ಲಿ ಅನ್ನದಾತರು ಕಂಗಾಲಾಗಿದ್ದಾರೆ. ಬೆಳೆ ನಷ್ಟದಿಂದ ಕಂಗೆಟ್ಟಿರುವ ರೈತರಿಗೆ ನೆರವಾಗಬೇಕಾದ ಕಾಂಗ್ರೆಸ್ ಸರ್ಕಾರ ಘೋಷಿಸಿರುವುದು ಕೇವಲ ರೂ.2,500 ಪರಿಹಾರ. ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಿರುವ ಈ ಅಲ್ಪ ಮೊತ್ತವನ್ನೂ ರೈತರ ಕೈಗೆ ತಲುಪಿಸಲು ಸರ್ಕಾರಕ್ಕೆ ಮನಸ್ಸಿಲ್ಲದಂತಿದೆ. ಗಾಯದ ಮೇಲೆ ಬರೆ ಎಳೆದಂತೆ, ಈ ಅಲ್ಪ ಪರಿಹಾರಕ್ಕೂ ಬರೋಬ್ಬರಿ 17 ಷರತ್ತುಗಳು! ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಸರ್ಕಾರವೇ ನಿಬಂಧನೆಗಳ ಹೆಸರಿನಲ್ಲಿ ಅವರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸುವುದು ಯಾವ ನ್ಯಾಯ? ಎಂದು ಕಿಡಿಕಾರಿದ್ದಾರೆ.

'ಫ್ರೂಟ್ಸ್‌' ತಂತ್ರಾಂಶ, ಆಧಾರ್ ಜೋಡಣೆ, ಫಾರ್ಮರ್ ಐಡಿ ಸೇರಿದಂತೆ ಹತ್ತು ಹಲವು ನಿಬಂಧನೆಗಳಿಂದ ಪರಿಹಾರ ಪಡೆಯುವುದೇ ರೈತರಿಗೆ ಸವಾಲಾಗಿರುವುದು ಸರ್ಕಾರದ ರೈತವಿರೋಧಿ ಧೋರಣೆಗೆ ಹಿಡಿದ ಕನ್ನಡಿ. ವಿಶೇಷ ಅಧಿವೇಶನದಲ್ಲಿ ರೈತರ ಪರವಾಗಿ ದೊಡ್ಡ ದೊಡ್ಡ ಮಾತುಗಳನ್ನಾಡಿದ ಕಾಂಗ್ರೆಸ್ ನಾಯಕರು, ಈಗ ಅನ್ನದಾತರಿಗೆ ಕೇವಲ ರೂ.2,500 ಪರಿಹಾರ ನೀಡುವ ವಿಚಾರದಲ್ಲೂ ಇಷ್ಟೊಂದು ಷರತ್ತುಗಳನ್ನು ವಿಧಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದ್ದಾರೆ.

ರೈತರ ಕಷ್ಟಕ್ಕೆ ಸ್ಪಂದಿಸಲಾಗದ ಸರ್ಕಾರಕ್ಕೆ ಷರತ್ತುಗಳ ಸರಮಾಲೆ ಕಟ್ಟುವ ಉತ್ಸಾಹವೇಕೆ? ಪರಿಹಾರ ನೀಡಲು ಇಷ್ಟೊಂದು ಅಡ್ಡಿಗಳು ಏಕೆ? ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರೇ, ತಕ್ಷಣವೇ ರೈತವಿರೋಧಿ ಷರತ್ತುಗಳನ್ನು ಸಡಿಲಗೊಳಿಸಿ, ಬರಪೀಡಿತ ರೈತರಿಗೆ ಸಮರ್ಪಕ ಪರಿಹಾರವನ್ನು ವಿಳಂಬವಿಲ್ಲದೆ ಬಿಡುಗಡೆ ಮಾಡಬೇಕು. ಅನ್ನದಾತರ ತಾಳ್ಮೆಯನ್ನು ಪರೀಕ್ಷಿಸುವುದನ್ನು ನಿಲ್ಲಿಸಬೇಕು. ಈ ನಿರ್ಲಕ್ಷ್ಯ ಹೀಗೆ ಮುಂದುವರೆದರೆ ಕಾಂಗ್ರೆಸ್ ಸರ್ಕಾರಕ್ಕೆ ಮತ್ತೊಮ್ಮೆ ಅನ್ನದಾತರ ಆಕ್ರೋಶದ ಬಿಸಿ ತಟ್ಟುವುದು ನಿಶ್ಚಿತ ಎಂದು ಎಚ್ಚರಿಸಿದ್ದಾರೆ.

D.K. Shivakumar
ರಾಹುಲ್ ಗಾಂಧಿ ಸುಳ್ಳು ಬಯಲು ಮಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರನ್ನೂ ಸಂಪುಟದಿಂದ ವಜಾ ಮಾಡ್ತೀರಾ..?

ಮತ್ತೊಂದು ಪೋಸ್ಟ್ ನಲ್ಲಿ ರೈತರಿಗೆ ಪರಿಹಾರ ವಿಳಂಬ ಮಾಡಲು ನಿಮ್ಮ ಸರ್ಕಾರಕ್ಕೆ ಇನ್ನೆಷ್ಟು ಕುಂಟು ನೆಪಗಳು ಬೇಕು? ಮುಂಗಾರು ಕೈಕೊಟ್ಟು ನಾಲ್ಕು ತಿಂಗಳು ಕಳೆದಿವೆ. ಇಷ್ಟು ದಿನ ರೈತರ ಬೆಳೆಹಾನಿಯ ಮಾಹಿತಿ ಸಂಗ್ರಹಿಸದೆ, ಪರಿಹಾರದ ಪಟ್ಟಿ ಸಿದ್ಧಪಡಿಸದೆ ನಿಮ್ಮ ಸರ್ಕಾರ ಏನು ಕತ್ತೆ ಕಾಯುತ್ತಿತ್ತಾ? ಎಂದು ಪ್ರಶ್ನಿಸಿದ್ದಾರೆ.

ಈಗ ಫ್ರೂಟ್ಸ್ ತಂತ್ರಾಂಶ, ಆಧಾರ್ ಲಿಂಕ್, ಬ್ಯಾಂಕ್ ಖಾತೆ, ಆರ್‌ಟಿಸಿ ಎಂದು ಹತ್ತಾರು ಷರತ್ತುಗಳನ್ನು ಮುಂದಿಟ್ಟು ರೈತರನ್ನು ಸರ್ಕಾರಿ ಕಚೇರಿಗಳಿಗೆ ಅಲೆದಾಡಿಸಲು ಹೊರಟಿದ್ದೀರಿ. ಬೆಳೆ ಕಳೆದುಕೊಂಡು ಕಂಗಾಲಾಗಿರುವ ರೈತರಿಗೆ ಪರಿಹಾರ ಕೊಡುವ ಬದಲು ಮತ್ತಷ್ಟು ಕಿರುಕುಳ ಕೊಟ್ಟು, ವಿಳಂಬ ಮಾಡಿ ಕಡೆಗೆ ಪರಿಹಾರವನ್ನೇ ಕೊಡದಿರುವುದೇ ನಿಮ್ಮ ಅಸಲಿ ಉದ್ದೇಶವೇ?

ಈ ಹಿಂದೆ ಬರ ಪರಿಹಾರ, ಬೆಳೆಹಾನಿ ಪರಿಹಾರ ವಿತರಣೆಯಲ್ಲಿನ ಎಡವಟ್ಟುಗಳಿಂದಲೂ ಪಾಠ ಕಲಿಯದ ನಿಮ್ಮ ಕಾಂಗ್ರೆಸ್ ಸರ್ಕಾರ, ಈ ಬಾರಿಯೂ ಅದೇ ತಪ್ಪುಗಳನ್ನು ಪುನರಾವರ್ತಿಸಲು ಹೊರಟಿದೆ. ತಂತ್ರಾಂಶದ ಸಮಸ್ಯೆ, ದಾಖಲೆಗಳ ಗೊಂದಲ ಇವೆಲ್ಲವನ್ನೂ ಸರಿಪಡಿಸುವುದು ಸರ್ಕಾರದ ಜವಾಬ್ದಾರಿ. ಅದನ್ನು ರೈತರ ತಲೆಗೆ ಕಟ್ಟುವುದು ನಿಮ್ಮ ಹೊಣೆಗೇಡಿತನಕ್ಕೆ ಸಾಕ್ಷಿ ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ ರೈತರಿಗೆ ಪರಿಹಾರ ನೀಡುವ ಇಚ್ಛಾಶಕ್ತಿ ಸರ್ಕಾರಕ್ಕಿಲ್ಲವೇ ಅಥವಾ ಖಜಾನೆ ಖಾಲಿಯಾಗಿದೆಯೇ ಎಂದು ಪ್ರಶ್ನಿಸಿರುವ ಅವರು, ಅರ್ಹ ರೈತರ ಪಟ್ಟಿಯನ್ನು ತಕ್ಷಣ ಅಂತಿಮಗೊಳಿಸಬೇಕು. ಫ್ರೂಟ್ಸ್ ತಂತ್ರಾಂಶ ಮತ್ತು ಆಧಾರ್ ಜೋಡಣೆಯ ತಾಂತ್ರಿಕ ಸಮಸ್ಯೆಗಳನ್ನು ಸರ್ಕಾರವೇ ಬಗೆಹರಿಸಬೇಕು. ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಪರಿಹಾರದ ಹಣವನ್ನು ವಿಳಂಬವಿಲ್ಲದೆ ಜಮೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ರೈತರ ಬೆವರು, ಶ್ರಮ ಮತ್ತು ಬೆಳೆ ನಷ್ಟಕ್ಕೆ ಪರಿಹಾರ ಕೇಳುವುದು ಭಿಕ್ಷೆಯಲ್ಲ; ಅದು ಅವರ ಹಕ್ಕು. ರೈತರ ತಾಳ್ಮೆಯನ್ನು ಪರೀಕ್ಷಿಸುವುದನ್ನು ನಿಲ್ಲಿಸಿ. ಪರಿಹಾರ ನೀಡಲು ಸಾಧ್ಯವಾಗದಿದ್ದರೆ ರೈತರ ಕ್ಷಮೆ ಕೇಳಿ ರಾಜೀನಾಮೆ ಕೊಟ್ಟು ಮನೆಗೆ ನಡೆಯಿರಿ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X