ಶೀಘ್ರ ವಾಟ್ಸಪ್ ನಿಂದಲೂ ಆನ್ ಲೈನ್ ಪೇಮೆಂಟ್ ಸೇವೆ ಆರಂಭ!

ಖ್ಯಾತ ಸಾಮಾಜಿಕ ಮೆಸೆಜಿಂಗ್ ಆ್ಯಪ್ ವಾಟ್ಸಪ್ ತನ್ನ ನೂತನ ಆನ್ ಲೈನ್ ಪೇಮೆಂಟ್ ಸೇವೆಯನ್ನು ಆರಂಭಿಸಿದ್ದು, ಭಾರತದ ಯುಪಿಐ ಸೇವೆಯ ಮುಖಾಂತರ ವ್ಯಕ್ತಿಯಿಂದ ವ್ಯಕ್ತಿಗೆ ಹಣ ವಿನಿಮಯ ಸೇವೆ ಆರಂಭಿಸಿದೆ.
ವಾಟ್ಸಪ್ ಪೇಮೆಂಟ್
ವಾಟ್ಸಪ್ ಪೇಮೆಂಟ್
ನವದೆಹಲಿ: ಖ್ಯಾತ ಸಾಮಾಜಿಕ ಮೆಸೆಜಿಂಗ್ ಆ್ಯಪ್ ವಾಟ್ಸಪ್ ತನ್ನ ನೂತನ ಆನ್ ಲೈನ್ ಪೇಮೆಂಟ್ ಸೇವೆಯನ್ನು ಆರಂಭಿಸಿದ್ದು, ಭಾರತದ ಯುಪಿಐ ಸೇವೆಯ ಮುಖಾಂತರ ವ್ಯಕ್ತಿಯಿಂದ ವ್ಯಕ್ತಿಗೆ ಹಣ ವಿನಿಮಯ ಸೇವೆ  ಆರಂಭಿಸಿದೆ.
ಈಗಾಗಲೇ ವಾಟ್ಸಪ್ ಈ ನೂತನ ಪೇಮೆಂಟ್ ಫೀಚರ್ ಅನ್ನು ಪರೀಕ್ಷೆ ಮಾಡಲಾಗುತ್ತಿದ್ದು, ವಾಟ್ಸಪ್ ಬಳಕೆದಾರರು ಈ ನೂತನ ಫೀಚರ್ ಮೂಲಕ ಹಣ ವಿನಿಮಯ ಮಾಡಿಕೊಳ್ಳಬಹುದಾಗಿದೆ. ಪ್ರಸ್ತುತ ವ್ಯಕ್ತಿಯಿಂದ ವ್ಯಕ್ತಿಗೆ ಹಣ  ವಿನಿಮಯ ಮಾಡುವ ಸೇವೆಯನ್ನು ವಾಟ್ಸಪ್ ಸಂಸ್ಥೆ ಪರೀಕ್ಷೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಇದರ ವ್ಯಾಪ್ತಿಯನ್ನು ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ. 
ಪ್ರಸ್ತುತ ವಾಟ್ಸಪ್ ಪೇಮೆಂಟ್ ಸೇವೆ ಆರಂಭಕ್ಕೆ ಸಿದ್ಧವಾಗಿದೆಯಾದರೂ, ಇದರ ಅಂತಿಮ ಹಂತದ ಪರೀಕ್ಷೆ ಇನ್ನೂ ಚಾಲ್ತಿಯಲ್ಲಿರುವುದರಿಂದ ಈ ಬಗ್ಗೆ ವಾಟ್ಸಪ್ ಸಂಸ್ಥೆ ಹೆಚ್ಚಾಗಿ ಪ್ರಚಾರ ಮಾಡುತ್ತಿಲ್ಲ ಎನ್ನಲಾಗಿದೆ. ಪ್ರಮುಖವಾಗಿ  ವಾಟ್ಸಪ್ ಪೇಮೆಂಟ್ ಆ್ಯಪ್ ಭಾರತದ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಮುಖಾಂತರ ಸೇವೆ ನೀಡಲಿದ್ದು, ಇದರಲ್ಲಿ ಭಾರತದ ಪ್ರಮುಖ ಬ್ಯಾಂಕ್ ಗಳಾದ ಎಸ್ ಬಿಐ, ಹೆಚ್ ಡಿಎಫ್ ಸಿ, ಎಕ್ಸಿಸ್ ಬ್ಯಾಂಕ್ ಖಾತೆಗಳನ್ನು  ಜೋಡಣೆ ಮಾಡಬಹುದಾಗಿದೆ.
ಬಳಕೆದಾರರು ತಮ್ಮ ಮೊಬೈಲ್ ನ ಮೂಲಕ ವಾಟ್ಸಪ್ ಪೇಮೆಂಟ್ ಆ್ಯಪ್ ಗೆ ಲಾಗಿನ್ ಆಗಬೇಕಿದ್ದು, ಬಳಿಕ ಮೊಬೈಲ್ ಸಂಖ್ಯೆ ನಮೂದಿಸಿ ಒಟಿಪಿ ಪಡೆಯಬೇಕಿದೆ. ಬಳಿಕ ಮೊಬೈಲ್ ಸಂಖ್ಯೆಯೊಂದಿಗೆ ಜೋಡಣೆಯಾಗಿರುವ  ಬ್ಯಾಂಕ್ ಗಳನ್ನು ಆಯ್ಕೆ ಮಾಡಿಕೊಂಡು ವಹಿವಾಟು ಆರಂಭಿಸಬಹುದಾಗಿದೆ ಎನ್ನಲಾಗಿದೆ.
ಪ್ರಸ್ತುತ ವಾಟ್ಸಪ್ ಪೇಮೆಂಟ್ ಆ್ಯಪ್ ಎಲ್ಲರಿಗೂ ಲಭ್ಯವಿಲ್ಲದೇ ಹೋದರು, ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಸ್ಕ್ರೀನ್ ಶಾಟ್ ಗಳು ಮಾತ್ರ ವೈರಲ್ ಆಗುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com