ಹಿರಿತಲೆಗಳ ಬಗ್ಗೆ ನಿರ್ಲಕ್ಷ್ಯಬೇಡ

ಇಂದಲ್ಲ ನಾಳೆ ಎಲ್ಲರಿಗೂ ವಯಸ್ಸಾಗುತ್ತದೆ. ಮುಖದಲ್ಲಿ ಸುಕ್ಕು, ಚರ್ಮದಲ್ಲಿ ನೆರಿಗೆ, ಕಣ್ಣು ಮಂದವಾಗುತ್ತಾ ನಿಸ್ಸಹಾಯಕರಾಗಿ ಬಿಡುವ ಹಂತವೂ ಬಂದೇ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಅಕ್ಟೋಬರ್ 1 : ಅಂತಾರಾಷ್ಟ್ರಿಯ ಹಿರಿಯ ನಾಗರಿಕರ ದಿನ. ಹಾಗಂದರೆ ಎಲ್ಲರಿಗೂ ಒಂದೊಂದು ದಿನಾಚರಣೆಗಳು ಇರುವಂತೆ ಹಿರಿಯ ನಾಗರಿಕರದ್ದೂ ಒಂದು ದಿನ ಎಂದು ಅಂದುಕೊಳ್ಳುತ್ತಾ ಸುಮ್ಮನಾಗಬೇಡಿ. ಯಾಕೆಂದರೆ ಇಂದಲ್ಲ ನಾಳೆ ಎಲ್ಲರಿಗೂ ವಯಸ್ಸಾಗುತ್ತದೆ. ಮುಖದಲ್ಲಿ ಸುಕ್ಕು, ಚರ್ಮದಲ್ಲಿ ನೆರಿಗೆ, ಕಣ್ಣು ಮಂದವಾಗುತ್ತಾ ನಿಸ್ಸಹಾಯಕರಾಗಿ ಬಿಡುವ ಹಂತವೂ ಬಂದೇ ಬರುತ್ತದೆ.
ಜಗತ್ತಿನ ಒಟ್ಟು ಜನಸಂಖ್ಯೆಯಲ್ಲಿ ಸುಮಾರು 600 ದಶ ಲಕ್ಷಕ್ಕಿಂತಲೂ ಹೆಚ್ಚು ಜನರು 60 ವಯಸ್ಸಿಗಿಂತ ಮೇಲ್ಪಟ್ಟವರಾಗಿದ್ದಾರೆ. 2025ರಲ್ಲಿ ಈ ಸಂಖ್ಯೆ ದುಪಟ್ಟಾಗುತ್ತದೆ.ಯ  2015ರಲ್ಲಿ ಇದು ಇನ್ನೂ  ಹೆಚ್ಚಾಗಲಿದೆ. ಆದ್ದರಿಂದಲೇ ಹಿರಿಯ ನಾಗರಿಕರ ಸಮಸ್ಯೆ ಅವರದ್ದು ಮಾತ್ರವಲ್ಲ ಸಮಾಜವನ್ನೂ ಬಾಧಿಸುತ್ತಿದೆ. ಹಿರಿಯರ ಸಮಸ್ಯೆಗಳನ್ನು ಆಲಿಸುವುದು, ಅದಕ್ಕೆ ಪರಿಹಾರ ಕಂಡುಕೊಳ್ಳುವುದು ನಮ್ಮ ಕರ್ತವ್ಯವಾಗಿರಬೇಕೇ ಹೊರತು ಅವರತ್ತ ತೋರುವ ಅನುಕಂಪವಾಗಿರಬಾರದು.
ತಮ್ಮ ಯೌವ್ವನ, ನಡು ವಯಸ್ಸಲ್ಲಿ ಕುಟುಂಬ ಮತ್ತು ನಮ್ಮ ಸಮಾಜಕ್ಕಾಗಿ ದುಡಿದವರೇ ಆಗಿದ್ದಾರೆ ನಾವು ವೃದ್ಧರು, ವೃದ್ಧೆಯರು ಎಂದು ಉಲ್ಲೇಖಿಸುವ ಈ ಹಿರಿಯರು. ಪ್ರತಿಯೊಬ್ಬ ಮನುಷ್ಯನೂ ವೃದ್ಧಾಪ್ಯದಲ್ಲಿ ಅಸಹಾಯಕತೆಯಿಂದ ಬಳಲುತ್ತಾನೆ. ಶರೀರದಲ್ಲಿನ ನಿಶ್ಶಕ್ತಿಯೂ ಇದಕ್ಕೆ ಕಾರಣವಾಗಿರುತ್ತದೆ. ಹೀಗಿರುವಾಗ ಅವರನ್ನು ಪ್ರೀತಿಯಿಂದ ನೋಡಬೇಕೇ ಹೊರತು ನಿರ್ಲಕ್ಷ್ಯದಿಂದಲ್ಲ.
ನಮ್ಮ ಸುತ್ತು ಮುತ್ತಲಿನ ಪರಿಸರವನ್ನೇ ಗಮನಿಸಿ. ಬಸ್ಸಲ್ಲಿ ನಮ್ಮ ಸೀಟು ಬಿಟ್ಟು ಕೊಡಿ ಎಂದು ಕೇಳುವ ವರೆಗೂ ಹಿರಿಯ ನಾಗರಿಕರ ಸೀಟು ಬಿಟ್ಟುಕೊಡಲು ನಾವು ಮನಸ್ಸು ಮಾಡುವುದಿಲ್ಲ. ಬಸ್ಸಲ್ಲಿ ಹಿರಿಯ ನಾಗರಿಕರಿಗಾಗಿಯೇ ಮೀಸಲು ಸೀಟು ಇದೆ. ಅದು ಅವರಿಗೆ ಬಿಟ್ಟು ಕೊಡಲೇ ಬೇಕು. ಅಷ್ಟು ಮಾತ್ರವಲ್ಲ, ಯಾರೇ ಹಿರಿಯರಾಗಿರಲಿ, ಮೀಸಲು ಸೀಟು ಅಲ್ಲದೇ ಇದ್ದರೂ ಅದನ್ನು ಬಿಟ್ಟು ಕೊಡುವ ಗುಣ ನಮ್ಮಲ್ಲಿರಬೇಕು. ಯಾಕೆಂದರೆ ಆ ಹಿರಿಯ ವ್ಯಕ್ತಿಗಳಿಗೆ ಬಸ್ಸಲ್ಲಿ ನಿಂತು ನೇತಾಡುತ್ತಾ ಪ್ರಯಾಣಿಸುವ ಶಕ್ತಿ ಇರುವುದಿಲ್ಲ. ನಾವ್ಯಾಕೆ ಸೀಟು ಬಿಟ್ಟು ಕೊಡಲಿ? ಹಿರಿಯ ನಾಗರಿಕರ ಸೀಟು ಅಲ್ಲ ಇದು ಎಂದು ಉಡಾಫೆಯ ನೋಟ ಬೀರುವ ಮುನ್ನ ಒಂದ್ಸಾರಿ ನಮ್ಮ ಅಪ್ಪ, ಅಮ್ಮ ಹಿರಿಯರ ಬಗ್ಗೆ ಯೋಚಿಸಿ. ಒಂದು ವೇಳೆ ಅವರು ಆ ಸ್ಥಾನದಲ್ಲಿರುತ್ತಿದ್ದರೆ ನೀವು ಹಾಗೆ ವರ್ತಿಸುತ್ತಿದ್ದಿರಾ? ನಿಮಗೆ ವಯಸ್ಸಾಗಿ ನೀವು ಈ ರೀತಿಯ ಉತ್ತರಗಳನ್ನು ಇನ್ನೊಬ್ಬರಿಂದ ಕೇಳಬೇಕಾಗಿ ಬಂದರೆ ನಿಮ್ಮ ಮನಸ್ಸಿಗೆ ನೋವಾಗುವುದಿಲ್ಲವೇ? 
ಈಗೀಗ ಅಪ್ಪ, ಅಮ್ಮ, ಮಕ್ಕಳು ಅನ್ನೋ ಪುಟ್ಟ ಸಂಸಾರವಿರುವಾಗ ಹಿರಿಯರ ಬಗ್ಗೆ ಆಸ್ಥೆಯೂ ಕಡಿಮೆಯಾಗುತ್ತಿದೆ. ದೇಶದಲ್ಲಿ ವೃದ್ಧಾಶ್ರಮಗಳ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಅನಾಥರಿಗೆ ಆಶ್ರಯ ನೀಡುವ ವೃದ್ಧಾಶ್ರಮಗಳು ಒಂದಡೆಯಾದರೆ, ಹಿರಿಯರನ್ನು ನೋಡಿಕೊಳ್ಳುವುದಕ್ಕೆ ಪುರುಸೋತ್ತಿಲ್ಲದ ಮಂದಿಯೂ ಅಪ್ಪ ಅಮ್ಮನನ್ನು ವೃದ್ಧಾಶ್ರಕ್ಕೆ ಕಳುಹಿಸಿಕೊಡುತ್ತಾರೆ. ಇಂತಿಷ್ಟು ಹಣ ಜಮಾ ಮಾಡಿದರೆ, ಅಲ್ಲಿ ಹಿರಿಯರು ಆರಾಮವಾಗಿರಬಹುದು. ನಮಗೆ ಅವರನ್ನು ನೋಡಿಕೊಳ್ಳಲು ಸಮಯವೆಲ್ಲಿದೆ. ಕೆಲಸ, ಮಕ್ಕಳು ಈ ಬ್ಯುಸಿ ಲೈಫ್ ನಲ್ಲಿ ಅವರತ್ತ ಗಮನ ಹರಿಸುವುದಕ್ಕೂ ಸಾಧ್ಯವಾಗುವುದಿಲ್ಲ. ಆದ್ದರಿಂದಲೇ ಅವರನ್ನು ಓಲ್ಡ್ ಏಜ್ ಸೆಂಟರ್‌ಗೆ ಸೇರಿಸಿದ್ದೇವೆ ಎಂದು ಹೇಳುವುದನ್ನು ಕೇಳಿದ್ದೇವೆ. ಏತನ್ಮಧ್ಯೆ , ಓಲ್ಡ್ ಏಜ್ ಸೆಂಟರ್ ನಲ್ಲಿ ಅವರ ಅಗತ್ಯಗಳನ್ನು ಪೂರೈಸುವ ಎಲ್ಲ ರೀತಿಯ ಸೌಕರ್ಯಗಳಿರುತ್ತವೆ. ಆದರೆ ಪ್ರೀತಿಯ ಮಕ್ಕಳು ಅವರೊಡನೆ ಇರುವುದಿಲ್ಲ!
ಮಕ್ಕಳಿಗಾಗಿ ಅವರೆಷ್ಟು ಕಷ್ಟ ಪಟ್ಟಿದ್ದಾರೆ ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಿ. ನೀವು ನಿದ್ದೆ ಮಾಡುವಾಗ ಅವರು ಎಚ್ಚರದಿಂದಿದ್ದರು. ನೀವು ಅಳುವಾಗ ಅತ್ತು, ನಗುವಾಗ ನಕ್ಕು ನಿಮ್ಮೊಡನೆ ಮಕ್ಕಳಾಗಿ ಬೆರೆತರು. ನೀವೆಲ್ಲೇ ಹೋದರೂ ಬಾಗಿಲಲ್ಲಿ ನಿಮಗಾಗಿ ಕಾಯುವ ಅಪ್ಪ ಅಮ್ಮ, ತಾವು ಉಣ್ಣದೇ ಇದ್ದರೂ ನಿಮ್ಮ ಹೊಟ್ಟೆ ತುಂಬಿದಾಗ ಸಂತೃಪ್ತರಾಗುತ್ತಿದ್ದರು. ಆದರೆ ಈಗ ಅವರಿಗೆ ವಯಸ್ಸಾಗಿದೆ. ಮೊದಲಿನಂತೆ ಲವಲವಿಕೆಯಾಗಲೀ ಚೈತನ್ಯವಾಗಲೀ ಅವರಲ್ಲಿಲ್ಲ. ಅವರಿಗೆ ಐಷಾರಾಮಿ ಬಂಗಲೆಯೋ, ಫೈವ್ ಸ್ಟಾರ್ ಹೋಟೆಲ್ ನ ಊಟವೋ ಬೇಡ. ಅವರಿಗೆ ಬೇಕಾಗಿರುವುದು ಹಿಡಿ ಪ್ರೀತಿ, ಒಂದು ಅಪ್ಪುಗೆ, ಹಿತವಾದ ಒಂದು ಸ್ಪರ್ಶ ಅಷ್ಟೇ. ಅದನ್ನು ನೀಡುವ ಉದಾರ ಮನಸ್ಸು ಎಲ್ಲರಲ್ಲೂ ಇರಲಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com