ಶಂಕರ್ ನಾಗ್ ಇದ್ದಿದ್ರೆ... ಆ ಕಥೇನೇ ಬೇರೆ!

'ಶಂಕರ್ ಇದ್ದಾಗ ಕಂಪ್ಯೂಟರ್, ಮೊಬೈಲ್ ಫೋನ್ ಈ ಥರದ ಯಾವ ಆಧುನಿಕ ತಂತ್ರಜ್ಞಾನವೂ ವ್ಯಾಪಕವಾಗಿರಲಿಲ್ಲ. ಹಾಗಾಗಿ ಈಗೇನಾದ್ರೂ ಶಂಕರ್ ಇದ್ದಿದ್ದರೆ...
ಶಂಕರ್ ನಾಗ್
ಶಂಕರ್ ನಾಗ್
Updated on: 

'ಶಂಕರ್ ಇದ್ದಾಗ ಕಂಪ್ಯೂಟರ್, ಮೊಬೈಲ್ ಫೋನ್ ಈ ಥರದ ಯಾವ ಆಧುನಿಕ ತಂತ್ರಜ್ಞಾನವೂ ವ್ಯಾಪಕವಾಗಿರಲಿಲ್ಲ. ಹಾಗಾಗಿ ಈಗೇನಾದ್ರೂ ಶಂಕರ್ ಇದ್ದಿದ್ದರೆ ಅವರನ್ನು ಹಿಡಿಯೋರೆ ಇರ್ತಾ ಇರಲಿಲ್ಲ' ಎಂದು ಜನರೆಲ್ಲ ಶಂಕರ್ ಇಲ್ಲದ 23 ವರ್ಷಗಳ ನಂತರವೂ ಮಾತಾಡುವುದರಲ್ಲಿ ಅಚ್ಚರಿ ಇಲ್ಲ! ಅಚ್ಚರಿಯ ವಿಷಯವೆಂದರೆ ಶಂಕರ್‌ನಾಗ್ ತೀರಿಕೊಂಡಾಗ ಇನ್ನೂ ಕೂಸುಗಳಾಗಿಯೇ ಇದ್ದ, ಕಣ್ಣು ಬಿಡದ ಯುವಕರೂ ಅದೇ ಮಾತಾಡುತ್ತಾರೆ!

ಇದು ಶಂಕರ್‌ನಾಗ್‌ರ ಬಗ್ಗೆ ಜನರಿಗಿರುವ 'ಅಚ್ಚಳಿಯದ ಪ್ರೇಮ', 'ಅಕಾರಣ ಪ್ರೇಮ'. ಶಂಕರ್‌ನಾಗ್‌ರ ಸಿನಿಮಾ ನೋಡಿರದಿದ್ದರೂ ನಮ್ಮ ಹೊಸ ಜನರೇಷನ್ನಿಗೆ ಶಂಕರ್ ಕುರಿತು 'ಜನ್ಮಜನ್ಮದ ಅನುಬಂಧ' ಇರುವುದು ಒಂದು 'ನಿಗೂಢ ರಹಸ್ಯ'. ಇಂಥ ಪ್ರೇಮಕ್ಕೆ ಚಿತ್ರರಂಗದ ಹಲವು ನಟರೇನೂ ಗುರಿಯಾಗಿಲ್ಲ. ಈ ನಿರ್ವ್ಯಾಜ ಪ್ರೇಮವನ್ನು ಎಲ್ಲರಿಂದಲೂ ಗಳಿಸಿದ್ದು ಶಂಕರ್ ಮಾತ್ರ. ಶಂಕರ್‌ನಾಗ್ ಎಂಬ ಮನುಷ್ಯ, ಪ್ರೇಮವನ್ನು, 'ನಲಿವ ಗುಲಾಬಿ ಹೂ'ವನ್ನು ನಮ್ಮ ಮೊಗಗಳಲ್ಲಿ ಬಿಟ್ಟುಹೋದ.

'ಪ್ರೇಮಿಗಳ ದಿನಾಚರಣೆ'ಯ ಈ ಸಂದರ್ಭದಲ್ಲಿ ಜನರ ನಿಷ್ಕಲ್ಮಷ ಪ್ರೇಮಕ್ಕೆ ಕಾರಣರಾದ ಶಂಕರ್‌ನಾಗ್‌ರ ಬಗ್ಗೆ ಬರೆಯದೆ ಹೋದರೆ ಹೇಗೆ?

ಹಿಂದೊಮ್ಮೆ ಅರುಂಧತಿ ನಾಗ್ ಹೇಳಿದಂತೆ, 'ನನ್ನ ಶಂಕರ್ ಇದ್ದಿದ್ರೆ ತುಂಬ ತುಂಬ ಕೆಲಸ ಮಾಡ್ತಿದ್ದ. ಕೇವಲ ಕರ್ನಾಟಕಕ್ಕಷ್ಟೇ ಅಲ್ಲ. ಇಡೀ ಭಾರತಕ್ಕೆ. ಅವ ಪೊಟೆನ್‌ಷಿಯಲ್ ಇರೋ ವ್ಯಕ್ತಿ, ಒಳ್ಳೆ ಮನುಷ್ಯ. ಅವ ಈಗಿಲ್ಲ ಅನ್ನೋದು ರಾಷ್ಟ್ರೀಯ ನಷ್ಟ. ನನ್ನ ವೈಯಕ್ತಿಕ ನಷ್ಟವೂ ಭರಿಸಲಾರದ್ದೇ. ಆ ಥರದ ವ್ಯಕ್ತಿಗಳು ಹುಟ್ಟಿ ಬರೋದೆ ಅಪರೂಪ'.

ಎಲ್ಲಿ ಜೀವನ ನಡೆವುದೋ ಅದೇ ನಮ್ಮೂರು!
ಉಡುಪಿಯ ಸಾಧಾರಣ ಕುಟುಂಬದಲ್ಲಿ ಜನಿಸಿದ ಶಂಕರ್. ಸಾಧಾರಣ ಶಾಲೆಯಲ್ಲಿ ಕಲಿತರು. ಬ್ಯಾಂಕಿನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಾ ತನ್ನ ಕಾಲೇಜಿನ ಫೀಸ್ ಕಟ್ಟಿ, ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಮುಂದೆ ಅವಕಾಶಗಳನ್ನು ತಾವೇ ಸೃಷ್ಟಿ ಮಾಡಿಕೊಂಡರು. ಆ ಶಕ್ತಿ ಅವರಲ್ಲಿತ್ತು.

ಯಾರು ಸ್ನೇಹದಿ ಬರುವರೋ ಅವರೆ ನಮ್ಮೋರು!
ಶಂಕರ್‌ಗೆ 19 ವರ್ಷ. ಅರುಂಧತಿನಾಗ್‌ರಿಗೆ ಆಗ 17. ಮುಂಬೈನಲ್ಲಿ ಕನಸುಗಳೊಂದಿಗೆ ಯೌವನವೂ ಗರಿಗೆದರಿದ್ದ ದಿನಗಳವು. ಶಂಕರ್ ತಮ್ಮ ಕಾಲೇಜಿನಿಂದ ನಾಟಕ ಮಾಡ್ತಾ ಇದ್ದರೆ, ಅರುಂಧತಿ ತಮ್ಮ ಕಾಲೇಜಿನಿಂದ ನಾಟಕ ಮಾಡ್ತಾ ಇದ್ದರು. ಎರಡೂ 'ಶತ್ರು' ಕಾಲೇಜುಗಳು! ಅದೇ ಕಾರಣಕ್ಕೆ ಪರಸ್ಪರ ಮಾತಾಡ್ತಾ ಇರಲಿಲ್ಲ.  ಶಂಕರ್ ಕಾಲೇಜಿಂದ ಅವರಿಗೆ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿ ಸಿಗುತ್ತಿತ್ತು. ಅರುಂಧತಿಗೆ ಅವರ ಕಾಲೇಜಿಂದ.

ಇಂದು ಏನು ಬೇಕು? ಅದರ ಚಿಂತೆ ಸಾಕು!
ಹಾಗಿರುವಾಗ ಅಲ್ಲಿನ ಇಂಡಿಯನ್ ನ್ಯಾಷನಲ್ ಥಿಯೇಟರ್‌ನವರು ಎಲ್ಲ ಬೆಸ್ಟ್ ಆ್ಯಕ್ಟರ್‌ಗಳನ್ನು ಸೇರಿಸಿ ಒಂದು ಗುಜರಾತಿ ನಾಟಕ ಮಾಡಿದ್ರು. ಆದ್ರೆ ಅವರಿಬ್ಬರಿಗೂ ಗುಜರಾತಿ ಭಾಷೆ ಬರುತ್ತಿರಲಿಲ್ಲ. ಆಗ ಅವರಿಬ್ಬರಿಗೆ ಗುಜರಾತ್ ಭಾಷೆ ಕಲಿಸಲು ಓರ್ವ ಮೇಷ್ಟ್ರನ್ನು ಗೊತ್ತು ಪಡಿಸಿದ್ದರು. ಭಾಷೆ ಕಲಿಯುವ ಸಲುವಾಗಿ ಇಬ್ಬರೂ ಒಟ್ಟು ಸೇರುತ್ತಿದ್ದರು. 17ನೇ ವಯಸ್ಸಿನಿಂದ 23ನೇ ವಯಸ್ಸಿನ ತನಕ ಇಬ್ಬರೂ ಉತ್ತಮ ಸ್ನೇಹಿತರಾಗೇ ಇದ್ದ ಕಾಲ. ಪರಸ್ಪರ ಹವ್ಯಾಸಗಳನ್ನು ಮೆಚ್ಚಿಕೊಳ್ಳುತ್ತ, ಅಲ್ಲಿ ಹಿಂದಿ, ಮರಾಠಿ, ಗುಜರಾತಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಆಗಲೇ ಶಂಕರ್‌ಗೆ ಕರ್ನಾಟಕದಿಂದ 'ಒಂದಾನೊಂದು ಕಾಲದಲ್ಲಿ' ಚಿತ್ರದಲ್ಲಿ ನಟಿಸಲು ಕರೆ ಬಂದಿತು.

ನಿಜಕ್ಕೂ ಅದೊಂದು ಅಮೃತಘಳಿಗೆ. ಅರುಂಧತಿಯವರೇ ಹೇಳುವಂತೆ 'ನಾನು ತುಂಬಾ ಬೋಲ್ಡ್ ಹಾಗೂ ವೈಲ್ಡ್ ಪರ್ಸನ್. ಆದ್ರೆ ಶಂಕರ್ ಹಾಗಿರಲಿಲ್ಲ. ಅವ ಸಾಧು, ಶಾಂತವಾಗಿರುವ ವ್ಯಕ್ತಿ. ಯಾವಾಗಲೂ ಒಂದು ಮೂಲೆಯಲ್ಲಿ ಕುಳಿತುಕೊಂಡು ಕ್ರಾಸ್‌ವರ್ಡ್ ಮಾಡ್ತಾ ಇದ್ದ. ಇಲ್ಲದಿದ್ದರೆ ಯಾವುದಾದರೂ ಪುಸ್ತಕ ಹಿಡಿದು ಕೂರುತ್ತಿದ್ದ. ಹೆಚ್ಚಿಗೆ ಮಾತಾಡ್ತಾ ಇರಲಿಲ್ಲ ಅವ. ನನ್ನ ಗಟ್ಟಿತನ ನನ್ನ ತಾಯಿಯ ಕೊಡುಗೆ. ಆಕೆ ನಮ್ಮನ್ನು ಮುದ್ದು ಮಾಡಿ ಬೆಳೆಸಲಿಲ್ಲ. ಬದುಕುವುದನ್ನು, ಕಷ್ಟಗಳನ್ನು ಎದುರಿಸುವುದನ್ನು ಕಲಿಸಿ ಬೆಳೆಸಿದರು'

ಈ ಬಗೆಯ ಬದುಕು ನಮದು ಎಂದೂ!
ಗೆಳತನ ಪ್ರೇಮವಾಗಿ ರೂಪಾಂತರವಾದಾಗ ಇಬ್ಬರೂ ಮದುವೆಯಾದೆವು. ಶಂಕರ್ ವೃತ್ತಿ ಪ್ರವೃತ್ತಿಯಲ್ಲಷ್ಟೇ ಅಲ್ಲ ಸಾಂಸಾರಿಕ ಜೀವನದಲ್ಲೂ ಯಶಸ್ವಿ ವ್ಯಕ್ತಿ. ನನಗೆ ಅದ್ಭುತ ಗಂಡನಾದ. ನನ್ನ ಮಗಳಿಗೆ ಉತ್ತಮ ಅಪ್ಪನೂ ಆದ. ಅವ ಸರಳತೆಯ ಪ್ರತೀಕವಾಗಿದ್ದ. ಈಗ ನನ್ನ ಮಗಳು ಅಷ್ಟೇ... ತುಂಬಾ ಸರಳ ಸ್ವಭಾವದ ಹುಡುಗಿ. ನಾನು ಶಂಕರ್‌ನಾಗ್ ಮಗಳು ಎಂಬ ಯಾವ ಹಮ್ಮುಬಿಮ್ಮು ಇಲ್ಲದೆ ಅಪ್ಪನ ಹೆಸರಿನ ವೈಭವವನ್ನು ತಲೆಗೇರಿಸಿಕೊಳ್ಳದೆ ಜೀವನ ಸಾಗಿಸುತ್ತಿದ್ದಾಳೆ. ನಾನು ಅಷ್ಟೇ.. ಎಲ್ಲ ಕಡೆ ಅವನ ಕಟೌಟ್ ಹಾಕಿಸಿ, ಮನೆ ತುಂಬ ಫೋಟೋ ಹಾಕಿಕೊಂಡು ಊಹೂಂ, ಹೀಗೆಲ್ಲ ಮಾಡೇ ಇಲ್ಲ. ಯಾಕೆ ಗೊತ್ತಾ? ನೆನೆಪು ಅನ್ನೋದು ಅಂತರಂಗದ ಆಲಾಪ. ಅದು ಹಿತವಾಗಿ ಸುಖವಾಗಿ ನಮ್ಮೊಳಗಿದ್ದರೇನೇ ಚೆಂದ. ನೆನಪು ನಿಧಾನಕ್ಕೆ ಬಹುಕಾಲ ಉರಿಯುವ ನಂದಾದೀಪದಂತೆ ಇರಬೇಕು'.

ನಾಳೆ ಎಂಬುವ ಚಿಂತೆ ಮನದಲ್ಲಿ!
ಶಂಕರ್ ಒಂದು ವಿಚಾರಕ್ಕೆ ಸೀಮಿತವಾದವರಲ್ಲ. ಬೆಂಗಳೂರಿಗೆ ಅಂಡರ್‌ಗ್ರೌಂಡ್ ರೈಲ್ವೆ ಮಾಡಬೇಕೆಂದು ಅವರು ಆಗಲೇ ಜಿಯಾಲಜಿಕಲ್ ಸರ್ವೆ ಮಾಡಿಸಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಿಗೆ ಸಲ್ಲಿಸಿದ್ದರು. ನಂದಿ ಬೆಟ್ಟಕ್ಕೆ 'ರೋಪ್‌ವೇ' ಮಾಡಿಸ್ತೇನೆ  ಅಂತಿದ್ದರು. ಹೆಲಿಕಾಪ್ಟರ್‌ನಿಂದ ಎಮರ್ಜೆನ್ಸಿ ಪೇಷೆಂಟ್‌ಗಳನ್ನು ಬೆಂಗಳೂರಿಗೆ ಚಿಕಿತ್ಸೆಗಾಗಿ ಕರೆತರುವ ಮೆಡಿಕಲ್ ನೆಟ್‌ವರ್ಕ್ ಹುಟ್ಟುಹಾಕಬೇಕೆಂದು ಕನಸಿತ್ತು. ರಾಯಚೂರು ಥರ್ಮಲ್ ಪ್ರಾಜೆಕ್ಟ್‌ನ ಬಳಿ ಒಂದು ಇಟ್ಟಿಗೆ ಕಾರ್ಖಾನೆ ಆರಂಭಿಸಬೇಕೆಂದುಕೊಂಡಿದ್ದೂ ಶಂಕರ್. ಥರ್ಮಲ್ ಪ್ರಾಜೆಕ್ಟ್‌ನಿಂದ ಹೊರಬರುತ್ತಿದ್ದ ತ್ಯಾಜ್ಯದಿಂದ ಇಟ್ಟಿಗೆ ತಯಾರಿಸುವುದು ಅವರ ಗುರಿಯಾಗಿತ್ತು. ಎಲ್ಲರಿಗೂ ಈ ಪರಿಕಲ್ಪನೆಗಳು ಅಚ್ಚರಿ ಹುಟ್ಟಿಸುತ್ತಿತ್ತು. ಶಂಕರ್ ತುಂಬ ಓದುತ್ತಿದ್ದರು, ಎಷ್ಟೇ ಒತ್ತಡವಿದ್ದರೂ ಓದುವುದನ್ನು ಬಿಡಲಿಲ್ಲ. ಹಾಗಾಗಿ ನಿರಂತರ ಹೊಸ ಆಲೋಚನೆಗಳು ಅವರಲ್ಲಿ ಹುಟ್ಟುತ್ತಿದ್ದವು. ಎಲ್ಲ ಕ್ಷೇತ್ರಗಳ ಆಗುಹೋಗುಗಳು ಅವರಿಗೆ ತಿಳಿದಿದ್ದವು. ಅದೇ ಕಾರಣಕ್ಕೆ ಯುವ ಜನಾಂಗಕ್ಕೆ ಶಂಕರ್ ಮಾದರಿ ವ್ಯಕ್ತಿಯಾಗಿದ್ದರು ಎಂದರೆ ತಪ್ಪಾಗಲಾರದೇನೋ.

ನೋಡಿ ಸ್ವಾಮಿ ನಾವಿರೋದು ಹೀಗೆ!
ಒಮ್ಮೆ ರಾಮಕೃಷ್ಣ ಹೆಗಡೆಯರು ಚುನಾವಣಾ ಪ್ರಚಾರಕ್ಕೆಂದು ಒಂದಷ್ಟು ಹಣ ಕೊಟ್ಟರು ಶಂಕರ್‌ಗೆ. ಶಂಕರ್ ಎಂಥ ನಿಸ್ಪ ೃಹ ವ್ಯಕ್ತಿ ಎಂದರೆ ಖರ್ಚು ಮಾಡಿ ಉಳಿಸಿದ ಹಣವನ್ನು ರಾಮಕೃಷ್ಣ ಹೆಗಡೆಯವರಿಗೇ ವಾಪಸ್ ಹಿಂದಿರುಗಿಸಿದರು. ಹೆಗಡೆಯವರು ತಕ್ಷಣ 'ನನ್ನ ಇಡೀ ರಾಜಕೀಯ ಜೀವನದಲ್ಲಿ ಯಾರೂ ಹಣ ಮಿಕ್ಕಿತು ಅಂತ ವಾಪಸ್ ತಂದು ಕೊಟ್ಟಿರಲಿಲ್ಲ' ಎನ್ನುತ್ತಾ ಅಭಿಮಾನದಿಂದ ಪ್ರಶಂಶಿಸಿದರು. ಇನ್ನೊಮ್ಮೆ ಎಸ್. ಆರ್.ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಕಾಲ. ಶಂಕರ್ ಬೆಂಗಳೂರಿನ ಮೆಟ್ರೋ ರೈಲು ಯೋಜನೆಗಾಗಿ ತನ್ನ ಸ್ವಂತ ಹಣವನ್ನು ಖರ್ಚುಮಾಡಿಕೊಂಡು ಪ್ಯಾರಿಸ್‌ಗೆ ಹೋದರು. ಅಲ್ಲಿನ ರೈಲ್ವೆ ಮುಖ್ಯಸ್ಥರನ್ನು ಭೇಟಿ ಮಾಡಿ ಯೋಜನೆಯ ವಿವರ ಕಲೆ ಹಾಕಿದರು. ಆಗ ಅರುಂಧತಿ ನಾಗ್ ಅವರನ್ನು ಪ್ರಶ್ನಿಸಿದರಂತೆ. 'ಶಂಕರ್ ಸ್ವಂತ ಹಣವನ್ನೇಕೆ ಇದಕ್ಕೆ ಖರ್ಚು ಮಾಡುತ್ತಿ? ನಿನಗೇನಾದರೂ ದುಡ್ಡು ಹೆಚ್ಚಾಗಿದೆಯಾ?' ಅಂತ. ಅದಕ್ಕವರು ಹೇಳಿದ್ದು ಒಂದೇ ಮಾತು. 'ಅರು, ನಾನು ಹೆಸರು, ಕೀರ್ತಿ, ಗೌರವ, ಸ್ಥಾನಮಾನ ಎಲ್ಲವನ್ನೂ ಗಳಿಸಿದ್ದು ಈ ಮಣ್ಣಿನಲ್ಲಿ. ಅದು ಎಲ್ಲವನ್ನೂ ನನಗೆ ಕೊಟ್ಟಿದೆ. ಈ ನನ್ನ ಕರ್ನಾಟಕಕ್ಕಾಗಿ ಇಷ್ಟೂ ಮಾಡಬಾರದೇನು?' ಎಂದು. ಅವರಿಬ್ಬರ ಮದುವೆಯ ನಂತರವೂ ಅರುಂಧತಿ-ಶಂಕರ್ ಹಲವಾರು ನಾಟಕಗಳಲ್ಲಿ ತೊಡಗಿಸಿಕೊಂಡರು. ಜಾಗತಿಕ ಮಟ್ಟದ ಒಂದು ಥಿಯೇಟರ್ ಕಟ್ಟಬೇಕು ಎಂಬುದು ಶಂಕರ್‌ರ ಕನಸಾಗಿತ್ತು. ಈಗ 'ರಂಗಶಂಕರ'ದ ಮೂಲಕ ಅದು ನನಸಾಗಿದೆ.

ಅರುಂಧತಿಯವರು ಹಿಂದೊಮ್ಮೆ ಹೇಳಿದಂತೆ, 'ಶಂಕರ್ ಕೇವಲ ನನ್ನ ಗಂಡ ಮಾತ್ರ ಆಗಿರಲಿಲ್ಲ. ಅದ್ಭುತ ಪ್ರೇಮಿ, ಗೆಳೆಯ ಎಲ್ಲವೂ ಆಗಿದ್ದ. ನನ್ನ ಪ್ರಕಾರ ಶಂಕರ್ ಅಂದ್ರೆ ಕ್ರಿಯಾಶೀಲತೆ. ಕ್ರಿಯಾಶೀಲತೆ ಅಂದ್ರೆ ಶಂಕರ್. ಹಾಗಾಗಿ ರಂಗಶಂಕರದಲ್ಲಾಗುತ್ತಿರುವ ಚಟುವಟಿಕೆಗಳಲ್ಲಿ, ನಾಟಕಗಳಲ್ಲಿ ನನ್ನ ಶಂಕರ್ ಇದ್ದಾನೆ. ಅಲ್ಲಿ ನಾ ನಿತ್ಯ ಕಾಣ್ತಿದ್ದೇನೆ ಅವನನ್ನ'.

'ನನ್ನ ಶಂಕರ್ ತಾನು ಯಾವುದೇ ಕೆಲಸ ಮಾಡುವ ಮುಂಚೆ ಬಂದು ನನ್ನಲ್ಲಿ ಮಾತನಾಡುತ್ತಿದ್ದ. ನನ್ನಲ್ಲಿ ಸಾಧ್ಯವಿದ್ದರೆ ನಾನು ಸಹಕರಿಸುತ್ತಿದ್ದೆ. ಇಲ್ಲವಾದರೆ ನೀ ಮುಂದುವರಿ ಶಂಕರ್, ನಿನ್ನ ಹಿಂದೆ ನಾನಿದ್ದೇನೆ ಎನ್ನುತ್ತಿದ್ದೆ. ಅವನ ಯಾವುದೇ ಯೋಜನೆಗಳಿಗೂ ನಾ ಅಡ್ಡಗಾಲು ಹಾಕುತ್ತಿರಲಿಲ್ಲ. ಏಕೆಂದರೆ ಅವ ಎಂದಿಗೂ ವೈಯಕ್ತಿಕ ಆಸೆ ಆಕಾಂಕ್ಷೆಗಳಿಗೆ ಮಹತ್ವ ನೀಡುತ್ತಿರಲಿಲ್ಲ. ಈಗ ನಾನಿರುವ ಮನೆ ಅವ ಕಟ್ಟಿದ್ದು. ಮಣ್ಣಿನ ಮನೆ. ಅವ ಹೋದ ಮೇಲೂ ಅದನ್ನು ಮಣ್ಣಿನ ಮನೆಯಾಗಿಯೇ ಉಳಿಸಿಕೊಂಡಿದ್ದೇನೆ. ಶಂಕರ್ ಬದುಕಿನ ಮೌಲ್ಯದ ಸಂಕೇತವಾಗಿದೆ'.

-ಡಾವೆಂಕಿ/ಗುಬ್ಬಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com