ಬಾಲಕನ ಸಾವು ತಂದ ನೋವು; 10 ಲಕ್ಷ ರೂ. ಸಂಗ್ರಹಿಸಿ ಗ್ರಾಮಕ್ಕೆ ಆಂಬ್ಯುಲೆನ್ಸ್ ಸೇವೆ ಆರಂಭಿಸಿದ ಬೆಳ್ತಂಗಡಿಯ ಯುವಕರು !

ಮಂಗಳೂರು: 14 ವರ್ಷದ ಬಾಲಕನ ಸಾವಿನಿಂದ ಮನನೊಂದು, ತುರ್ತು ಸಂದರ್ಭಗಳಲ್ಲಿ ಸಕಾಲಕ್ಕೆ ವೈದ್ಯಕೀಯ ನೆರವು ದೊರೆಯದಿರುವುದರಿಂದ ಬೇಸತ್ತ ಬೆಳ್ತಂಗಡಿ ತಾಲೂಕಿನ ಪಡ್ಮುಂಜ ಮಲೆಂಗಲ್ಲು ಗ್ರಾಮದ ಯುವಕರ ತಂಡವೊಂದು ತಮ್ಮ ಗ್ರಾಮಕ್ಕೆ ಆಂಬ್ಯುಲೆನ್ಸ್ ಸೇವೆ ಆರಂಭಿಸಲು ಹಣ ಸಂಗ್ರಹಿಸಿ ಬ್ಯಾಂಕ್ ಸಾಲವನ್ನೂ ಪಡೆದುಕೊಂಡಿದೆ.
ವರ್ಷಗಳಿಂದ ಈ ಗ್ರಾಮದ ನಿವಾಸಿಗಳು ಸುಮಾರು 15 ಕಿ.ಮೀ. ದೂರದಲ್ಲಿರುವ ಉಪ್ಪಿನಂಗಡಿ ಅಥವಾ ಉಜಿರೆಯಲ್ಲಿ ಲಭ್ಯವಿರುವ ಆಂಬ್ಯುಲೆನ್ಸ್ಗಳನ್ನೇ ಅವಲಂಬಿಸಬೇಕಾಗಿತ್ತು. ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ತಲುಪಲು ಆಂಬ್ಯುಲೆನ್ಸ್ ವಿಳಂಬವಾಗುತ್ತಿದ್ದುದರಿಂದ ಹಲವು ಬಾರಿ ಗಂಭೀರ ಸಮಸ್ಯೆ ಎದುರಾಗುತ್ತಿದ್ದವು.
ಎರಡು ತಿಂಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ 14 ವರ್ಷದ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟ ಘಟನೆ ಈ ಯುವಕರ ಪ್ರಯತ್ನಕ್ಕೆ ಪ್ರಮುಖ ಪ್ರೇರಣೆಯಾಯಿತು. ಇಂತಹ ಘಟನೆ ಮರುಕಳಿಸಬಾರದು ಹಾಗೂ ಗ್ರಾಮದ ಯಾವುದೇ ಕುಟುಂಬ ಆಂಬ್ಯುಲೆನ್ಸ್ಗಾಗಿ ಅಸಹಾಯಕವಾಗಿ ಕಾಯುವ ಪರಿಸ್ಥಿತಿ ಬರಬಾರದು ಎಂಬ ಉದ್ದೇಶದಿಂದ ಸ್ಥಳೀಯ ಯುವ ಸಂಘಟನೆ ನವಕೇಸರಿಯ ಸದಸ್ಯರು ಈ ನಿರ್ಧಾರ ಕೈಗೊಂಡರು.
ಹತ್ತಿರದಲ್ಲೇ ಆಂಬ್ಯುಲೆನ್ಸ್ ಲಭ್ಯವಿದ್ದಿದ್ದರೆ ಬಹುಶಃ ಆ ಬಾಲಕನ ಜೀವ ಉಳಿಸಬಹುದಿತ್ತು. ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತ, ವಿದ್ಯುತ್ ಅವಘಡ ಹಾಗೂ ಆತ್ಮಹತ್ಯೆ ಯತ್ನ ಸೇರಿದಂತೆ ತುರ್ತು ವೈದ್ಯಕೀಯ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ನಾವು ಗಮನಿಸಿದ್ದೇವೆ. ದೂರದ ಊರುಗಳಿಂದ ಬರುವ ಆಂಬ್ಯುಲೆನ್ಸ್ಗಳನ್ನು ಅವಲಂಬಿಸುವ ಸ್ಥಿತಿಯಲ್ಲಿ ನಮ್ಮ ಗ್ರಾಮ ಇರಬಾರದು ಎಂಬ ನಿರ್ಧಾರಕ್ಕೆ ಬಂದೆವು” ಎಂದು ನವಕೇಸರಿ ಸಂಘಟನೆಯ ಸದಸ್ಯ ಶರತ್ ಪಡ್ಮುಂಜ ಹೇಳುತ್ತಾರೆ.
ಇದರಿಂದ ಎಲ್ಲರೂ ಒಟ್ಟಾಗಿ ಸಂಘಟನೆ ಮಾಡಿ 10 ಲಕ್ಷ ರೂ. ವೆಚ್ಚದ ಸಮುದಾಯ ಯೋಜನೆಯಾಗಿ ರೂಪುಗೊಂಡಿತು. ಕೃಷಿ ಮತ್ತು ವಿವಿಧ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ನವಕೇಸರಿ ಸಂಘಟನೆಯ 20ಕ್ಕೂ ಹೆಚ್ಚು ಸದಸ್ಯರು ತಮ್ಮ ಸ್ವಂತ ಹಣದಿಂದ 7 ಲಕ್ಷ ರೂ. ಸಂಗ್ರಹಿಸಿದರು. ಉಳಿದ ಹಣದ ಕೊರತೆ ನೀಗಿಸಲು ಸಂಘಟನೆಯ ಸದಸ್ಯರೊಬ್ಬರು 3 ಲಕ್ಷ ರೂ. ಬ್ಯಾಂಕ್ ಸಾಲ ಪಡೆದಿದ್ದು, ಈ ಸಾಲವನ್ನು ಎಲ್ಲ ಸದಸ್ಯರು ಒಟ್ಟಾಗಿ ಮರುಪಾವತಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


