ಏನಿದು ಪೆಗಾಸಸ್ ಸ್ಪೈವೇರ್ ವಿವಾದ: ಆ ವರದಿಯಲ್ಲೇನಿದೆ? ವೈರಸ್ ಹೇಗೆ ಕಾರ್ಯನಿರ್ವಹಿಸುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಇಸ್ರೇಲ್‌ ಮೂಲದ ಸ್ಪೈ ವೇರ್ ಬಳಸಿ 40ಕ್ಕೂ ಹೆಚ್ಚು ಪತ್ರಕರ್ತರ, ರಾಜಕಾರಣಿಗಳ ಮೊಬೈಲ್‌ ಫೋನ್‌ ಗಳನ್ನು ಹ್ಯಾಕ್‌ ಮಾಡಲಾಗಿದೆ ಎಂಬ ವಿಸ್ತೃತ ಸರಣಿ ವರದಿಗಳನ್ನು ದಿ ವೈರ್ ಪ್ರಕಟಿಸಿದೆ. 
ಪೆಗಾಸಸ್ ಸ್ಪೈವೇರ್
ಪೆಗಾಸಸ್ ಸ್ಪೈವೇರ್

ನವದೆಹಲಿ: ಇಸ್ರೇಲ್‌ ಮೂಲದ ಸ್ಪೈ ವೇರ್ ಬಳಸಿ 40ಕ್ಕೂ ಹೆಚ್ಚು ಪತ್ರಕರ್ತರ, ರಾಜಕಾರಣಿಗಳ ಮೊಬೈಲ್‌ ಫೋನ್‌ ಗಳನ್ನು ಹ್ಯಾಕ್‌ ಮಾಡಲಾಗಿದೆ ಎಂಬ ವಿಸ್ತೃತ ಸರಣಿ ವರದಿಗಳನ್ನು ದಿ ವೈರ್ ಪ್ರಕಟಿಸಿದೆ. 

ದಿ ವೈರ್‌ ಜೊತೆಗೆ 16 ಅಂತಾರಾಷ್ಟ್ರೀಯ ಮಾಧ್ಯಮಗಳು ನಡೆಸಿದ ಕಾರ್ಯಾಚರಣೆಯಲ್ಲಿ ಈ ಮಾಹಿತಿಯು ಬಹಿರಂಗವಾಗಿದ್ದು, ಪೆಗಾಸಸ್‌ ಸ್ಪೈ ವೇರ್‌ ಬಳಸಿಕೊಂಡು ಅಪರಿಚಿತ ಏಜೆನ್ಸಿಯೊಂದು ಯಶಸ್ವಿಯಾಗಿ ಹ್ಯಾಕ್ ಮಾಡಿದೆ ಎಂದು ವರದಿ ತಿಳಿಸಿದೆ. 

ಬಹಿರಂಗಗೊಂಡ ಫೋನ್‌ ಸಂಖ್ಯೆಗಳಲ್ಲಿ ಕೆಲವು ಫೋನ್‌ ಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಿದ ಸಂದರ್ಭದಲ್ಲಿ ಪೆಗಾಸಸ್‌ ಸ್ಪೈ ವೇರ್‌ ಅಳವಡಿಕೆಗೊಂಡಿರುವುದಾಗಿ ತಿಳಿದು ಬಂದಿದೆ. ಪರೀಕ್ಷೆಗೆ ಬಳಸಿದ 37 ಫೋನ್‌ ಗಳಲ್ಲಿ 10 ಫೋನ್‌ ಗಳು ಭಾರತದ್ದಾಗಿದ್ದವು ಎಂದು ವರದಿ ತಿಳಿಸಿದೆ. ಪೆಗಾಸಸ್‌ ಅನ್ನು ಮಾರಾಟ ಮಾಡುವ ಇಸ್ರೇಲ್‌ ಮೂಲದ ಎನ್‌ಎಸ್‌ಒ ಗ್ರೂಪ್‌ ತನ್ನ ಗ್ರಾಹಕರ ಕುರಿತು ಮಾಹಿತಿ ನೀಡಲು ನಿರಾಕರಿಸಿದೆ. 

ಸೋರಿಕೆಯಾಗಿರುವ ಈ ಮಾಹಿತಿಗಳನ್ನು ದಿ ವೈರ್‌ ನೊಂದಿಗೆ ಅಮ್ನೆಸ್ಟಿ ಇಂಟರ್‌ ನ್ಯಾಷನಲ್‌, ಪಾರ್ಬಿಡನ್‌ ಸ್ಟೋರೀಸ್‌, ಲಿ ಮೊಂಡೆ, ದಿ ಗಾರ್ಡಿಯನ್‌, ವಾಷಿಂಗ್ಟನ್‌ ಪೋಸ್ಟ್‌, ದಿ ಝೀಟ್‌ ಸೇರಿದಂತೆ ಇತರ ಹತ್ತು ಮೆಕ್ಸಿಕನ್‌ ಮತ್ತು ಅರಬ್‌, ಯುರೋಪಿಯನ್‌ ಮಾಧ್ಯಮಗಳು ಜಂಟಿಯಾಗಿ ಬಹಿರಂಗಪಡಿಸಿದೆ. 

ಡೇಟಾಬೇಸ್‌ನಲ್ಲಿರುವವರ ಸಂಖ್ಯೆಯಲ್ಲಿ 40 ಕ್ಕೂ ಹೆಚ್ಚು ಪತ್ರಕರ್ತರು, ಮೂರು ಪ್ರಮುಖ ಪ್ರತಿಪಕ್ಷಗಳ ನಾಯಕರು, ಒಬ್ಬ ಸಾಂವಿಧಾನಿಕ ಪ್ರಾಧಿಕಾರ ಹುದ್ದೆಯಲ್ಲಿರುವವರು, ನರೇಂದ್ರ ಮೋದಿ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಇಬ್ಬರು ಮಂತ್ರಿಗಳು, ಭದ್ರತಾ ಸಂಸ್ಥೆಗಳ ಪ್ರಸ್ತುತ ಮತ್ತು ಮಾಜಿ ಮುಖ್ಯಸ್ಥರು  ಹಾಗೂ ಅಧಿಕಾರಿಗಳು, ಹಲವಾರು ಉದ್ಯಮಿಗಳು ಸೇರಿದ್ದಾರೆಂದು ತಿಳಿದು ಬಂದಿದೆ.

ಈ ಸ್ಪೈವೇರ್ ಹೇಗೆ ಕಾರ್ಯ ನಿರ್ವಹಿಸುತ್ತದೆ?
ಇತ್ತೀಚಿನ ದಿನಗಳಲ್ಲಿ ಫೋನ್ ಹ್ಯಾಕಿಂಗ್ ಸಾಮಾನ್ಯನಾಗಿ ಹೋಗಿದೆ. ವಿವಿಧ ಜಾಹಿರಾತು, ರಿಯಾಯಿತಿ, ವಿನಾಯಿತಿ, ಬಂಪರ್ ಆಫರ್ ಗಳ ಹೆಸರಿನಲ್ಲಿ ಬಳಕೆದಾರರನ್ನು ಹ್ಯಾಕರ್ ಗಳು ಸೆಳೆಯುತ್ತಾರೆ. ಹ್ಯಾಕ್ ಮಾಡಬೇಕಾದ ಫೋನ್ ಅನ್ನು ಹ್ಯಾಕರ್ ಗುರುತಿಸಿದ ನಂತರ, ಅವರು ಉದ್ದೇಶಿತ ಬಳಕೆದಾರರಿಗೆ ದುರುದ್ದೇಶಪೂರಿತ ವೆಬ್‌ಸೈಟ್ ಲಿಂಕ್ ಅನ್ನು ಕಳುಹಿಸುತ್ತಾರೆ. ಬಳಕೆದಾರರು ಅದರ ಮೇಲೆ ಕ್ಲಿಕ್ ಮಾಡಿದರೆ, ಫೋನ್‌ನಲ್ಲಿ ಈ ಸ್ಪೈ ವೇರ್ ಅನ್ನು ನಮಗೇ ಅರಿವಿಲ್ಲದಂತೆ ಸ್ಥಾಪಿಸಿಬಿಡುತ್ತಾರೆ. ಹ್ಯಾಕರ್ ಗಳ ಈ ಕೆಲಸಕ್ಕೆ ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ನಂತಹ ಅಪ್ಲಿಕೇಶನ್‌ಗಳು ರಹದಾರಿಯಾಗಿ ಮಾರ್ಪಟ್ಟಿದ್ದು,  ವಾಟ್ಸಪ್ ಮೂಲಕ ಮಾಡಿದ ಧ್ವನಿ ಕರೆಗಳಲ್ಲಿನ ಭದ್ರತಾ ದೋಷದ ಮೂಲಕವೂ ಇದನ್ನು ಸ್ಥಾಪಿಸಲಾಗುತ್ತದೆ. ವಾಸ್ತವವಾಗಿ, ಈ ಕರೆ ವಿಧಾನವು ಎಷ್ಟು ಪ್ರಬಲ ಮತ್ತು ರಹಸ್ಯವಾಗಿದೆ ಎಂದರೆ ಬಳಕೆದಾರರಿಗೆ ತಪ್ಪಿದ ಕರೆ (ಮಿಸ್ಡ್ ಕಾಲ್) ನೀಡುವ ಮೂಲಕ ಪೆಗಾಸಸ್ ಅನ್ನು ಫೋನ್‌ನಲ್ಲಿ ಸ್ಥಾಪಿಸಬಹುದು. ಒಮ್ಮೆ, ಸಾಫ್ಟ್‌ವೇರ್ ಅನ್ನು ಸ್ಥಾಪಿಸಿದಲ್ಲಿ ಅದು ಕರೆ ಲಾಗ್ ನಮೂದನ್ನು ಅಳಿಸುತ್ತದೆ. ಇದರಿಂದ ಬಳಕೆದಾರರಿಗೆ ಮಿಸ್ಟ್ ಕಾಲ್ ನ ಬಗ್ಗೆ ತಿಳಿಯುವುದೇ ಇಲ್ಲ. 

2019ರಲ್ಲೇ ಕೇಳಿತ್ತು ಪೆಗಾಸಸ್ ಹೆಸರು!
ಭಾರತದಲ್ಲಿ ನಾವು ಕೊನೆಯದಾಗಿ ಈ ಪೆಗಾಸಸ್ ಹೆಸರು ಕೇಳಿದ್ದು 2019 ರಲ್ಲಿ. ಕೆಲ ವಾಟ್ಸಾಪ್ ಬಳಕೆದಾರರು - ಪತ್ರಕರ್ತರು ಮತ್ತು ಕಾರ್ಯಕರ್ತರು ಸೇರಿದಂತೆ ಹಲವರು ಈ ಬಗ್ಗೆ ದೂರಿದ್ದರು. ಪ್ರಮುಖವಾಗಿ ಪೆಗಾಸಸ್ ಬಗ್ಗೆ ವಾಟ್ಸಪ್ ನಲ್ಲಿ ಬಂದ ಸಂದೇಶ ಆಗ ಭಾರಿ ಚರ್ಚೆಗೆ ಕಾರಣವಾಗಿತ್ತು. ಪ್ರಪಂಚದಾದ್ಯಂತದ ವಿವಿಧ ಸರ್ಕಾರಗಳು ಇದನ್ನು ಆಗಾಗ್ಗೆ ಬಳಸುತ್ತಿವೆ. ಪ್ರತಿ ಕೆಲವು ತಿಂಗಳಿಗೊಮ್ಮೆ ಈ ಪೆಗಾಸಸ್ ಫೋನ್ ಅನ್ನು ಹೇಗೆ ಹ್ಯಾಕ್ ಮಾಡುತ್ತದೆ ಎಂಬ ವರದಿಗಳು ಆಗಾಗ್ಗೆ ಬರುತ್ತಿರುತ್ತವೆ.

ಹ್ಯಾಕಿಂಗ್ ಸಂತ್ರಸ್ಥರ ಪಟ್ಟಿಯಲ್ಲಿ ಭಾರತೀಯ ಪತ್ರಕರ್ತರು
ಪ್ರಸ್ತುತ ಪ್ರಕಟವಾಗಿರುವ ವರದಿಯಲ್ಲಿ ಕೆಲವು ಪತ್ರಕರ್ತರ ಫೋನ್‌ಗಳು ಪೆಗಾಸಸ್ ಮಾಲ್‌ವೇರ್‌ನಿಂದ ಒಳಪಟ್ಟಿವೆ ಎಂದು ವಿಧಿವಿಜ್ಞಾನ ಪರೀಕ್ಷೆಗಳು ಖಚಿತಪಡಿಸಿವೆ ಎಂದು ತಿಳಿಸಿದೆ. ವರದಿಯಲ್ಲಿರುವಂತೆ ಹಿಂದೂಸ್ತಾನ್ ಟೈಮ್ಸ್, ದಿ ಹಿಂದೂ, ಇಂಡಿಯಾ ಟುಡೆ, ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ನೆಟ್‌ವರ್ಕ್ 18 ಸೇರಿದಂತೆ ದೇಶದ ಕೆಲವು ಸುದ್ದಿ ಸಂಸ್ಥೆಗಳಿಗೆ ಸೇರಿದ ಪತ್ರಕರ್ತರ ಫೋನ್ ಗಳಲ್ಲಿ ಪೆಗಾಸಸ್ ಸ್ಪೈವೇರ್ ಬಳಕೆ ಮಾಡಲಾಗಿದೆ. ಅಲ್ಲದೆ ಅವುಗಳಲ್ಲಿ ಹಲವು ರಕ್ಷಣಾ, ಗೃಹ ಸಚಿವಾಲಯ, ಚುನಾವಣಾ ಆಯೋಗ ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ವಿಷಯಗಳನ್ನು ಒಳಗೊಂಡಿವೆ ಎಂದು ಹೇಳಲಾಗಿದೆ. ದಿ ವೈರ್ ಸ್ಥಾಪಕ-ಸಂಪಾದಕರಾದ ಸಿದ್ಧಾರ್ಥ್ ವರದರಾಜನ್ ಮತ್ತು ಎಂ.ಕೆ.ವೇಣು ಅವರ ಫೋನ್‌ಗಳನ್ನು ಸಹ ಪೆಗಾಸಸ್ ಸ್ಪೈವೇರ್ ಹ್ಯಾಕ್ ಮಾಡಲಾಗಿದೆ. ಅಲ್ಲದೆ ಕೆಲ ಪ್ರಮುಖ ಪತ್ರಕರ್ತರಾದ ಶಿಶಿರ್ ಗುಪ್ತಾ, ಪ್ರಶಾಂತ್ ಝಾ, ರಾಹುಲ್ ಸಿಂಗ್, ಸಂದೀಪ್ ಉನ್ನಿತಾನ್, ಮನೋಜ್ ಗುಪ್ತಾ, ವಿಜೈತ ಸಿಂಗ್  ಮತ್ತು ಜೆ ಗೋಪಿಕೃಷ್ಣನ್ ಅವರ ಫೋನ್ ಗಳನ್ನು ಹ್ಯಾಕ್ ಮಾಡಿರುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ. 

ತಜ್ಞರ ಎಚ್ಚರಿಕೆ
ಪೆಗಾಸಸ್ ಸ್ಪೈವೇರ್ ಫೋನ್‌ನಲ್ಲಿದ್ದಾಗ, ಅದು ಉದ್ದೇಶಿತ ಬಳಕೆದಾರರ ಮೇಲೆ ಸಂಪೂರ್ಣವಾಗಿ ಕಣ್ಣಿಡಬಹುದು. ವಾಟ್ಸಾಪ್ ಮೂಲಕ ಮಾಡಿದಂತಹ ಎನ್‌ಕ್ರಿಪ್ಟೆಟ್ ಚಾಟ್‌ಗಳನ್ನೂ ಸಹ ಪೆಗಾಸಸ್‌ ಓದುತ್ತದೆ ಎಂದರೆ ಅದು ಇನ್ನೆಷ್ಟು ಪ್ರಬಲ ಸ್ಪೈವೇರ್ ಎಂದು ಯೋಚಿಸಬಹುದಾಗಿದೆ. ಪೆಗಾಸಸ್ ಸಂದೇಶಗಳನ್ನು ಓದಬಹುದು, ಕರೆಗಳನ್ನು ಟ್ರ್ಯಾಕ್ ಮಾಡಬಹುದು, ಅಪ್ಲಿಕೇಶನ್‌ಗಳಲ್ಲಿ ಬಳಕೆದಾರರ ಚಟುವಟಿಕೆಯನ್ನು ಟ್ರ್ಯಾಕ್ ಮಾಡಬಹುದು, ಸ್ಥಳ ಡೇಟಾವನ್ನು ಸಂಗ್ರಹಿಸಬಹುದು, ಫೋನ್‌ನಲ್ಲಿ ವೀಡಿಯೊ ಕ್ಯಾಮೆರಾಗಳನ್ನು ಪ್ರವೇಶಿಸಬಹುದು ಅಥವಾ ಅವರ ಮೈಕ್ರೊಫೋನ್ ಮೂಲಕ ಕೇಳಬಹುದು ಎಂದು ಭದ್ರತಾ ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.

ಕ್ಯಾಸ್ಪರ್ ಸ್ಕೈ ಹೇಳಿದ್ದೇನು?
ಈ ಪೆಗಾಸಸ್ ಸ್ಪೈವೇರ್ ಬಗ್ಗೆ ಖ್ಯಾತ ಆ್ಯಂಟಿವೈರಸ್ ತಂತ್ರಾಂಶ ತಯಾರಿಕಾ ಸಂಸ್ಥೆ ಕ್ಯಾಸ್ಪರ್ ಸ್ಕೈ ಮಾಹಿತಿ ನೀಡಿದ್ದು, 'ಪೆಗಾಸಸ್ ಮಾಡ್ಯುಲರ್ ಮಾಲ್ವೇರ್ ಆಗಿದೆ. ಗುರಿಯ ಸಾಧನವನ್ನು ಸ್ಕ್ಯಾನ್ ಮಾಡಿದ ನಂತರ, ಬಳಕೆದಾರರ ಸಂದೇಶಗಳು ಮತ್ತು ಮೇಲ್ ಗಳನ್ನು ಓದಲು, ಕರೆಗಳನ್ನು ಕೇಳಲು, ಸ್ಕ್ರೀನ್‌ ಶಾಟ್‌ಗಳನ್ನು ಸೆರೆಹಿಡಿಯಲು, ಲಾಗ್ ಒತ್ತಿದ ಕೀಲಿಗಳನ್ನು, ಬ್ರೌಸರ್ ಇತಿಹಾಸ, ಸಂಪರ್ಕಗಳನ್ನು ಹೊರಹಾಕಲು (ಕಾಂಟಾಕ್ಟ್ಸ್ ಶೇರ್) ಮತ್ತು ಮುಂತಾದವುಗಳಿಗೆ ಅಗತ್ಯವಾದ ಮಾಡ್ಯೂಲ್‌ಗಳನ್ನು ಇದು ಸ್ಥಾಪಿಸುತ್ತದೆ. ಮೂಲಭೂತವಾಗಿ, ಇದು ಸ್ಮಾರ್ಟ್ ಫೋನ್ ಪ್ರತಿಯೊಂದು ಅಂಶಗಳ ಮೇಲೂ ಕಣ್ಣಿಡಬಹುದು. ಪೆಗಾಸಸ್ ಎನ್‌ಕ್ರಿಪ್ಟ್ ಮಾಡಿದ ಆಡಿಯೊ ಸ್ಟ್ರೀಮ್‌ಗಳನ್ನು ಸಹ ಕೇಳಬಹುದು ಮತ್ತು ಎನ್‌ಕ್ರಿಪ್ಟ್ ಮಾಡಿದ ಸಂದೇಶಗಳನ್ನು ಓದಬಹುದು ಎಂಬುದು ಗಮನಾರ್ಹವಾಗಿದೆ. ಸಂದೇಶಗಳನ್ನು ಎನ್‌ಕ್ರಿಪ್ಟ್ ಮಾಡುವ ಮೊದಲು ಅದು ಕದಿಯಲಾಗುತ್ತಿತ್ತು. ಬೇರೆ ರೀತಿಯಲ್ಲಿ ಹೇಳುವುದಾದರೆ, ಇದು ಅಂತಿಮ ಕಣ್ಗಾವಲು  ಸಾಧನವಾಗಿದೆ. ಸರ್ಕಾರವು ಯಾರಾದರೂ, ಪೆಗಾಸಸ್ ಅಥವಾ ಈ ರೀತಿಯ ಯಾವುದನ್ನಾದರೂ ಕಣ್ಣಿಡಲು ಬಯಸಿದರೆ, ಅದು ಹೆಚ್ಚಾಗಿ ಅದರ ಆದ್ಯತೆಯ ಆಯ್ಕೆಯಾಗಿರುತ್ತದೆ ಎಂದು ಹೇಳಿದೆ.

ತಾನೇ ತಾನಾಗಿ ನಾಶವಾಗುತ್ತದೆ
ಇನ್ನು ಈ ಸ್ಪೈವೇರ್ ನ ವೀಕ್ ಪಾಯಿಂಟ್ ಅಥವಾ ದೌರ್ಬಲ್ಯ ಎಂದರೆ ಇದು ತನ್ನ ನಿಗದಿತ ಸರ್ವರ್ ಅನ್ನು ಸಂಪರ್ಕಿಸಲು ವಿಫಲವಾದರೆ ತಾನೇ ತಾನಾಗಿ ನಾಶವಾಗಿ ಬಿಡುತ್ತದೆ. ಈ ಬಗ್ಗೆ ಕ್ಯಾಸ್ಪರ್ ಸ್ಕೈ ತಜ್ಞರ ತಂಡ ಮಾಹಿತಿ ನೀಡಿದ್ದು, ಮಾಲ್ವೇರ್ ತನ್ನ ಕಮಾಂಡ್-ಅಂಡ್-ಕಂಟ್ರೋಲ್ (ಸಿ & ಸಿ) ಸರ್ವರ್‌ನೊಂದಿಗೆ 60 ದಿನಗಳಿಗಿಂತ ಹೆಚ್ಚು ಕಾಲ ಸಂವಹನ ನಡೆಸಲು ಸಾಧ್ಯವಾಗದಿದ್ದರೆ ಅಥವಾ ತಪ್ಪಾದ ಸಿಮ್ ಕಾರ್ಡ್‌ನೊಂದಿಗೆ ತಪ್ಪಾದ ಸಾಧನದಲ್ಲಿ ಸ್ಥಾಪಿಸಲಾಗಿದ್ದರೆ ಅದು ಸ್ವಯಂ-ನಾಶವಾಗುತ್ತದೆ. ಇದು ನಿಗದಿತ ಸಾಧನಗಳನ್ನೇ ಗುರಿಯಾಗಿಸಿಕೊಂಡು ಸಿದ್ಧಪಡಿಸಲಾದ ಸ್ಪೈ ವೇರ್ ಆಗಿದ್ದು, ತಪ್ಪಾದ ಸಾಧನಗಳಲ್ಲಿ ಇದು ಸ್ಥಾಪಿತವಾಗಿದ್ದರೆ ಅಥವಾ ಅದರ ಸರ್ವರ್ ಸಂಪರ್ಕ ಸಾಧ್ಯವಾಗದಿದ್ದರೇ ಅದು ಸ್ವಯಂ ನಾಶವಾಗುವಂತೆ ಸಿದ್ಧಪಡಿಸಲಾಗಿದೆ.
 
ವರದಿ ನಿರಾಕರಿಸಿದ ಕೇಂದ್ರ ಸರ್ಕಾರ
ಏತನ್ಮಧ್ಯೆ, ವಿಪಕ್ಷಗಳ ಆರೋಪವನ್ನು ಕೇಂದ್ರ ಸರ್ಕಾರ ನಿರಾಕರಿಸಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿರುವ ವಿದ್ಯುನ್ಮಾನ ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು, 'ನಿರ್ದಿಷ್ಟ ಜನರ ಮೇಲೆ ಸರ್ಕಾರದ ಕಣ್ಗಾವಲು ಕುರಿತ ಆರೋಪಗಳಿಗೆ ಯಾವುದೇ ದೃಢವಾದ ಆಧಾರ ಅಥವಾ ಸತ್ಯವಿಲ್ಲ. ಈ ಹಿಂದೆ, ರಾಜ್ಯಗಳು ವಾಟ್ಸ್‌ಆ್ಯಪ್‌ನಲ್ಲಿ ಪೆಗಾಸಸ್ ಅನ್ನು ಬಳಸುವುದರ ಬಗ್ಗೆ ಇದೇ ರೀತಿಯ ವಾದ ಮಂಡಿಸಿದ್ದವು. ಆ ವರದಿಗಳಿಗೆ ಯಾವುದೇ ವಾಸ್ತವಿಕ ಆಧಾರಗಳಿರಲಿಲ್ಲ ಮತ್ತು ನಿರ್ದಿಷ್ಟವಾಗಿ ಭಾರತೀಯ ಸುಪ್ರೀಂ ಕೋರ್ಟ್‌ನಲ್ಲಿ ವಾಟ್ಸಾಪ್ ಸೇರಿದಂತೆ ಎಲ್ಲಾ ಅರ್ಜಿದಾರರ ಆರೋಪಗಳನ್ನು ನಿರಾಕರಿಸಲಾಗಿತ್ತು. ಈ ವರದಿಯು ಭಾರತೀಯ ಪ್ರಜಾಪ್ರಭುತ್ವ ಮತ್ತು ಅದರ ಸಂಸ್ಥೆಗಳನ್ನು ಕೆಣಕುವ ಊಹೆಗಳು ಮತ್ತು ಉತ್ಪ್ರೇಕ್ಷೆಗಳ ಆಧಾರದ ಮೇಲೆ ಇದೇ ರೀತಿಯ ಪಿತೂರಿಯಾಗಿದೆ ಎಂದು ಎಲೆಕ್ಟ್ರಾನಿಕ್ಸ್, ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ತನ್ನ ಪ್ರತಿಕ್ರಿಯೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com